ಆರ್‌ಬಿಐಗೆ ಮತ್ತೊಮ್ಮೆ ಪತ್ರ: ಸಿದ್ದರಾಮಯ್ಯ

Update: 2017-06-20 15:37 GMT

ಬೆಂಗಳೂರು, ಜೂ.20: ಕೇಂದ್ರ ಸರಕಾರವು ಗರಿಷ್ಠ ಮುಖಬೆಲೆಯ ನೋಟುಗಳ ಮಾನ್ಯತೆಯನ್ನು ರದ್ದುಗೊಳಿಸಿದ ಬಳಿಕ ರಾಜ್ಯದ ಡಿಸಿಸಿ ಬ್ಯಾಂಕುಗಳಲ್ಲಿ ಸಂಗ್ರಹಿಸಲಾಗಿರುವ 473 ಕೋಟಿ ರೂ.ಗಳ ಬಗ್ಗೆ ಶೀಘ್ರದಲ್ಲೆ ತೀರ್ಮಾನ ಕೈಗೊಳ್ಳುವಂತೆ ಆರ್‌ಬಿಐ ಗವರ್ನರ್ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಶೂನ್ಯವೇಳೆಯಲ್ಲಿ ಈ ಸಂಬಂಧ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಈ ಹಣದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ತೀರ್ಮಾನ ಕೈಗೊಳ್ಳಬೇಕು. ಸುಮಾರು 473 ಕೋಟಿ ರೂ.ಗಳು ಡಿಸಿಸಿ ಬ್ಯಾಂಕುಗಳಲ್ಲಿ ಜಮೆಯಾಗಿದೆ ಎಂದರು.

ಕೇಂದ್ರ ಸರಕಾರವು ನವೆಂಬರ್ 8ರಂದು ನೋಟುಗಳ ಮಾನ್ಯತೆಯನ್ನು ರದ್ದುಗೊಳಿಸಿ, ಡಿಸೆಂಬರ್ 30ರವರೆಗೆ ಬ್ಯಾಂಕುಗಳಿಗೆ ಜಮೆ ಮಾಡಲು ಕಾಲಾವಕಾಶ ನೀಡಿತ್ತು. ಆದರೆ, ಏಕಾಏಕಿ ನವೆಂಬರ್ 14ರಂದು ಡಿಸಿಸಿ ಬ್ಯಾಂಕುಗಳಲ್ಲಿ ಹಣವನ್ನು ಜಮೆ ಮಾಡುವುದನ್ನು ಸ್ಥಗಿತಗೊಳಿಸಿದ ಪರಿಣಾಮ, ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರು ತೊಂದರೆಗೆ ಸಿಲುಕಿಕೊಂಡರು ಎಂದು ಅವರು ಹೇಳಿದರು.

ಈ ಹಣದ ಪಾರದರ್ಶಕತೆಗೆ ಸಂಬಂಧಿಸಿದಂತೆ ನಬಾರ್ಡ್‌ನಿಂದ ಆರ್‌ಬಿಐ ಪರಿಶೀಲನೆ ನಡೆಸಿತು. ಡಿಸಿಸಿ ಬ್ಯಾಂಕುಗಳಲ್ಲಿ ಜಮೆಯಾಗಿರುವ ಹಣದಲ್ಲಿ ಯಾವುದೆ ರೀತಿಯ ಅಕ್ರಮವಾಗಿಲ್ಲ ಎಂದು ನಬಾರ್ಡ್ ವರದಿಯನ್ನು ನೀಡಿದೆ. ಆದರೂ, ಆರ್‌ಬಿಐ ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ಡಿಸಿಸಿ ಬ್ಯಾಂಕುಗಳು ಪ್ರತಿ ತಿಂಗಳು ಸುಮಾರು 18-20 ಕೋಟಿ ರೂ.ಗಳಷ್ಟು ಬಡ್ಡಿಯನ್ನು ಪಾವತಿಸಬೇಕಿದೆ. ಈಗಾಗಲೆ 6-7 ತಿಂಗಳಾಗಿದೆ. ಯಾವುದೆ ಕ್ರಮ ಕೈಗೊಳ್ಳಲಾಗಿಲ್ಲ. ಮತ್ತೊಮ್ಮೆ ಆರ್‌ಬಿಐ ಗವರ್ನರ್ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದು ಚರ್ಚೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಿವಾನಂದ ಪಾಟೀಲ್, ಡಿಸಿಸಿ ಬ್ಯಾಂಕುಗಳನ್ನು ಉಳಿಸಲು ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಆರ್‌ಬಿಐ ಗವರ್ನರ್ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಮುಖ್ಯಮಂತ್ರಿ ಬರೆದಿರುವ ಪತ್ರದ ಪ್ರತಿಗಳು, ನಬಾರ್ಡ್ ನೀಡಿರುವ ಪರಿಶೀಲನಾ ವರದಿಯನ್ನು ತಮಗೆ ನೀಡಿದರೆ, ಕೇಂದ್ರದ ಮೇಲೆ ಒತ್ತಡ ಹೇರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News