ವಿಧೇಯಕಗಳ ಅಂಗೀಕಾರ

Update: 2017-06-20 15:43 GMT

ಬೆಂಗಳೂರು, ಜೂ.20: 2017ನೆ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ (ತಿದ್ದುಪಡಿ) ವಿಧೇಯಕ, ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ(ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು(ತಿದ್ದುಪಡಿ) ವಿಧೇಯಕವನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ಕರ್ನಾಟಕದ ನಿವಾಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ಒದಗಿಸುವ ಸಂಬಂಧ ಮಂಡಿಸಲಾದ ವಿಧೇಯಕಕ್ಕೆ ಕೆಲ ತಿದ್ದುಪಡಿಗಳೊಂದಿಗೆ ಅಂಗೀಕರಿಸಲಾಯಿತು. ರಾಜ್ಯ ಸರಕಾರವು ಕಾನೂನು ವಿದ್ಯಾಲಯದಲ್ಲಿ ರಾಜ್ಯದ ನಿವಾಸಿ ವಿದ್ಯಾರ್ಥಿಗಳಿಗೆ ಶೇ.30ಕ್ಕಿಂತ ಕಡಿಮೆ ಇಲ್ಲದ ಸೀಟುಗಳನ್ನು ಮೀಸಲಿರಿಸಲು ವಿಧೇಯಕವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಂಡಿಸಿದರು.

ಆದರೆ, ರಾಜಸ್ಥಾನದಲ್ಲಿ ಶೇ.40, ಉತ್ತರಪ್ರದೇಶದಲ್ಲಿ ಶೇ.50, ಮಧ್ಯಪ್ರದೇಶದಲ್ಲಿ ಶೇ.40, ತಮಿಳುನಾಡಿನಲ್ಲಿ ಶೇ.50ರಷ್ಟು ಸೀಟುಗಳು ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿರುವಾಗ ನಮ್ಮಲ್ಲೂ ಶೇ.50ರಷ್ಟು ಮೀಸಲಾತಿ ಪ್ರಮಾಣ ನಿಗದಿ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಇನ್ನಿತರರು ಮಾಡಿದ ಆಗ್ರಹಕ್ಕೆ ಅವರು ಮಣಿದರು.

ಈ ಸಂಬಂಧ ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿದ ಬಸವರಾಜ ರಾಯರಡ್ಡಿ, ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವುದು ಹಾಗೂ ಸಿಇಟಿ ನಿಯಮಾವಳಿಗಳನ್ವಯ ವಿದ್ಯಾರ್ಥಿಯು 7 ವರ್ಷಗಳಿಗೆ ಕಡಿಮೆ ಇಲ್ಲದಂತೆ ರಾಜ್ಯದಲ್ಲಿರುವ ಮಾನ್ಯತೆ ಪಡೆದ ಯಾವುದಾದರೂ ಒಂದು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿರಬೇಕು ಎಂದು ಪ್ರಕಟಿಸಿದರು.

ವೈದ್ಯಕೀಯ ಕೋರ್ಸುಗಳ ವಿಧೇಯಕ: ಖಾಯಂ ನೋಂದಣಿಯನ್ನು ನೀಡುವ ಮೊದಲು ವೈದ್ಯಕೀಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಬಳಿಕ, ತರಬೇತಿ ಪರಿಕಲ್ಪನೆಯನ್ನು ಬಿಟ್ಟು, ಕಡ್ಡಾಯ ಗ್ರಾಮೀಣ ಸೇವೆಯನ್ನು ಮಾತ್ರ ಉಳಿಸಿಕೊಳ್ಳುವ ಹಾಗೂ ಗ್ರಾಮೀಣ ಸೇವೆಗೆ ಒಳಗಾಗದಿರುವ ಅಂತಹ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಪದವಿ ಪ್ರದಾನ ಮಾಡುವುದರ ಮೇಲಿನ ನಿರ್ಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳುವ ಉದ್ದೇಶದಿಂದ ಮಂಡಿಸಲಾದ ರಾಜ್ಯ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

ಗಂಗೂಬಾಯಿ ಹಾನಗಲ್ ವಿವಿ: ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ದಲ್ಲಿ ಇರುವಂತೆ ಕುಲಪತಿಗಳ ವಯೋಮಿತಿಯನ್ನು ಅನುಸರಿಸುವುದಕ್ಕಾಗಿ ಕುಲಪತಿಯ ಹುದ್ದೆಯನ್ನು ಹೊಂದಲು ಗರಿಷ್ಠ ವಯೋಮಿತಿಯನ್ನು ಯುಜಿಸಿ ನಿಯಮಾವಳಿಗಳಂತೆ 67ಕ್ಕೆ ಹೆಚ್ಚಿಸುವುದು ಹಾಗೂ ರಾಜ್ಯ ಲೆಕ್ಕ ಪತ್ರಗಳ ಇಲಾಖೆಯ ನಿಯಂತ್ರಕರ ಪದನಾಮವನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರಗಳ ಪ್ರಧಾನ ನಿರ್ದೇಶಕ ಎಂದು ಬದಲಾಯಿಸುವ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿತು.

ಉನ್ನತ ಶಿಕ್ಷಣ ಪರಿಷತ್: ಉಪಾಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ನೇಮಕಾತಿ ಹಾಗೂ ಅವರ ವೇತನಗಳು ಮತ್ತು ಭತ್ತೆಗಳಿಗೆ ಸಂಬಂಧಿಸಿದ ಕೆಲವು ಉಪಬಂಧಗಳಲ್ಲಿನ ಅಸ್ಪಷ್ಟತೆಯನ್ನು ತೊಡೆದು ಹಾಕಲು ಮಂಡಿಸಿದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News