×
Ad

ವಿವಿಗಳಲ್ಲಿನ ಭ್ರಷ್ಟಾಚಾರ ಬಯಲುಗೊಳಿಸಿದ ರಾಯರಡ್ಡಿ

Update: 2017-06-20 21:52 IST

ಬೆಂಗಳೂರು, ಜೂ.20: ಕಳೆದ 10 ವರ್ಷಗಳಲ್ಲಿ 9 ಕುಲಪತಿಗಳು ಅಮಾನತ್ತು ಆಗಿದ್ದಾರೆ. 7 ಜನ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸ್ವಜನಪಕ್ಷಪಾತ, ಭ್ರಷ್ಟಾಚಾರ ಯಾವ ಮಟ್ಟದಲ್ಲಿದೆ ಎಂಬುದು ಊಹಿಸಿಕೊಳ್ಳಬಹುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ ಹೇಳಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ 2017ನೆ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ ಮಂಡಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಸದನದ ಗಮನ ಸೆಳೆದರು. ಶಿವಮೊಗ್ಗ ವಿಶ್ವವಿದ್ಯಾಲಯದ ಸಹ್ಯಾದ್ರಿ ಕಾಲೇಜಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 2009-10ನೆ ಸಾಲಿನಲ್ಲಿ 4.65 ಕೋಟಿ ರೂ.ಗಳಿಗೆ ಟೆಂಡರ್ ಆಗಿತ್ತು. ಆದರೆ, ವಿವಿ ಪಾವತಿಸಿರುವುದು 11.65 ಕೋಟಿ ರೂ.ಗಳು. ಇನ್ನೂ 2 ಕೋಟಿ ರೂ.ಗಳ ಬಿಲ್ ಬಾಕಿಯಿರುವುದಾಗಿ ತಿಳಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಮುದ್ದೇನಹಳ್ಳಿಯಲ್ಲಿರುವ ವಿಟಿಯುನಲ್ಲಿ ಮೊದಲ ಹಂತದ ಕಾಮಗಾರಿಗೆ ಟೆಂಡರ್ ಆಗಿರುವುದು 49 ಕೋಟಿ ರೂ.ಗಳಿಗೆ ಶೇ.20ರಷ್ಟು ಹೆಚ್ಚುವರಿ ಮೊತ್ತ ಸೇರಿಸಿದರೆ 60 ಕೊಟಿ ರೂ.ಆಗುತ್ತದೆ. ಆದರೆ, ವಿವಿ ಪಾವತಿಸಿರುವುದು 84 ಕೋಟಿ ರೂ.ಗಳು ಎಂದು ಅವರು ಹೇಳಿದರು.

ಎರಡನೆ ಹಂತದ ಕಾಮಗಾರಿಗೆ ಟೆಂಡರ್ ಆಗಿರುವುದು 101 ಕೋಟಿ ರೂ.ಗಳಿಗೆ. ಶೇ.19ರಷ್ಟು ಹೆಚ್ಚುವರಿ ಮೊತ್ತ ಸೇರಿಸಿದರೆ 120 ಕೋಟಿ ರೂ.ಗಳಾಗುತ್ತದೆ. ಆದರೆ, ವಿವಿ ಪಾವತಿಸಿರುವುದು 140 ಕೋಟಿ ರೂ.ಗಳು. ಇನ್ನು 44 ಕೋಟಿ ರೂ.ಗಳ ಬಿಲ್ ಬಾಕಿಯಿದೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಕುಲಪತಿಗಳು, ಕುಲ ಸಚಿವರು ವೈಭವಯುತ ಜೀವನ ನಡೆಸುತ್ತಿದ್ದಾರೆ. ಒಂದು ಶೌಚಾಲಯ ನವೀಕರಣಕ್ಕೆ 5 ಲಕ್ಷ ರೂ.ಗಳು, ತುಂಡು ತುಂಡು ಕಾಮಗಾರಿಗಳಿಗೆ 5 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.

ಚರ್ಚೆಯಲ್ಲಿ ಬಿಜೆಪಿ ಸದಸ್ಯರಾದ ಸುರೇಶ್‌ಗೌಡ, ಸಿ.ಟಿ.ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News