ದಸರಾ ಮಾದರಿಯಲ್ಲಿ ಕೆಂಪೇಗೌಡರ ಜಯಂತಿ
ಬೆಂಗಳೂರು,ಜೂ.20: ರಾಜ್ಯ ಸರಕಾರದ ವತಿಯಿಂದ ಜೂ.27ರಂದು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸಂಭ್ರಮದ ಹಬ್ಬವಾಗಿ ಆಚರಣೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
ರಾಜ್ಯ ಸರಕಾರದ ವತಿಯಿಂದ ಕೆಂಪೇಗೌಡ ದಿನಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ ರಾಜ್ಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡರ ಆದರ್ಶ ಹಾಗೂ ಅವರ ವೌಲ್ಯಗಳನ್ನು ನಾಡಿನ ಜನರಿಗೆ ಪರಿಚುಸುವ ದೃಷ್ಟಿಯಲ್ಲಿ ಕಾರ್ಯಕ್ರಮ ನಡೆಯಬೇಕೆ ಹೊರತು ಒಕ್ಕಲಿಗ ಜನಾಂಗದ ಶಕ್ತಿ ಪ್ರದರ್ಶನಕ್ಕಲ್ಲ. ಸಮುದಾಯಕ್ಕೆ ಧಕ್ಕೆ ಬಂದಾಗ ಸಂಘಟಿತರಾಗಿ ಹಿಂದೆ ಹೋರಾಟ ಮಾಡಿದ್ದುಂಟು. ಮುಂದೆಯೂ ಮಾಡುತ್ತೇವೆ. ಆದರೆ, ಪ್ರಸ್ತುತ ಶಕ್ತಿ ಪ್ರದರ್ಶಿಸುವ ಬದಲು ಸಂಭ್ರಮಿಸುವ ಸಮಯ. ಅಂದಿನ ಕಾರ್ಯಕ್ರಮದಲ್ಲಿ ಯಾರೂ ಜೈ ಒಕ್ಕಲಿಗ ಎಂದು ಕೂಗಬೇಡಿ. ಇದರಿಂದ ಕೆಂಪೇಗೌಡರನ್ನು ನಾವೇ ಒಂದು ಜಾತಿಗೆ ಸೀಮಿತಗೊಳಿಸಿದಂತಾಗುತ್ತದೆ ಎಂದು ಹೇಳಿದರು.
ಸರಕಾರಿ ಅನುದಾನಿತ ಸಂಸ್ಥೆಗಳಲ್ಲಿಯೂ ಕೆಂಪೇಗೌಡ ಜಯಂತಿ ಆಚರಣೆ ನಡೆಯಲಿ. ಈ ಸಂಬಂಧ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸರಕಾರಿ ಕಚೇರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಜಯಂತಿ ಅಚರಣೆ ಮಾಡುವಂತೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿರುವುದು ಸಂತೋಷವಾಗಿದೆ ಎಂದರು.
ದಸರಾದಂತೆ ಆಚರಿಸಿ
ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಕೆಂಪೇಗೌಡ ಆಚರಣೆಯು ನಾಡಿನ ಹಬ್ಬವಾಗಿ ಮಾಡಬೇಕಿದೆ. ಮೈಸೂರಿನಲ್ಲಿ ನಡೆಯುವ ದಸರಾ ಹಾಗೇ ಬೆಂಗಳೂರಿನಲ್ಲಿ ದಿನಾಚರಣೆಯನ್ನು ದಸರಾ ಹಬ್ಬದಂತೆ ಆಚರಿಸಬೇಕಿದೆ. ಸರಕಾರ ಒಪ್ಪದಿದ್ದರೂ ಪರ್ಯಾಯವಾಗಿ ನಾವೇ ಆಚರಣೆ ಮಾಡಬೇಕಿದೆ. ಈ ಮೂಲಕ ಕೆಂಪೇಗೌಡರು ಬೆಂಗಳೂರಿಗೆ ನೀಡಿದ ಕೊಡುಗೆ ಬಗ್ಗೆ ಎಲ್ಲರೂ ಸ್ಮರಿಸಬೇಕು ಎಂದರು.
ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಿಸಲಾಗುತ್ತಿದೆ. ಅದೇ ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ದೊಡ್ಡ ಮಟ್ಟದಲ್ಲಿ ಪ್ರತಿಷ್ಠಾಪನೆ ಕೆಲಸ ನಡೆಯುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿ ಲಿಬರ್ಟಿ ಪ್ರತಿಮೆ ಮಾದರಿಯಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸುವ ಮೂಲಕ ವಿಶ್ವಕ್ಕೆ ಕೆಂಪೇಗೌಡರನ್ನು ಪರಿಚಯಿಸಬೇಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸರಕಾರದ ವತಿಯಿಂದ ಅಧಿಕೃತವಾಗಿ ಕೆಂಪೇಗೌಡ ಆಚರಣೆಗೆ ಮುಂದಾಗಿರುವುದು ಅಭಿನಂದನೀಯ. ಆದರೆ ಮೊದಲ ವರ್ಷದ ಜಯಂತಿಯನ್ನು ಕೆಂಪೇಗೌಡರು ಕಟ್ಟಿಸಿದ ಕೆರೆಗಳ ಸಂರಕ್ಷಣೆ ವರ್ಷವಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ನಗರದಲ್ಲಿ ಕಲುಷಿತಗೊಂಡಿರುವ ಕೆರೆಗಳನ್ನು ಶುದ್ಧೀಕರಣ ಮಾಡುವ ಮೂಲಕ ಅರ್ಥಪೂರ್ಣವಾಗಿ ಅಚರಿಸಬೇಕು ಎಂದರು.
ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ಇತರೆ ಸಮಾಜದೊಂದಿಗೆ ಸಂಘರ್ಷಕ್ಕೆ ಇಳಿಯದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಒಟ್ಟಾಗಿ ಕೆಂಪೇಗೌಡ ಜಯಂತಿ ಆಚರಣೆ ಮಾಡಬೇಕಿದೆ. ಮೊದಲ ವರ್ಷ ಸಿದ್ಧತೆಗೆ ಸಮಯಾವಕಾಶ ಕಡಿಮೆಯಿರುವುದರಿಂದ ಮುಂದಿನ ವರ್ಷದಿಂದ ಒಂದು ತಿಂಗಳ ಕಾಲ ಸಿದ್ಧತೆ ನಡೆಸಿ ಜಯಂತಿ ದೊಡ್ಡ ಮಟ್ಟದಲ್ಲಿ ಆಚರಿಸೋಣ ಎಂದು ತಿಳಿಸಿದರು.
ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನಿರ್ಮಲಾನಂದ ಸ್ವಾಮೀಜಿಗಳ ಸಲಹೆಯಂತೆ ಜೂ.27ರಂದು ಕೆಂಪೇಗೌಡ ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಸಂಬಂಧ ಸಮಿತಿ ರಚಿಸಬೇಕಿದೆ. ಸಮಿತಿ ಮೂಲಕ ಜನಾಂಗದ ನಾಯಕರನ್ನು ಬೆಳೆಸಬೇಕಿದೆ. ನಾನು ಮತ್ತು ಸದಾನಂದಗೌಡ ಸೇರಿದಂತೆ ಅನೇಕ ನಾಯಕರಿಗೂ ರಿಟೈರ್ಡ್ ಆಗುವ ಸಮಯ ಬಂದಿದ್ದು, ನೂರಾರು ನಾಯಕರನ್ನು ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಪಿ.ಮಂಜೇಗೌಡ, ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು.
ರಾಜಕೀಯ ಕ್ಷೇತ್ರದಲ್ಲಿ ಒಬ್ಬರ ಮುಖ ಕಂಡರೆ ಒಬ್ಬರಿಗೆ ಆಗದಂತಹ ಬಿಗುವಿನ, ಜಿದ್ದಾಜಿದ್ದಿನ, ಪೈಪೋಟಿಯ ವಾತಾವರಣ ಸೃಷ್ಟಿಗೆ ಕಾರಣರಾಗಿರುವ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಇಬ್ಬರೂ ಇಂದಿನ ಸಭೆಗೆ ಹಾಜರಾಗಿದ್ದು, ಮುಖಾಮುಖಿಯಾದಾಗ ಕೈ ಕುಲುಕಿ ಕುಶಲ ವಿಚಾರಿಸಿದ್ದು, ವಿಶೇಷವಾಗಿತ್ತು.