ಮುಹಮ್ಮದ್ ಬಿನ್ ಸಲ್ಮಾನ್ ಸೌದಿ ಅರೇಬಿಯಾದ ನೂತನ ಉತ್ತರಾಧಿಕಾರಿ

Update: 2017-06-21 05:42 GMT

ರಿಯಾದ್, ಜೂ.21: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬುಧವಾರದಂದು ತಮ್ಮ 31 ವರ್ಷದ ಪುತ್ರ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಯುವರಾಜನನ್ನಾಗಿ ನೇಮಿಸಿ ತಮ್ಮ ನಂತರ ಅವರೇ ತಮ್ಮ ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ಮೂಲಕ ಹಿಂದಿನ ಯುವರಾಜ ಮುಹಮ್ಮದ್ ಬಿನ್ ನಯೆಫ್ (57) ಅವರಿಂದ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡಿದ್ದಾರಲ್ಲದೆ, ಆಂತರಿಕ ಸಚಿವ ಹುದ್ದೆಯಿಂದಲೂ ಅವರನ್ನು ಕೆಳಗಿಳಿಸಿದ್ದಾರೆ.

ಹೊಸ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಈಗಾಗಲೇ ದೇಶದ ರಕ್ಷಣಾ ಸಚಿವರಾಗಿದ್ದಾರಲ್ಲದೆ, ದೇಶದ ಆರ್ಥಿಕತೆಯಲ್ಲಿ ಸಮಗ್ರ ಬದಲಾವಣೆ ತರುವ ಆರ್ಥಿಕ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ. ಈ ಹಿಂದೆ ಅವರು ಉಪ ಯುವರಾಜನಾಗಿದ್ದುಕೊಂಡು ದೊರೆ ಸಲ್ಮಾನ್ ಅವರ ಎರಡನೇ ಉತ್ತರಾಧಿಕಾರಿಯಾಗಿ ಗುರುತಿಸಲ್ಪಟ್ಟಿದ್ದರು.

ಸಲ್ಮಾನ್ ಅವರು ಜನವರಿ 2015ರಲ್ಲಿ ಪಟ್ಟಕ್ಕೇರುವ ಮೊದಲು ಅವರ ಬಗ್ಗೆ ಸೌದಿಗಳಿಗೂ ಹೊರಗಿನವರಿಗೂ ಹೆಚ್ಚೇನೂ ತಿಳಿದಿರಲಿಲ್ಲ. ಸಲ್ಮಾನ್ ಅವರು ಯುವರಾಜನಾಗಿದ್ದಾಗ ಅವರು ತಂದೆಯ ಅರಮನೆ ದರ್ಬಾರಿನ ಉಸ್ತುವಾರಿಯಾಗಿದ್ದರು.

ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಯುವರಾಜನನ್ನಾಗಿ ನೇಮಿಸಿ ಅವರ ಕೈಗೆ ಅಪಾರ ಅಧಿಕಾರ ನೀಡಿದ ದೊರೆ ಸಲ್ಮಾನ್ ಅವರ ಕ್ರಮವು ಎಂಬಿಎಸ್ ಎಂದೇ ಕರೆಯಲ್ಪಡುವ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗಿಂತ ಹಲವು ಹಿರಿಯ ಸದಸ್ಯರಿರುವ ರಾಜಮನೆತನದಲ್ಲಿ ಆಶ್ಚರ್ಯ ಹುಟ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News