ಕೋಚ್ ಹುದ್ದೆಗೆ ಕುಂಬ್ಳೆ ರಾಜೀನಾಮೆ: ಮಾಜಿ ಆಟಗಾರರ ಅಸಮಾಧಾನ

Update: 2017-06-21 06:14 GMT

ಹೊಸದಿಲ್ಲಿ, ಜೂ.21: ಅನಿಲ್ ಕುಂಬ್ಳೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿರುವುದಕ್ಕೆ ಮಾಜಿ ಕ್ರಿಕೆಟಿಗರು ಟ್ವಿಟರ್‌ನ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಬಿಷನ್ ಸಿಂಗ್ ಬೇಡಿ ಹಾಗೂ ಮೈಕಲ್ ವಾನ್ ಸಹಿತ ಹಲವು ಮಾಜಿ ಕ್ರಿಕೆಟಿಗರು ಕುಂಬ್ಳೆ ಕೋಚ್ ಹುದ್ದೆ ತ್ಯಜಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ಶ್ರೇಷ್ಠ ವ್ಯಕ್ತಿಯ ಸೇವೆಯಿಂದ ವಂಚಿತವಾಗಿದೆ. ಅವರು ಭಾರತ ತಂಡದಲ್ಲಿ ಬೇರೆ ಹುದ್ದೆಯನ್ನು ವಹಿಸಿಕೊಳ್ಳುವ ವಿಶ್ವಾಸ ನನಗಿದೆ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ವಾನ್ ಟ್ವೀಟ್ ಮಾಡಿದ್ದಾರೆ.

 ಕುಂಬ್ಳೆಯ ಈ ನಿಲುವು ನನಗೆ ಅಚ್ಚರಿ ತಂದಿಲ್ಲ. ಗೌರವ ಸಿಗದಂತಹ ವಾತಾವರಣದಲ್ಲಿ ಕುಂಬ್ಳೆ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಭಾರತದಲ್ಲಿ ದೈತ್ಯರ ವಿರುದ್ಧ ಧ್ವನಿ ಎತ್ತಿದ್ದಾಗ ಉಪಕಾರ ಸ್ಮರಣೆಯಿಲ್ಲದೆ ಅವರನ್ನು ಹೊರ ಹಾಕಲಾಗುತ್ತದೆ ಎಂದು ಭಾರತದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಸರಣಿ ಟ್ವೀಟ್ ಮಾಡಿದ್ದಾರೆ.

 ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮೊದಲು ನೂತನ ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಬಾರದಿತ್ತು. ಪರಿಸ್ಥಿತಿಯನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿತ್ತು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

ಕಳೆದ 12 ತಿಂಗಳಲ್ಲಿ ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಭಾರತ ವೆಸ್ಟ್‌ಇಂಡೀಸ್(2-0) ವಿರುದ್ಧ ಅದರದೇ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಆನಂತರ ಸ್ವದೇಶದಲ್ಲಿ ನ್ಯೂಝಿಲೆಂಡ್(3-0), ಇಂಗ್ಲೆಂಡ್(4-0), ಬಾಂಗ್ಲಾದೇಶ(1-0) ಹಾಗೂ ಆಸ್ಟ್ರೇಲಿಯ(2-1) ವಿರುದ್ಧ ಟೆಸ್ಟ್ ಸರಣಿಗಳನ್ನು ಜಯಿಸಿತ್ತು. 8 ಏಕದಿನಗಳಲ್ಲಿ ಗೆಲುವು, 5ರಲ್ಲಿ ಸೋಲನುಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News