'ಟೀಮ್ ಇಂಡಿಯಾ'ದ ವಿರುದ್ಧ ಕಿಡಿಕಾರಿದ ಗವಾಸ್ಕರ್!

Update: 2017-06-21 09:14 GMT

ಮುಂಬೈ, ಜೂ.21: ಟೀಮ್ ಇಂಡಿಯಾದ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರ ರಾಜೀನಾಮೆ ವಿಚಾರದಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಭಾರತೀಯ ಕ್ರಿಕೆಟಿಗರ ವಿರುದ್ಧ ಹರಿಹಾಯ್ದಿದ್ದಾರೆ.

ಅನಿಲ್ ಕುಂಬ್ಳೆ ಒಬ್ಬರು ಕಠಿಣ ಕೋಚ್ ಆಗಿದ್ದರಿಂದ ಹಲವು ಆಟಗಾರರಿಗೆ ಅದು ಸರಿ ಬರಲಿಲ್ಲ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಗವಾಸ್ಕರ್, ‘‘ಹಾಗಾದರೆ ನಿಮಗೆ ಮೃದು ಸ್ವಭಾವದ ಕೋಚ್ ಬೇಕೇನು? ‘ಓಕೆ ಬಾಯ್ಸ್, ಇವತ್ತು ಅಭ್ಯಾಸ ಬೇಡ, ರಜೆ ತೆಗೆದುಕೊಳ್ಳಿ, ಶಾಪಿಂಗಿಗೆ ಹೋಗಿ’ ಎನ್ನುವವರು ಬೇಕೇನು ? ಅನಿಲ್ ಕುಂಬ್ಳೆ ಕಳೆದೊಂದು ವರ್ಷದಲ್ಲಿ ಉತ್ತಮ ಫಲಿತಾಂಶ ನೀಡಿರುವ ಹೊರತಾಗಿಯೂ ಯಾರಾದರೂ ದೂರುತ್ತಿದ್ದರೆ, ಅಂತಹ ಆಟಗಾರರನ್ನು ತಂಡದಿಂದ ಮೊದಲು ಹೊರಗಿಡಬೇಕು’’ ಎಂದಿದ್ದಾರೆ ಗವಾಸ್ಕರ್.

‘‘ಕಳೆದೊಂದು ವರ್ಷದಲ್ಲಿ ಅನಿಲ್  ಭಾರತಕ್ಕಾಗಿ ಮಾಡಿರುವ ಸಾಧನೆ ಅಮೋಘ. ಅವರ ಬಗ್ಗೆ ತಪ್ಪಾಗಿ ಏನನ್ನೂ ಹೇಳುವುದು ಸರಿ ಬಾರದು. ಅವರೊಬ್ಬ ಕಠಿಣ ಟಾಸ್ಕ್ ಮಾಸ್ಟರ್. ಕೆಲ ವರದಿಗಳಂತೆ ಅವರು ಹೆಡ್ ಮಾಸ್ಟರ್ ರೀತಿಯಲ್ಲಿ ವರ್ತಿಸುತ್ತಾರೆ ಎಂದೆಲ್ಲಾ ಹೇಳುವುದು ನನಗಿಷ್ಟವಾಗದು ಎಂದು ಗವಾಸ್ಕರ್ ಹೇಳಿದ್ದಾರೆ.

ಅನಿಲ್ ಕುಂಬ್ಳೆ ಅವರು ಕೋಚ್ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿದ್ದು ಬಹಳಷ್ಟು ದುಃಖಕರ ಎಂದ ಗವಾಸ್ಕರ್, ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿತ್ತೇ ಎಂಬ ಪ್ರಶ್ನೆಗೆ ತಮಗೆ ಈ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದರಲ್ಲದೆ, ತಂಡದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯ. ಕೆಲವೊಮ್ಮೆ ಗಂಭೀರ ಸನ್ನಿವೇಶಗಳಲ್ಲಿ ಹೆಚ್ಚು ಭಿನ್ನಾಭಿಪ್ರಾಯಗಳು ಎದುರಾಗಬಹುದು ಎಂದ ಅವರು, ತಂಡದಲ್ಲಿ ಯಾವುದೋ ವಿಚಾರದಲ್ಲಿ ಸಹಮತ ಮೂಡದಿರುವುದು ಈಗಿನ ಬೆಳವಣಿಗೆಗೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News