ಎಲ್ಲ ಧರ್ಮಗ್ರಂಥಗಳು ಪ್ರೀತಿಗೆ ಮಾನ್ಯತೆ ನೀಡಿವೆ: ಡಾ.ಶ್ರೀನಿವಾಸಮೂರ್ತಿ
Update: 2017-06-21 18:39 IST
ಬೆಂಗಳೂರು, ಜೂ.21: ಎಲ್ಲ ಧರ್ಮ ಗ್ರಂಥಗಳಲ್ಲಿ ಪ್ರೀತಿ, ಅಂತಃಕರಣ, ಕರುಣೆಗೆ ಮಾನ್ಯತೆ ನೀಡಲಾಗಿದೆ ಎಂದು ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಕರ್ನಾಟಕ ಸೂಫಿ ಸಂತರ ಸಂಘದಿಂದ ತುಮಕೂರು ರಸ್ತೆಯಲ್ಲಿನ ಖ್ವಾಜಾ ಫಕೀರ್ ನವಾಜ್ ದರ್ಗಾ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ ರಮಝಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಸೌಹಾರ್ದಯುತವಾದ ಜೀವನ ನಡೆಸಬೇಕು. ಸೌಹಾರ್ದ ಬದುಕನ್ನು ಇತರರಿಗೂ ಅರ್ಥ ಮಾಡಿಸಿ, ನಾವು ಸಮಾನರು ಎಂಬ ಭಾವ ಮೂಡಿಸಬೇಕು ಎಂದರು.
ಸಂಘದ ಅಧ್ಯಕ್ಷ ಸೂಫಿ ವಲಿಬಾ ಮಾತನಾಡಿ, ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಸೂಫಿ ಸಂತರು, ಶರಣರು, ಗುರುಕುಲದ ಪರಂಪರೆ, ಶಾಂತಿ, ಸಹಬಾಳ್ವೆ, ಭಾತೃತ್ವ, ಸೌಹಾರ್ದತೆ ಪ್ರೋತ್ಸಾಹಿಸುತ್ತಾ, ಸಮಾನತೆಯನ್ನು, ಸಹಬಾಳ್ವೆಯನ್ನು ಉತ್ತೇಜಿಸಲಾಗಿದೆ ಎಂದು ತಿಳಿಸಿದರು.