ಖಾಸಗಿ ಸಾಲ ಪಡೆದು ಆತ್ಮಹತ್ಯೆಗೆ ಶರಣಾದ ರೈತರಿಗೂ ಪರಿಹಾರ: ಸಿದ್ಧರಾಮಯ್ಯ

Update: 2017-06-21 14:19 GMT

 ಬೆಂಗಳೂರು, ಜೂ. 21: ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೂ ರಾಜ್ಯ ಸರಕಾರದಿಂದ 5ಲಕ್ಷ ರೂ.ಪರಿಹಾರ ನೀಡುವ ಸಂಬಂಧ ಶೀಘ್ರದಲ್ಲೆ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಿದ್ದಾರೆ.

ಬುಧವಾರ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಆತ್ಮಹತ್ಯೆಗೆ ಶರಣಾದ ರೈತರಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ತಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ 3 ಲಕ್ಷ ರೂ.ನಿಂದ 5ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಸಹಕಾರಿ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ರೈತರಿಗೆ ಬಡ್ಡಿ ಸಬ್ಸಿಡಿ ನೀಡಲಾಗುತ್ತಿದ್ದು, ಸುಮಾರು 800 ಕೋಟಿ ರೂ. ಮೊತ್ತವನ್ನು ಈ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದ ಅವರು, ಹತ್ತು ಅಶ್ವಶಕ್ತಿ ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗಿದೆ. 25ಲಕ್ಷ ರೈತರಿಗೆ ಈ ಸೌಲಭ್ಯ ದೊರೆಯುತ್ತಿದ್ದು, ಇದಕ್ಕಾಗಿ 8ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.

ರೈತರು ಪ್ರತಿಭಟಿಸಿಲ್ಲ: ರೈತರ ಸಾಲಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಗೆ ಆಗ್ರಹಿಸಿ ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಆದರೆ, ರಾಜ್ಯದಲ್ಲಿ ರೈತರು ಯಾವುದೇ ರೀತಿಯಲ್ಲಿ ಪ್ರತಿಭಟನೆ ನಡೆಸಿಲ್ಲ ಎಂದು ಹೇಳಿದರು.

ತಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೈತರು ಬಿತ್ತನೆ ಬೀಜ, ರಸಗೊಬ್ಬರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿಲ್ಲ. ಸಕಾಲದಲ್ಲಿ ಅಗತ್ಯ ಬಿತ್ತನೆ ಬೀಜ-ಗೊಬ್ಬರ ಪೂರೈಕೆ ಮಾಡಲಾಗಿದೆ ಎಂದ ಅವರು, ರಾಜ್ಯದಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ 1,146 ಕೋಟಿ ರೂ.ವಿಮೆ ಹಣ ಬಂದಿದೆ. ಅದನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದರು.

ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ 34ಲಕ್ಷ ಕ್ವಿಂಟಾಲ್ ತೊಗರಿಯನ್ನು ಖರೀದಿಸಿದ್ದು, ರಾಜ್ಯ ಸರಕಾರ 450 ರೂ.ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗಿದೆ ಎಂದ ಅವರು, ರೈತರ ಇತರೆ ಕೃಷಿ ಉತ್ಪನ್ನಗಳಿಗೂ ಸೂಕ್ತ ಬೆಂಬಲ ಬೆಲೆ ನೀಡಿದ್ದು, ಖರೀದಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News