ನಂಬಿಕೆ-ಮೂಢನಂಬಿಕೆ ಮಧ್ಯೆ ಗೆರೆ ಎಳೆಯಬೇಕು: ಸಿದ್ದರಾಮಯ್ಯ

Update: 2017-06-21 14:07 GMT

ಬೆಂಗಳೂರು, ಜೂ. 21: ನಂಬಿಕೆ ಮತ್ತು ಮೂಢನಂಬಿಕೆಯ ಮಧ್ಯೆ ಒಂದು ಗೆರೆ ಎಳೆಯಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ವಿವಿಧ ಇಲಾಖೆ ಬೇಡಿಕೆಗಳ ಮೇಲೆ ಉತ್ತರದ ಮಧ್ಯೆ 'ಜೆಡಿಎಸ್ ಹಿರಿಯ ಸದಸ್ಯ ಎಚ್.ಡಿ.ರೇವಣ್ಣ ಇಲಾಖೆ ಬೇಡಿಕೆಗಳ ಮೇಲೆ ಮಾತನಾಡಿಲ್ಲ. ಏಕೆಂದರೆ ಈ ತಿಂಗಳು ಒಳ್ಳೆಯ ದಿನಗಳಿಲ್ಲ ಎಂದು ಅವರು ಸದನಕ್ಕೆ ಬಂದಿಲ್ಲ' ಎಂದು ಛೇಡಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನೀವು ಮುಖ್ಯಮಂತ್ರಿ ಆದ ಬಳಿಕ ರೇವಣ್ಣ ಮಾತನಾಡುವುದನ್ನೇ ಬಿಟ್ಟಿದ್ದಾರೆಂದು ಮಸಾಲೆ ಬೆರೆಸಿದರು. ರೇವಣ್ಣ ನನ್ನ ಒಳ್ಳೆಯ ಹಿತಚಿಂತಕ. ಜೆಡಿಎಸ್‌ನಲ್ಲಿದ್ದಾಗ ತಾನು ಮುಖ್ಯಮಂತ್ರಿ ಆಗಲಿಲ್ಲ ಎಂದು ಕಣ್ಣೀರಿಟ್ಟಿದ್ದ ಎಂದು ಸಿದ್ದರಾಮಯ್ಯ ಸ್ಮರಿಸಿದರು.

ರೇವಣ್ಣ ರಾಹುಕಾಲ-ಗುಳಿಕಕಾಲವನ್ನು ನೋಡಿಕೊಂಡು ಸದನಕ್ಕೆ ಬರುತ್ತಾರೆ. ಇದರಿಂದ ಯಾರಿಗೆ ಏನಾಗಿದೆಯೋ ಗೊತ್ತಿಲ್ಲ. ಆದರೆ, ರೇವಣ್ಣನಿಗೆ ಮಾತ್ರ ಒಳ್ಳೆಯದಾಗಿದೆ. ಮಾತ್ರವಲ್ಲ ಅನುಕೂಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದು, ಸದನದಲ್ಲಿ ನಗೆ ಅಲೆಯನ್ನು ಉಕ್ಕಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ತಮ್ಮ ಮಾತಿಗೆ ನಮ್ಮದೇನು ಅಭ್ಯಂತರವಿಲ್ಲ ಸ್ವಾಮಿ, ರಾಜ್ಯದಲ್ಲಿನ ರೈತರಿಗೆ ಒಳ್ಳೆಯದಾದರೆ ಅಷ್ಟೇ ಸಾಕು ಎಂದು ಹೇಳಿದರು. ಈ ವೇಳೆ ಬಿಜೆಪಿಯ ಬಸವರಾಜ ಬೊಮ್ಮಾಯಿ, ‘ಏನ್ ಸಾರ್ ಇವತ್ತು ಒಳ್ಳೆಯ ಮನಸ್ಥಿತಿಯಲ್ಲಿದ್ದೀರಿ’ ಎಂದು ಸಿದ್ದರಾಮಯ್ಯನವರನ್ನು ತಿವಿದರು.

ಸದಸ್ಯರ ಪ್ರತಿಕ್ರಿಯೆಗೆ ಸ್ಪಂದಿಸಿದ ಸಿದ್ದರಾಮಯ್ಯ ಆತ್ಮಶುದ್ಧಿ ಇದ್ದರೆ ಒಳ್ಳೆಯ ಮನಸ್ಥಿತಿ ಇರುತ್ತದೆ ಎಂದರು. ಇಂದು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಒಳ್ಳೆಯ ಮನಸ್ಥಿತಿಯಲ್ಲಿ ಇದ್ದಾರೆ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಚಟಾಕಿ ಹಾರಿಸಿದರು.

ರೇಶ್ಮೆ ಶಾಲು: ಮೈಸೂರು ಸಿಲ್ಕ್ ಜುಬ್ಬಾ-ಪಂಚೆ ಮತ್ತು ರೇಶ್ಮೆ ಶಾಲು ಧರಿಸಿ ಸದನಕ್ಕೆ ಆಗಮಿಸಿದ ಸಿಎಂ ಸಿದ್ಧರಾಮಯ್ಯರನ್ನು ಕುರಿತು ಬಿಜೆಪಿಯ ಬಸವರಾಜ ಬೊಮ್ಮಾಯಿ, ‘ಏನ್ ಸಾರ್ ಸಿಲ್ಕ್ ಜುಬ್ಬಾ-ರೇಶ್ಮೆ ಶಾಲು ಧರಿಸಿ ಬಂದಿದ್ದೀರಿ, ರೈತರ ಸಾಲಮನ್ನಾ ಘೋಷಣೆ ಮೂಲಕ ಒಳ್ಳೆಯ ಸುದ್ದಿ ಕೊಡ್ತೀರೀ..’ ಎಂದು ಕೆಣಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಬೊಮ್ಮಾಯಿ ನೀನು ನಮ್ಮವನೂ, ನನ್ನ ರೇಶ್ಮೆ ಶಾಲಿನ ಮೇಲೆ ನಿನಗೇಕೆ ಕಣ್ಣು..ನಿನ್ನ ಮಗನ ಮದುವೆಗೆ ನಿನಗೂ ಒಂದು ರೇಶ್ಮೆ ಶಾಲು ಮೈಸೂರು ಸಿಲ್ಕ್ ಪಂಚೆ ಕೊಡ್ಸಿತ್ತೀನಿ, ಬಿಡಪ್ಪ’ ಎಂದು ಸುಮ್ಮನಿರಿಸಲು ಪ್ರಯತ್ನಿಸಿದರು.

ಆಗ ಬಿಜೆಪಿಯ ಸಿ.ಟಿ.ರವಿ, ರೇಶ್ಮೆ ಶಾಲು-ಪಂಚೆ ಅಷ್ಟೇನಾ ಬೇರೆ ಏನಾದರೂ ಇದೆಯೇ ಎಂದು ಸಿಎಂ ಕಾಲೆಳೆದರು. ‘ರವಿ ನಿನಗೇನು ಬೇಕು, ಆಮೇಲೆ ನನ್ನತ್ತರ ಬಂದು ಹೇಳಪ್ಪ’ ಎಂದು ಚರ್ಚೆಗೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News