×
Ad

ಎಂಟನೆ ದಿನಕ್ಕೆ ಕಾಲಿಟ್ಟ ಭೂಮಿ-ವಸತಿ ವಂಚಿತರ ಧರಣಿ

Update: 2017-06-21 19:58 IST

ಬೆಂಗಳೂರು, ಜೂ.21: ವಸತಿ ಮತ್ತು ಭೂಮಿಗಾಗಿ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ಸ್ವಾತಂತ್ರ ಉದ್ಯಾನದಲ್ಲಿ ಕಳೆದ ಏಳುದಿನಗಳಿಂದ ವಸತಿ ಮತ್ತು ಭೂಮಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಗೆ ಸರಕಾರ ಸ್ಪಂದಿಸದೆ ಇದ್ದುದರಿಂದ ಸಮಿತಿಯ ಸದಸ್ಯರು ಬುಧವಾರ ಏಕಾಏಕಿ ಹೋರಾಟವನ್ನು ತೀವ್ರಗೊಳಿಸಿ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮಾರ್ಗ ಮಧ್ಯೆ ಹೋರಾಟಗಾರರನ್ನು ತಡೆದು ವಶಪಡಿಸಿಕೊಂಡರು.

ಲೇಖಕಿ ಡಾ.ವಿಜಯಮ್ಮ ಮತ್ತು ಚಿಂತಕ ಜಿ.ರಾಮಕೃಷ್ಣ ನೇತೃತ್ವದಲ್ಲಿ ಮತ್ತೊಂದು ತಂಡ ವಿಧಾನಸೌಧ ಮುತ್ತಿಗೆ ಹಾಕಲು ಪ್ರಯತ್ನಿಸಿ ಪೊಲೀಸರಿಗೆ ಅತಿಥಿಯಾದರು.

ಪೊಲೀಸರನ್ನು ಮುಂದೆ ಬಿಟ್ಟು ನಮ್ಮ ಹೋರಾಟವನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ. ಈ ಕುತಂತ್ರಗಳಿಗೆ ನಾವು ಜಗ್ಗುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವವರಿಗೂ ಯಾವುದೇ ಕಾರಣಕ್ಕೂ ಧರಣಿಯನ್ನು ಕೈಬಿಡುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಮೊದಲು ಧರಣಿ ನಿತರನ್ನು ಉದ್ದೇಶಿಸಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ನಾಡಿನ ಪ್ರತಿಯೊಬ್ಬರಿಗೂ ಭೂಮಿ ಮತ್ತು ವಸತಿ ದೊರಕಬೇಕು. ಭೂಮಿ ವಸತಿಗಾಗಿ ಶೀಘ್ರದಲ್ಲೇ ಹೈಪವರ್ ಕಮಿಟಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು.

  ಭೂ ವಂಚಿತರಿಕಗೆ ಬಗರ್‌ಹುಕುಂ ರೈತರಿಗೆ ತಲಾ 5 ಎಕರೆ ಭೂಮಿಯನ್ನು ನೀಡಬೇಕು. ಭೂ ಮಾಫಿಯಾಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ, ಬಡವರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಭೂ ಸುಧಾರಣೆ ಕಾಯಿದೆ ಜಾರಿಯಾಗಿ ನಾಲ್ಕು ದಶಕಗಳೇ ಕಳೆದರೂ ಇಂದಿಗೂ ಲಕ್ಷಾಂತರ ಬಡವರಿಗೆ ಭೂಮಿ ನೀಡಿಲ್ಲ. ಬದುಕಲು ಸ್ವಂತ ಸೂರಿಲ್ಲ. ಭೂ ವಸತಿಯಿಲ್ಲದವರಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ಸರಕಾರ ಕೂಡಲೆ ಹೈಪವರ್ ಕಮಿಟಿ ರಚಿಸಬೇಕು ಎಂದು ಒತ್ತಾಯಿಸಿದರು.

ಮಾನವ ಹಕ್ಕುಗಳ ಹೋರಾಟಗಾರ ನಗರಿ ಬಾಬಯ್ಯ, ಲೇಖಕಿ ಡಾ.ವಿಜಯಮ್ಮ, ಚಿಂತಕ ಡಾ.ಜಿ.ರಾಮಕೃಷ್ಣ,ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾ ರೆಡ್ಡಿ ಸೇರಿದಂತೆ ಇತರರು ಧರಣಿಗೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News