×
Ad

ಕೋರ್ಸ್ ಬಳಿಕ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಕಡ್ಡಾಯ: ಕೆ.ಆರ್.ರಮೇಶ್‌ಕುಮಾರ್

Update: 2017-06-21 20:58 IST

ಬೆಂಗಳೂರು, ಜೂ.21: ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ರಾಜ್ಯ ಸಿವಿಲ್ ಸೇವೆಗಳ ವರ್ಗಾವಣೆ ನಿಯಂತ್ರಣ (ತಿದ್ದುಪಡಿ) ವಿಧೇಯಕ-2017ಕ್ಕೆ ವಿಧಾನಪರಿಷತ್ತಿನಲ್ಲಿ ಅನುಮೋದನೆಗೊಂಡಿತು.

ಬುಧವಾರ ವಿಧಾನಪರಿಷತ್ತಿನಲ್ಲಿ ವಿಧೇಯಕ ಕುರಿತು ಮಾತನಾಡಿದ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್, ವೈದ್ಯಕೀಯ ಕೋರ್ಸ್ ಮುಗಿದ ಬಳಿಕ ಅಭ್ಯರ್ಥಿ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕಾಗಿದೆ. ಅಲ್ಲದೆ, 10 ವರ್ಷದಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಹಾಗೂ ಸಿಬ್ಬಂದಿ ವರ್ಗಾವಣೆಗೊಳಿಸಲು ವಿಧೇಯಕದಲ್ಲಿ ಹೇಳಲಾಗಿದ್ದು, ಈ ಮೂಲಕ ಹಳ್ಳಿಯಲ್ಲಿ ಖಾಲಿಯಿರುವ ಹುದ್ದೆಯನ್ನು ಭರ್ತಿ ಮಾಡಬೇಕಿದೆ. ಹೀಗಾಗಿ ವರ್ಗಾವಣೆ ಪ್ರಮಾಣವನ್ನು ಶೇ.5 ರಿಂದ 15ಕ್ಕೆ ಏರಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದರು.

10 ವರ್ಷದಿಂದ ಒಂದೇ ಕಡೆ ವೈದ್ಯ ವೃತ್ತಿ ಮಾಡುತ್ತಿರುವವರು ಈ ವಿಧೇಯಕವನ್ನು ದುರ್ಬಳಕೆ ಮಾಡಿಕೊಳ್ಳಲಿದ್ದಾರೆ ಎಂದು ಬಿಜೆಪಿಯ ಕ್ಯಾ.ಗಣೇಶ್ ಕಾರ್ಣೀಕ್ ಹಾಗೂ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರ ಆಕ್ಷೇಪಕ್ಕೆ ಉತ್ತರಿಸಿದ ಸಚಿವರು, ಹಣ ಸುಲಿಗೆ ಮಾಡುವ ಕೆಲ ವೈದ್ಯರು ಸುಲಭವಾಗಿ ತಮ್ಮ ಸಾಮ್ರಾಜ್ಯವನ್ನು ಬಿಟ್ಟುಕೊಡುವುದಿಲ್ಲ. ಸ್ವಾರ್ಥದಿಂದ ಸೇವೆ ಮಾಡುತ್ತಿರುವ ವೈದ್ಯರಿಗೆ ತಕ್ಕ ಪಾಠ ಕಲಿಸಲು ಈ ವಿಧೇಯಕ ತರಲಾಗಿದೆ ಎಂದರು.

ಅಲ್ಲದೆ, ವೈದ್ಯಕೀಯ ಶಿಕ್ಷಣ ಬಳಿಕ ಸೇವೆಗೆ ಇಳಿದ ಮೊದಲ ವರ್ಷದಲ್ಲೇ ಅವರಿಗೆ ಬೇಕಾದ ಸ್ಥಳಗಳಲ್ಲಿ ನಿಯೋಜನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಮೊದಲು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸಬೇಕೆಂಬ ವಿಧೇಯಕ ತರಲಾಗಿದೆ ಹೊರತು, ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ನೀಡುತ್ತಿರುವ ವೈದ್ಯರನ್ನು ಸುಖಾಸುಮ್ಮನೆ ವರ್ಗಾವಣೆಗೊಳಿಸುವುದು ನಮ್ಮ ಉದ್ದೇಶವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಓಪನ್ ಬಿಡ್ಡಿಂಗ್ ಮೂಲಕ ನೇಮಕ: ಈ ವೇಳೆ ಬಿಜೆಪಿಯ ರಾಮಚಂದ್ರಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಅನುಭವ ಇರಬೇಕು. ಅಲ್ಲದೆ, ತಜ್ಞ ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುತ್ತಿದ್ದು, ಪರ್ಯಾಯವಾಗಿ ಏನು ಕ್ರಮ ಕೈಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 2350 ಹುದ್ದೆಯಲ್ಲಿ 1300 ಹುದ್ದೆಗಳು ಖಾಲಿಯಿವೆ. ಗ್ರಾಮೀಣ ಭಾಗದಲ್ಲಿ ಹುದ್ದೆಯನ್ನು ಭರ್ತಿ ಮಾಡುವ ಸಲುವಾಗಿ ರಾಜ್ಯ ಲೋಕಸೇವಾ ಆಯೋಗದಿಂದ ಅಧಿಸೂಚನೆ ಹೊರಡಿಸಿದ್ದರೂ ಯಾರು ಆಸಕ್ತಿ ವಹಿಸಿಲ್ಲ. ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರಿಗೆ ಮಾಸಿಕ 1.25 ಲಕ್ಷ ರೂಪಾಯಿ ವೇತನ ನೀಡುವ ಭರವಸೆ ನೀಡಿದರೂ ಮುಂದೆ ಬಂದಿಲ್ಲ. ತಾತ್ಕಾಲಿಕ ಸೇವೆಗೂ ವೈದ್ಯರು ಹಿಂಜರಿದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಓಪನ್ ಬಿಡ್ಡಿಂಗ್ ಕರೆಯುವ ಮೂಲಕ ವೈದ್ಯರ ನೇಮಿಸಲು ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು. ಅಂತಿಮವಾಗಿ ಸದಸ್ಯರು ವಿಧೇಯಕಕ್ಕೆ ಅನುಮೋದನೆ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News