ಲೋಪ ತಿದ್ದುಕೊಂಡ ಸಚಿವ ರಾಯರೆಡ್ಡಿ: ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ವಿಧೇಯಕ ಅಂಗೀಕಾರ
ಬೆಂಗಳೂರು, ಜೂ.21: ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರ ಏರಿಕೆ ಸಡಿಲಿಕೆ ಸಂಬಂಧ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಪ್ಪು ಮಾಹಿತಿ ನೀಡಿದ ಪರಿಣಾಮ ಪರಿಷತ್ತಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಬಳಿಕ ಸಚಿವರು ಸ್ಪಷ್ಟನೆ ನೀಡಿದ ಅಂತಿಮವಾಗಿ ರಾಜ್ಯಉನ್ನತ ಶಿಕ್ಷಣ ಪರಿಷತ್ತು ವಿಧೇಯಕಕ್ಕೆ ಅಂಗೀಕಾರವಾಯಿತು.
ವಿಧೇಯಕ ಸಂಬಂಧ ವಿಧಾನಪರಿಷತ್ತಿನಲ್ಲಿ ಮಾತನಾಡಿದ ಸಚಿವರು, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪಾಧ್ಯಕ್ಷ ಸೇವಾ ವಯೋಮಿತಿಯನ್ನು 65 ರಿಂದ 70 ಏರಿಸುವ ಈ ವಿಧೇಯಕವನ್ನು ತರಲಾಗಿದೆ. ಉನ್ನತ ಶಿಕ್ಷಣ ಪರಿಷತ್ತಿನ ಸಮಗ್ರ ಅಭಿವೃದ್ಧಿ ಉಪಾಧ್ಯಕ್ಷರ ವಯೋಮಿತಿ ಹೆಚ್ಚಿಸಲಾಗಿದೆ ಎಂದರು.
ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ಭಾನುಪ್ರಕಾಶ್, ದೇಶದಲ್ಲಿ ಮತದಾನ ಮಾಡುವ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿರುವಾಗ, ಉಪಾಧ್ಯಕ್ಷರ ವಯೋಮಿತಿಯನ್ನು 65ರಿಂದ 70ಕ್ಕೆ ಏರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಮಾತನಾಡಿ, ಉಪಾಧ್ಯಕ್ಷರ ವಯೋಮಿತಿ ಹೆಚ್ಚಳಕ್ಕೆ ಮುಂದಾಗಿರುವ ಸರಕಾರ ಕ್ರಮ ಸರಿಯಿಲ್ಲ. ಯಾರನ್ನೋ ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಮಸೂದೆ ತರಲು ಹೊರಟಿದ್ದಾರೆ. ಇದಕ್ಕೆ ಜೆಡಿಎಸ್ ಪುಟ್ಟಣ್ಣ, ಕಾಂಗ್ರೆಸ್ ವಿ.ಎಸ್.ಉಗ್ರಪ್ಪ ಸೇರಿದಂತೆ ಹಲವು ಸದಸ್ಯರು ವಿರೋಧಿಸಿದರು.
ವಿಧೇಯಕ ಮಂಡನೆ ವಿಚಾರದಲ್ಲಿ ಆಗಿರುವ ಲೋಪವನ್ನು ತಿದ್ದುಕೊಂಡ ಸಚಿವರು, ಯುಜಿಸಿ ನಿಯಮಾವಳಿ ಪ್ರಕಾರ 75ರ ವಯಸ್ಸಿನವರೆಗೂ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಇದು ನಾವು ತರುತ್ತಿರುವ ಹೊಸ ನೀತಿಯಲ್ಲ. ವಿಧೇಯಕ ಮಂಡಿಸುವಾಗ ಸ್ಟಷ್ಟಪಡಿಸಬೇಕಿತ್ತು. ಇದರಿಂದ ನನ್ನಿಂದ ತಪ್ಪಾಗಿದೆ ಎಂದು ಬಹಿರಂಗವಾಗಿ ಕ್ಷಮೆ ಕೇಳಿ, ವಿಧೇಯಕಕ್ಕೆ ಅನುಮೋದನೆ ಮಾಡುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
ಇದಕ್ಕೊಪದ ಪ್ರತಿಪಕ್ಷದ ಸದಸ್ಯರು ಪಟ್ಟಭದ್ರಹಿತಾಸಕ್ತಿಗಳ ಲಾಬಿಗೆ ಮಣಿದು, ತರಾತುರಿಯಲ್ಲಿ ವಿಧೇಯಕ ತಂದಿದ್ದಾರೆ. ನಾವೇ ಮಾಡಿಕೊಂಡಿರುವ ನಿಯಮದಂತೆ ಪರಿಷತ್ತಿಗೆ ವಿಧೇಯಕ ತರುವ ಹಿಂದಿನ ದಿನವೇ ಸದಸ್ಯರಿಗೆ ವಿಧೇಯಕ ಪ್ರತಿ ನೀಡಬೇಕೆಂದು ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಒಕ್ಕೊರಲಿಂದ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸಹಮತ ವ್ಯಕ್ತಪಡಿಸಿದರು.
ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರು, ವಯೋಮಿತಿ ಸಡಿಲಿಕೆ ಯಾವ ವಿಚಾರವಾಗಿ ನಾನು ಯಾರೊಂದಿಗೆ ಲಾಬಿ ನಡೆಸಿಲ್ಲ. ಮುಂದೆಯೂ ಮಾಡುವುದಿಲ್ಲ. ಇದರಿಂದ ನನಗೇನೂ ನಷ್ಟವಿಲ್ಲ ಎಂದು ಸ್ಟಷ್ಟಪಡಿಸಿದರು. ಬಳಿಕ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೆಲಹೊತ್ತು ಮಾತಿನ ಚಕಮಕಿ ನಡೆದ ನಂತರ ಅಂತಿಮವಾಗಿ ವಿಧೇಯಕಕಕ್ಕೆ ಅನುಮೋದನೆ ನೀಡಲು ಒಪ್ಪಿಗೆ ಸೂಚಿಸಿತು.