ಕೆಪಿಎಸ್ಸಿ ನೇಮಕ: ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ನಕಾರ

Update: 2017-06-21 16:15 GMT

ಬೆಂಗಳೂರು, ಜೂ.21: 2011ನೆ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ (ಕೆಪಿಎಸ್ಸಿ) ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕೆಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಕ್ಕೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.

ಈ ಕುರಿತಂತೆ ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಜಾ ಮಾಡಿದೆ.

ಪ್ರಕರಣದ ಮೂಲ ಅರ್ಜಿಯನ್ನು ಅರ್ಹತೆ ಆಧಾರದ ಮೇಲೆ ಅತ್ಯಂತ ಜಾಗರೂಕವಾಗಿ ವಿಚಾರಣೆ ನಡೆಸುವ ಅವಶ್ಯಕತೆ ಇದೆ. ಅಂತೆಯೇ ಈಗಾಗಲೇ ರಾಜ್ಯ ಸರಕಾರದ ಇದೇ ಮಾದರಿಯ ಕೋರಿಕೆಯನ್ನು ತಳ್ಳಿ ಹಾಕಲಾಗಿದೆ. ಹೀಗಾಗಿ, ಅರ್ಜಿಯನ್ನೂ ವಜಾ ಮಾಡಲಾಗುತ್ತಿದೆ ಎಂದು ವಜಾಕ್ಕೆ ಕಾರಣ ನೀಡಲಾಗಿದೆ.

ಪಿಐಎಲ್ ಆಧರಿಸಿ ತಡೆ: ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಆರ್.ರೇಣುಕಾಂಬಿಕೆ ಸೇರಿದಂತೆ 13 ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಪೀಠ, ಪ್ರಕರಣದ ವಿಚಾರಣೆ ಮುಕ್ತಾಯವಾಗುವತನಕ 2011 ಸಾಲಿನಲ್ಲಿ ಆಯ್ಕೆಯಾದ ಯಾವುದೇ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಬಾರದು ಎಂದು ಆದೇಶಿಸಿತ್ತು.

ಕೆಎಟಿ ಆದೇಶ: 2011ರಲ್ಲಿ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿದ್ದ ರಾಜ್ಯ ಸರಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2016ರ ಅಕ್ಟೋಬರ್ 19ರಂದು ವಜಾ ಮಾಡಿತ್ತು.
   
ಆಯ್ಕೆ ಪಟ್ಟಿ ರದ್ದುಗೊಳಿಸಿ ರಾಜ್ಯ ಸರಕಾರ 2014 ಆಗಸ್ಟ್ 14ರಂದು ಹೊರಡಿಸಿದ ನಿರ್ಧಾರ ಕಾನೂನು ಬಾಹಿರವಾಗಿದೆ. ಆದೇಶ ಕೈಸೇರಿದ ಎರಡು ತಿಂಗಳ ಒಳಗಾಗಿ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಕೆಎಟಿ ನಿರ್ದೇಶಿಸಿತ್ತು. ಆದೇಶದ ಅನ್ವಯ ರಾಜ್ಯ ಸರಕಾರ 78 ಜನರಿಗೆ ನೇಮಕಾತಿ ಪತ್ರ ನೀಡಿತ್ತು. ಇವರಿಗಿನ್ನೂ ಸಿಂಧುತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಅಷ್ಟರಲ್ಲಿಯೇ ಆದೇಶ ನೀಡಿಕೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಲಾಯಿತು. ಈ ಪಿಐಎಲ್ ವಿಚಾರಣೆ ನಡೆಸಿದ ಕೋರ್ಟ್ ನೇಮಕಾತಿ ಆದೇಶ್ಕಕೆ ತಡೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News