ರೊಹಿಂಗ್ಯಾ ನಿರಾಶ್ರಿತರ ರಮಝಾನ್

Update: 2017-06-21 18:36 GMT

ದಿಲ್ಲಿಯ ಕಾಲಿಂದಿ ಕುಂಜ್ ಪ್ರದೇಶದಲ್ಲಿಯ ಪುಟ್ಟ ಶಿಬಿರವೊಂದರಲ್ಲಿ ಸುಮಾರು ಒಂದು ಸಾವಿರ ರೊಹಿಂಗ್ಯಾ ನಿರಾಶ್ರಿತರು ವಾಸವಾಗಿದ್ದಾರೆ. ಸಮೀಪದಲ್ಲಿಯೇ ಮೆಟ್ರೋ ರೈಲಿನ ಕಾಮಗಾರಿ ನಡೆಯುತ್ತಿದ್ದು, ಧೂಳಿನಿಂದ ಕೂಡಿರುವ ಈ ಶಿಬಿರವನ್ನು ಪ್ರವೇಶಿಸಿದರೆ ಸಾಲುಸಾಲಾಗಿ ನಿರ್ಮಿಸಲಾಗಿರುವ ಟರ್ಪಾಲಿನ್ ಹೊದಿಸಿರುವ ಇಕ್ಕಟ್ಟು ಜೋಪಡಿಗಳು, ಅಲ್ಲಲ್ಲಿ ಹರಡಿ ಬಿದ್ದಿರುವ ತ್ಯಾಜ್ಯರಾಶಿಗಳು ಕಣ್ಣಿಗೆ ಬೀಳುತ್ತವೆ. ಜೊತೆಗೆ ಶಿಬಿರದ ಪಕ್ಕದಲ್ಲಿಯೇ ಹರಿಯುತ್ತಿರುವ ಬೃಹತ್ ಚರಂಡಿಯ ಸಹಿಸಲಾಧ್ಯ ದುರ್ನಾತ ಮೂಗಿಗೆ ಹೊಡೆಯುತ್ತದೆ. ಸೊಳ್ಳೆಗಳು ಮತ್ತು ನೊಣಗಳು ಇಲ್ಲಿ ತಮ್ಮ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿವೆ. ದಿಲ್ಲಿಯಲ್ಲಿ ತಾಪಮಾನ ಹೆಚ್ಚಿದಾಗಲಂತೂ ಈ ಜೋಪಡಿಗಳಲ್ಲಿ ಉಸಿರುಗಟ್ಟುವ ವಾತಾವರಣವಿರುತ್ತದೆ.

ನಿರಾಶ್ರಿತರ ಸಮಸ್ಯೆಗಳಿಂದ ತುಂಬಿರುವ ಈ ಜಗತ್ತಿನಲ್ಲಿ ರೊಹಿಂಗ್ಯಾಗಳು ಅತ್ಯಂತ ಕಷ್ಟದಲ್ಲಿರುವ ಜನರಾಗಿದ್ದಾರೆ. ಬೌದ್ಧ ಧರ್ಮದ ಪ್ರಾಬಲ್ಯವಿರುವ ಮ್ಯಾನ್ಮಾರ್‌ನಲ್ಲಿ ಶತಮಾನಗಳಿಂದಲೂ ನೆಮ್ಮದಿಯಿಂದ ಬದುಕಿದ್ದ, ಹೆಚ್ಚಿನವರು ಮುಸ್ಲಿಮರೇ ಆಗಿರುವ ರೊಹಿಂಗ್ಯಾಗಳ ಪೌರತ್ವವನ್ನು 1982ರಲ್ಲಿ ಕಿತ್ತುಕೊಳ್ಳಲಾಗಿದ್ದು, ಇದರಿಂದಾಗಿ ಅವರು ದೇಶರಹಿತರಾಗಿದ್ದಾರೆ.

ಸಾಮೂಹಿಕ ಹತ್ಯೆಗಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಸೇರಿದಂತೆ ಮ್ಯಾನ್ಮಾರ್‌ನ ಭದ್ರತಾ ಪಡೆಗಳು ತಮ್ಮ ಮೇಲೆ ಎಸಗಿದ ಕ್ರೂರ ದಾಳಿಯಿಂದಾಗಿ ರೊಹಿಂಗ್ಯಾಗಳು ಆ ದೇಶದಿಂದ ಪರಾರಿಯಾಗಿ ತಮ್ಮನ್ನು ಸ್ವೀಕರಿಸಲು ಸಿದ್ಧವಿರುವ ಯಾವುದೇ ದೇಶದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸುಮಾರು 14,000 ರೊಹಿಂಗ್ಯಾಗಳು ಭಾರತದಲ್ಲಿದ್ದು, ಈ ಪೈಕಿ 1,000 ಜನರು ದಿಲ್ಲಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.

ದಿಲ್ಲಿಯಲ್ಲಿ ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ರಾಯಭಾರಿ ಕಚೇರಿಯು ಈ ರೊಹಿಂಗ್ಯಾಗಳಿಗೆ ಗುರುತಿನ ಚೀಟಿಗಳನ್ನು ನೀಡಿರುವುದರಿಂದ ಅವರು ಗಡಿಪಾರು ಕ್ರಮದಿಂದ ಪಾರಾಗಿದ್ದಾರೆ. ಆದರೆ ಅವರ ಬದುಕನ್ನು ಉತ್ತಮಗೊಳಿಸಲು ಈ ಗುರುತಿನ ಚೀಟಿ ಯಾವುದೇ ರೀತಿಯಲ್ಲಿಯೂ ಸಹಾಯಕವಾಗಿಲ್ಲ. ಈ ನಿರಾಶ್ರಿತರಿಗೆ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಅತ್ಯಗತ್ಯ ಮೂಲಸೌಕರ್ಯಗಳನ್ನೂ ಒದಗಿಸಲಾಗಿಲ್ಲ.

ಅನೈರ್ಮಲ್ಯದಿಂದ ಕೂಡಿರುವ ಮುರುಕಲು ಜೋಪಡಿಗಳಲ್ಲಿ ಹಸಿವು, ಕಾಯಿಲೆಗಳನ್ನು ಅನುಭವಿಸುತ್ತ ವಾಸವಾಗಿರುವ ಈ ರೊಹಿಂಗ್ಯಾಗಳು ತಮ್ಮ ಭವಿಷ್ಯದ ಅನಿಶ್ಚಿತತೆಯಿಂದ ಕಂಗಾಲಾಗಿದ್ದಾರೆ. ಕೈಪಂಪ್‌ಗಳ ಮೂಲಕ ದೊರೆಯುವ ಅಶುದ್ಧ ನೀರನ್ನೇ ಕುಡಿಯುವ ಅವರಿಗೆ ಶೌಚಾಲಯಗಳಿಲ್ಲ, ಅವರ ಜೋಪಡಿಗಳಿಗೆ ವಿದ್ಯುತ್ ಸಂಪರ್ಕವೂ ಇಲ್ಲ. ಅವರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ, ತಮ್ಮ ಕುಟುಂಬ ನಿರ್ವಹಣೆಯಲ್ಲಿ ನೆರವಾಗಲು ದುಡಿಯುವುದು ಈ ಮಕ್ಕಳಿಗೆ ಅನಿವಾರ್ಯವಾಗಿದೆ.

ಎಲ್ಲ ಸುಖಗಳಿಂದಲೂ ವಂಚಿತರಾಗಿರುವ ಈ ರೊಹಿಂಗ್ಯಾ ಮುಸ್ಲಿಮರ ಸಂಕಷ್ಟಗಳು ಪವಿತ್ರ ರಮಝಾನ್ ತಿಂಗಳಲ್ಲಿ ಇನ್ನಷ್ಟು ಹೆಚ್ಚಿವೆ. ಉಪವಾಸ ವ್ರತವನ್ನು ಆಚರಿಸುತ್ತಿರುವ ಇವರಿಗೆ ಸಂಜೆಯ ಇಫ್ತಾರ್‌ಗೆ ಕನಿಷ್ಠ ಆಹಾರವೂ ಸಿಗುತ್ತಿಲ್ಲ. ಆದರೆ ತಮ್ಮ ಸಂಕಷ್ಟ ಸ್ಥಿತಿಯಲ್ಲಿಯೂ ಈ ಶ್ರದ್ಧಾವಂತರು ಇಸ್ಲಾಮ್‌ನ ತತ್ವಗಳನ್ನು ವಿಧೇಯರಾಗಿ ಪಾಲಿಸುತ್ತಿದ್ದಾರೆ.

2003ರಲ್ಲಿ ಜೀವವುಳಿಸಿಕೊಳ್ಳಲು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮ್ಯಾನ್ಮಾರ್‌ನಿಂದ ಪರಾರಿಯಾಗಿ ದಿಲ್ಲಿ ಸೇರಿಕೊಂಡಿದ್ದ ಅಬ್ದುಲ್ ರಹಮಾನ್ ತನ್ನ ಜೋಪಡಿಯ ಹೊರಗೆ ಮುರುಕಲು ಕುರ್ಚಿಯಲ್ಲಿ ಕುಳಿತುಕೊಂಡು ಅರೆಬೆತ್ತಲೆ ದೇಹದಿಂದ ಹರಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತಿದ್ದರೆ, ಆತನ ಪತ್ನಿ ಜೋಪಡಿಯನ್ನು ತಂಪಾಗಿರಿಸಲು ನೀರು ಸುರಿಯುತ್ತಿದ್ದರು. ವಿದ್ಯುತ್ ಸಂಪರ್ಕವಿಲ್ಲದ್ದರಿಂದ ಈ ಜನರು ಸೆಕೆಯಿಂದ ಪಾರಾಗಲು ಫ್ಯಾನ್‌ಗಳನ್ನೂ ಬಳಸುವಂತಿಲ್ಲ. ಕಿಟಕಿಗಳೂ ಇಲ್ಲದ್ದರಿಂದ ಈ ಜೋಪಡಿಗಳಲ್ಲಿ ಗಾಳಿಯೂ ಆಡುವುದಿಲ್ಲ.

‘‘ನಾನು ಬಾಲ್ಯದಿಂದಲೇ ರಮಝಾನ್ ಉಪವಾಸ ಮಾಡುತ್ತಿದ್ದೇನೆ. ಹೀಗಾಗಿ ಅದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಅಲ್ಲಾಹುವಿನ ಆಜ್ಞೆಗಳನ್ನು ಪಾಲಿಸಲು ನಾನು ಎಂತಹ ಕಷ್ಟವನ್ನಾದರೂ ಸಹಿಸಿಕೊಳ್ಳುತ್ತೇನೆ’’ ಎಂದು ಅಬ್ದುಲ್ ರಹಮಾನ್ ಹೇಳುತ್ತಾರೆ.

ಈ ಶಿಬಿರದಲ್ಲಿ ಉಪವಾಸ ಆಚರಿಸುತ್ತಿರುವ ಹಲವಾರು ರೊಹಿಂಗ್ಯಾ ಮುಸ್ಲಿಮರ ಪೈಕಿ ಅಬ್ದುಲ್ ರಹಮಾನ್ ಒಂದು ಸ್ಯಾಂಪಲ್ ಅಷ್ಟೇ. ಹಫೀಝ್ ಮುಹಮ್ಮದ್ ಇಂತಹ ಇನ್ನೋರ್ವ ಶ್ರದ್ಧಾಳು. ಸಮುದಾಯದ ಕೆಲವು ಮಕ್ಕಳ ನೆರವಿನಿಂದ ಸಂಜೆಯ ಇಫ್ತಾರ್‌ಗೆ ಆಹಾರವನ್ನು ಸಿದ್ಧಗೊಳಿಸುವ ಈತ ಐದು ವರ್ಷಗಳ ಹಿಂದೆ ದೇಶವನ್ನು ಬಿಟ್ಟುಬಂದಿದ್ದರು. ‘‘ನಮ್ಮ ಬದುಕಿನ ಸ್ಥಿತಿಗಳು ನಮ್ಮ ನಂಬಿಕೆಗಳನ್ನು ಬದಲಿಸುವುದಿಲ್ಲ. ಅದು ನಮ್ಮ ಬದ್ಧತೆಯಾಗಿದೆ ಮತ್ತು ಅದನ್ನು ನಾವು ಅನುಸರಿಸುತ್ತೇವೆ’’ ಎಂದಾತ ಹೇಳುತ್ತಾರೆ.

ಹಸೀನಾ ಕೂಡ ಉಪವಾಸ ಆಚರಿಸು ತ್ತಾರೆ. ಹಗಲಿಡೀ ಬಿರುಬಿಸಿಲಿನಲ್ಲಿ ಚಿಂದಿ ಆಯುವ ಕೆಲಸ ಮಾಡುವ ಆಕೆ ಒಂದು ತೊಟ್ಟು ನೀರನ್ನೂ ಸೇವಿಸುವುದಿಲ್ಲ. ‘‘ನನಗೆ ಬಾಯಾರಿಕೆಯಾಗುತ್ತದೆ, ಆದರೆ ನಾನು ಉಪವಾಸವನ್ನು ನಿಲ್ಲಿಸುವಂತಿಲ್ಲ. ಇಲ್ಲದಿದ್ದರೆ ಅಲ್ಲಾಹುವಿಗೆ ಸಿಟ್ಟು ಬರುತ್ತದೆ’’ಎನ್ನುವ ಹಸೀನಾರ ಗಂಡ ಆಸಿಫ್ ರಿಕ್ಷಾ ಓಡಿಸಿ ಅಷ್ಟಿಷ್ಟು ಸಂಪಾದಿಸುತ್ತಾರೆ.

ಬಯಲು ಜಾಗದಲ್ಲಿಯೇ ಇಫ್ತಾರ್‌ಗಾಗಿ ಆಹಾರವನ್ನು ಸಿದ್ಧಗೊಳಿಸಲಾಗುತ್ತದೆ. ಪುರುಷರು, ಮಹಿಳೆಯರು, ಮಕ್ಕಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ‘‘ರಮಝಾನ್ ತಿಂಗಳಲ್ಲಿ ಕೆಲವೊಮ್ಮೆ ಜನರು ಆಹಾರವನ್ನು ಕಳುಹಿಸಿಕೊಡುತ್ತಾರೆ, ಅದನ್ನು ರೋಝಾ ಆಚರಿಸುವವರಿಗೆ ಹಂಚುತ್ತೇವೆ’’ ಎಂದು ಹಫೀಝ್ ಹೇಳುತ್ತಾರೆ.

ಆಹಾರ ಸಿದ್ಧಗೊಂಡ ಬಳಿಕ ಮೊದಲು ಮಕ್ಕಳಿಗೆ ನೀಡಲಾಗುತ್ತದೆ. ತನ್ಮಧ್ಯೆ ಉಪ ವಾಸದಲ್ಲಿರುವ ವಯಸ್ಕರೆಲ್ಲ ಒಂದೆಡೆ ಸೇರಿ ಪ್ರಾರ್ಥನೆಯನ್ನು ಮಾಡಿದ ಬಳಿಕ ಒಂದು ಗುಟುಕು ನೀರು ಸೇವಿಸುವ ಮೂಲಕ ಉಪವಾಸವನ್ನು ಮುರಿಯುತ್ತಾರೆ. ಅದೃಷ್ಟ ವಿದ್ದರೆ ಮಕ್ಕಳಿಗೆ ಹಂಚಿ ಉಳಿದ ಏನಾದರೂ ಆಹಾರ ಅವರಿಗೆ ಸಿಗುತ್ತದೆ.

Writer - ಸೆಹರ್ ಖಾಜಿ

contributor

Editor - ಸೆಹರ್ ಖಾಜಿ

contributor

Similar News