ಕೃಷಿಯನ್ನು ಮರೆಯುತ್ತಿರುವ ಪತ್ರಿಕೋದ್ಯಮ: ಪಿ.ಸಾಯಿನಾಥ್

Update: 2017-06-22 15:17 GMT

 ಬೆಂಗಳೂರು, ಜೂ.22: ಈಗಿನ ಪತ್ರಿಕೋದ್ಯಮ ಕೃಷಿಯನ್ನು ಮರೆಯುತ್ತಿದ್ದು, ಜನರಿಗೆ ಬೇಡವಾದದ್ದನ್ನೇ ಹೆಚ್ಚಾಗಿ ನೀಡುತ್ತಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಮ್ಯೂನಿಕೇಶನ್ ಫಾರ್ ಡೆವಲಪ್‌ಮೆಂಟ್ ಆ್ಯಂಡ್ ಲರ್ನಿಂಗ್ ಹಾಗೂ ನ್ಯಾಶನಲ್ ಫೌಂಡೇಶನ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ, ‘ಸಾಮಾಜಿಕ ಮಾಧ್ಯಮ ಮತ್ತು ಸುದ್ದಿಕೊಠಡಿ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಿನನಿತ್ಯ ಪತ್ರಿಕೆಗಳು ಸೇರಿದಂತೆ ಎಲ್ಲ ರೀತಿಯ ಸಂವಹನ ಮಾಧ್ಯಮಗಳು ಮುಖ್ಯವಾಗಿ ಅಪರಾಧ ಸುದ್ದಿಗಳಿಗೆ ಹೆಚ್ಚು ಸ್ಥಾನ ನೀಡುತ್ತಿದ್ದಾರೆ.ಆದರೆ, ದೇಶದಲ್ಲಿ ಶೇಕಡ 69 ರಷ್ಟು ಕೃಷಿಕರಿದ್ದರೂ, ಅವರನ್ನು ಪರಿಗಣಿಸುತ್ತಿಲ್ಲ. 0.61 ರಷ್ಟು ಮಾತ್ರ ಕೃಷಿ ಸಂಬಂಧ ಚಟುವಟಿಕೆಗಳಿಗೆ ಸ್ಥಾನ ಮೀಸಲಿಟ್ಟಿದ್ದೇವೆ. ಅದು ಅಲ್ಲದೆ, ಕೃಷಿ ವಲಯದ ವರದಿಗಾರ ಎಂದರೆ, ಆತ ಕೃಷಿ ಇಲಾಖೆಯ ಬಗ್ಗೆ ಬರೆಯುತ್ತಿದ್ದಾನೆ ಎಂದು ಸಾಯಿನಾಥ್ ನುಡಿದರು.

ಎರಡು ದಶಕಗಳ ಅವಧಿಯಲ್ಲಿ 50 ದಶಲಕ್ಷ ರೈತರು ಕೃಷಿಯಿಂದ ಹಿಂದೆ ಸರಿದಿದ್ದು, ಪ್ರತಿನಿತ್ಯ ಸರಾಸರಿ ಎರಡು ಸಾವಿರ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದ ಅವರು, ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಮತ್ತೊಂದು ಕಡೆ ಕೃಷಿ ವಸೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಕೆಲಸಕ್ಕಾಗಿ ಬಹುತೇಕರು ಪಟ್ಟಣ ಸೇರುತ್ತಿದ್ದಾರೆ ಎಂದು ಅವರು ಹೇಳಿದರು.

3.10 ಲಕ್ಷ ರೈತರ ಸಾವು: ದೇಶದಲ್ಲಿ 1995ರಿಂದ 2015ರವರೆಗೆ 3.10 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2013ರಲ್ಲಿ ನಡೆದ ಸಮೀಕ್ಷೆ ಪ್ರಕಾರ ರೈತರ ಕುಟುಂಬದ ಮಾಸಿಕ ಆದಾಯ 6,426 ಇತ್ತು. ಇದೇ ಕಾರಣದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.

  ಎಐಸಿಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಸಂಸದ ಪ್ರೊ.ರಾಜೀವ್‌ಗೌಡ ಮಾತನಾಡಿ, ಭೂಮಿಯ ಮೇಲೆ 7 ಶತಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ ಸ್ಮಾರ್ಟ್‌ೆನ್ ಹಾಗೂ ಅಂತರ್ಜಾಲ ಬಳಸುತ್ತಿರುವುದು ಕಡಿಮೆ. ಈಗ ಎಲ್ಲವೂ ಡಿಜಿಟಲ್ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ದೇಶದ ಅರ್ಧದಷ್ಟು ಜನಸಂಖ್ಯೆ ಇನ್ನು ಅಂತರ್ಜಾಲ ಬಳಕೆಯನ್ನು ಮಾಡುತ್ತಿಲ್ಲ ಎಂದರು.

ಸಾಮಾಜಿಕ ಜಾಲತಾಣಗಳು ಸಾರ್ವಜನಿಕರಿಗೆ ಮುಕ್ತ ವೇದಿಕೆ ಕಲ್ಪಿಸಿರುವುದರಿಂದ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶವಿದೆ. ಇದರಿಂದ ತಮ್ಮಲ್ಲಿರುವ ಭಾವನೆಗಳನ್ನು ಹೊರ ಜಗತ್ತಿಗೆ ತಿಳಿಸಲು ಅವಕಾಶವಾಗಿದೆ. ಅಷ್ಟೆ ಅಲ್ಲದೇ, ಇಲ್ಲಿ ನೇರವಾಗಿ ಎಲ್ಲರ ಜತೆ ಮಾತನಾಡುವ ಅವಕಾಶವಿದೆ. ಅದಕ್ಕೆ ಇಂದು ಸಾಮಾಜಿಕ ಜಾಲತಾಣ ಹೆಚ್ಚು ಜನಪ್ರಿಯಗೊಳ್ಳುತ್ತಿದೆ ಎಂದು ಅವರು ಹೇಳಿದರು.

 ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತರಾದ ಪರಂಜಯ್ ಗುಹಾ ಠಾಕೂರ್ಥ, ನೂಪುರ್ ಬಸೂ, ಟಿ.ಎಂ.ವೀರರಾಘವ್, ಎನ್‌ಎ್ಐ ನಿರ್ದೇಶಕ ಅಮಿತಾಬ್ ಬಿಹಾರ್, ಚಿತ್ರನಿರ್ದೇಶಕ ಪ್ರಕಾಶ್‌ಬೆಳವಾಡಿ, ಐಐಜೆಎನ್‌ಎಂ ಪ್ರಧಾನ ಸಂಚಾಲಕಿ ಕಾಂಚನಾ ಕೌರ್, ವಾಸಂತಿ ಹರಿಪ್ರಕಾಶ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

 ‘ಬಹುರಾಷ್ಟ್ರೀಯ ಕಂಪೆನಿಯ ವಸ್ತುಗಳ ಬಿಡುಗಡೆ ವೇಳೆ 500ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಂಡು ಪ್ರಚಾರ ನೀಡಲು ಮುಗಿಬೀಳುತ್ತಾರೆ. ಆದರೆ, ಕೃಷಿ ಚಟುವಟಿಕೆ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಖ್ಯೆ ಕಡಿಮೆಯಾಗಿದ್ದು, ಉದ್ಯಮಕ್ಕೆ ಇಂದಿನ ಪತ್ರಿಕೋದ್ಯಮ ಬಲಿಯಾಗಿದೆ’

-ಪಿ.ಸಾಯಿನಾಥ್, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News