37,222 ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್: ಟಿ.ಬಿ.ಜಯಚಂದ್ರ

Update: 2017-06-22 16:43 GMT

ಬೆಂಗಳೂರು, ಜೂ. 22: ರಾಜ್ಯ ಸರಕಾರ ಪ್ರಸ್ತುತ ಸಾಲಿನಲ್ಲಿ ಆಯವ್ಯಯದಲ್ಲಿ ಘೋಷಿಸಿದಂತೆಯೇ ಸರಕಾರಿ ಪ್ರಥಮ ದರ್ಜೆ, ಸರಕಾರಿ ಪಾಲಿಟೆಕ್ನಿಕ್ ಹಾಗೂ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 37,222 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಗುರುವಾರ ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರಿ ಪಾಲಿಟೆಕ್ನಿಕ್ ಹಾಗೂ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 9722 ವಿದ್ಯಾರ್ಥಿಗಳು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 27,500 ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ರಾಜ್ಯದ 774 ಪೊಲೀಸ್ ಠಾಣೆಗಳ ಪೈಕಿ 711 ಪೊಲೀಸ್ ಠಾಣಾಗಳಲ್ಲಿ 11.61 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು ಎಂದು ಹೇಳಿದರು. ಹಿಂದುಳಿದ ವರ್ಗದ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣಗಳನ್ನು ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಮಂಡ್ಯ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ 80.47 ಕೋಟಿ ರೂ.ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

2018ನೆ ಸಾಲಿನ ಗಣರಾಜ್ಯೋತ್ಸವ ಮುನ್ನಾದಿನದಂದು ನೀಡಲಿರುವ ಪದ್ಮಶ್ರೇಣಿಯ ಪ್ರಶಸ್ತಿಗಾಗಿ ರಾಜ್ಯದ ಗಣ್ಯರ ಹೆಸರುಗಳನ್ನು ಶಿಫಾರಸ್ಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ ಎಂದು ಹೇಳಿದರು. ಕೇಂದ್ರ ಪುರಸ್ಕೃತ ನೀಲಿ ಕ್ರಾಂತಿ ಯೋಜನೆಯ ಮಾರ್ಗಸೂಚಿಗಳನ್ವಯ ಸಾಂದ್ರೀಕೃತ ಮೀನು ಕೃಷಿ ಕೈಗೊಳ್ಳಲು ಹೂಡಿಕೆ ವೆಚ್ಚ ಸೇರಿದಂತೆ ಮೀನುಕೊಳ ನಿರ್ಮಾಣದ ಘಟಕದ ವೆಚ್ಚಕ್ಕೆ 8.50 ಲಕ್ಷ ರೂ. ಹಾಗೂ ಗರಿಷ್ಠ 4.25 ಲಕ್ಷ ರೂ.ನೀಡಲಾಗಿದೆ ಎಂದು ಹೇಳಿದರು.

2014-15ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಉಡುಪಿ ಜಿಲ್ಲೆಯ ಬೆಳಪುವಿನಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರವನ್ನು 126 ಕೋಟಿ ರೂ.ಅಂದಾಜು ಮೊತ್ತದಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳನ್ನು 80 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಹಾಗೂ ರಾಜ್ಯದ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಕವಚ-108 ಯೋಜನೆ ಸೇವೆಯಲ್ಲಿ ವೀಲಿನಗೊಳಿಸಲು ಅರ್ಹ ಸೇವಾದಾರರನ್ನು ಆಯ್ಕೆ ಮಾಡಲು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 12.37 ಕೋಟಿ ರೂ.ಅನುದಾನದಲ್ಲಿ 7737 ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರಿಗೆ ಅನುಸರಣಾ ವ್ಯವಸ್ಥೆಯಡಿ ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ ಕಂಪ್ಯೂಟರ್ ಟ್ಯಾಬ್‌ಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 15.73 ಕೋಟಿ ರೂ.ಗಳ ಅನುದಾನವನ್ನು ಉಪಯೋಗಿಸಿಕೊಂಡು ತಾಲೂಕು ಮಟ್ಟದ 114 ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಪ್ರಾರಂಭಿಸಲು ಹಾಗೂ ಬೆಂಗಳೂರಿನ ಲೀಷಾ ಅವರಿಗೆ ಅನುಕಂಪದ ಆಧಾರದ ಮೇಲೆ ಸಿ ದರ್ಜೆಯ ಉದ್ಯೋಗ ನೀಡಲು ನಿರ್ಧರಿಸಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾರ್ಗಮಧ್ಯದ 28 ಗ್ರಾಮಗಳ 105 ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು 21.68 ಕೋಟಿ ರೂ.ಗಳ ಅಂದಾಜು ಮೊತ್ತದ ಬಹುಗ್ರಾಮದ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಅನುಮೋದನೆ ನೀಡಲಾಗಿದೆ. ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರ ಹೋಬಳಿಯ ಮೂಡುತೋನ್ಸೆ ಗ್ರಾಮದ ಸರ್ವೆ ನಂ.101/1ರಲ್ಲಿ 5080 ಅಡಿಗಳ ಸರಕಾರಿ ಜಾಗವನ್ನು ವಾಸ್ತವ್ಯದ ಉದ್ದೇಶಕ್ಕಾಗಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದರು.

ಕರ್ನಾಟಕ ಅಪ್ರೆಂಟಿಷಿಪ್ ತರಬೇತಿ ಯೋಜನೆಯಡಿ ಹಂತಹಂತವಾಗಿ 50 ಸಾವಿರ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಅನ್ನು ಪಾವತಿಸಲು 60 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ. ಹಾಗೂ ಪ್ರಸ್ತುತ ಸಾಲಿನಲ್ಲಿ ಸರಕಾರಿ ಅಥವಾ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳು ಇಲ್ಲದ ತಾಲೂಕುಗಳಾದ ಚಿಂತಾಮಣಿ, ಗುಬ್ಬಿ, ಕಾರ್ಕಳ, ನರಸಿಂಹರಾಜಪುರ, ಮೂಡಿಗೆರೆ, ರಾಯಭಾಗ, ಯಲ್ಲಾಪುರ, ಮುಧೋಳ, ಶಹಪುರ, ಸುರಪುರ ಮತ್ತು ಮಾನ್ವಿಯಲ್ಲಿ 11 ಕೋಟಿ ರೂ.ಗಳ ಅನುದಾನದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಕಾಳಿ ನದಿಯ ಮೂಲದಿಂದ ಧಾರವಾಡ ಜಿಲ್ಲೆಯ ಆಳ್ನಾವರ ಪಟ್ಟಣಕ್ಕೆ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ 71.90 ಕೋಟಿ ರೂ.ಗಳ ಮೊತ್ತದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ 4 ಸಾವಿರ ಸುಧಾರಿತ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 28 ಕೋಟಿ ರೂ.ಗಳ ಅನುದಾನದಲ್ಲಿ ಖರೀದಿಸಿ ತೀವ್ರತೆರನಾದ ದೈಹಿಕ ವಿಕಲಚೇತನರಿಗೆ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೇಂದ್ರ ಕಮಾಂಡ್ ಸೆಂಟರ್, ರಾಜ್ಯ ಗುಪ್ತವಾರ್ತೆ ಘಟಕದ ಕಚೇರಿ ಮತ್ತು ಸಂಬಂಧಪಟ್ಟ ಕಚೇರಿಗಳನ್ನು ಹೊಂದುವ ಪೊಲೀಸ್ ಪ್ರಧಾನ ಕಚೇರಿ ಕಟ್ಟಡವನ್ನು 80 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News