ಜಿಎಸ್‌ಟಿ: ಟೆಲಿಕಾಂ, ಬ್ಯಾಂಕಿಂಗ್ ಸೇವೆ ದುಬಾರಿ

Update: 2017-06-23 03:59 GMT

ಹೊಸದಿಲ್ಲಿ, ಜೂ.23: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬರಲು ಕ್ಷಣಗಣನೆ ಆರಂಭವಾಗಿರುವಂತೆಯೇ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗುವ ಭೀತಿ ನಾಗರಿಕರಲ್ಲಿ ಎದುರಾಗಿದೆ. ವಿಮೆ, ಬ್ಯಾಂಕಿಂಗ್, ಟೆಲಿಕಾಂ ಹಾಗೂ ಹೋಟೆಲ್ ಉದ್ಯಮ ಸೇರಿದಂತೆ ಸೇವಾ ವಲಯದ ಸೇವೆಗಳು ಜುಲೈ ಒಂದರಿಂದ ದುಬಾರಿಯಾಗುವುದು ಇದಕ್ಕೆ ಕಾರಣ.

ಸಂಭಾವ್ಯ ಹೆಚ್ಚುವರಿ ತೆರಿಗೆ ಬದ್ಧತೆಯ ಹಿನ್ನೆಲೆಯಲ್ಲಿ ಉದ್ಯಮ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮನವೊಲಿಸುವಂತೆ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಎಲ್ಲ ಸಚಿವಾಲಯಗಳಿಗೆ ಕೇಳಿಕೊಂಡಿದೆ. ಸೇವಾ ಕಂಪನಿಗಳು ತಮ್ಮ ಕಚೇರಿಯಲ್ಲಿರುವ ಎಸಿ ಹಾಗೂ ಇತರ ಪೀಠೋಪಕರಣ ಖರೀದಿ ವೇಳೆ ಪಾವತಿಸಿದ ತೆರಿಗೆಯ ಮೊತ್ತಕ್ಕೆ ಟ್ಯಾಕ್ಸ್ ಕ್ರೆಡಿಟ್ ಎನ್ನಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಿಲ್‌ಗಳ ಮೇಲಿನ ತೆರಿಗೆ ಹೊರೆ ಶೇಕಡ 15ರಿಂದ 18ಕ್ಕೆ ಹೆಚ್ಚಲಿದೆ ಎಂದು ಬ್ಯಾಂಕುಗಳು ಈಗಾಗಲೇ ಗ್ರಾಹಕರಿಗೆ ಸೂಚನೆ ನೀಡಿವೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನಿಂದ ಸಿಗುವ ಲಾಭ ಅತ್ಯಲ್ಪವಾಗಿರುವ ಹಿನ್ನೆಲೆಯಲ್ಲಿ ಮಾಸಿಕ ಬಿಲ್ ಹೆಚ್ಚಿಸುವುದು ಅನಿವಾರ್ಯ ಎಂದು ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಹೊರತುಪಡಿಸಿ ಎಲ್ಲ ದೂರಸಂಪರ್ಕ ಸೇವಾ ಸಂಸ್ಥೆಗಳು ಈಗಾಗಲೇ ಸ್ಪಷ್ಟಪಡಿಸಿವೆ.

"ದರಗಳು ಜಿಎಸ್‌ಟಿ ಯುಗದಲ್ಲಿ ಬದಲಾಗುವ ಸಾಧ್ಯತೆ ಇಲ್ಲ. ಅದನ್ನು ಹಾಗೆಯೇ ನಿರ್ವಹಿಸಲಾಗುವುದು. ಅದು ಅದೇ ಮಟ್ಟದಲ್ಲಿ ಇರಲಿವೆ" ಎಂದು ಬಿಎಸ್ಸೆನ್ನೆಲ್ ಅದ್ಯಕ್ಷ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.

ಐಡಿಯಾ ಮತ್ತು ಏರ್‌ಟೆಲ್‌ನಂಥ ಕಂಪನಿಗಳು ಈಗಾಗಲೇ ಅಂತರ ಸಚಿವಾಲಯ ಗುಂಪಿನ ಮುಂದೆ ಅಹವಾಲು ಸಲ್ಲಿಸಿ, ದೂರಸಂಪರ್ಕವನ್ನು ಅಗತ್ಯ ಸೇವೆ ಎಂದು ಪರಿಗಣಿಸಿ, ಶೇಕಡ 18 ತೆರಿಗೆ ಬದಲಾಗಿ 5 ಅಥವಾ ಶೇಕಡ 12ರಷ್ಟು ಜಿಎಸ್‌ಟಿ ವಿಧಿಸಬೆಕು ಎಂದು ಅಗ್ರಹಿಸಿವೆ. ಕಂಪನಿಗಳಿಗೆ ಇನ್‌ಪುಟ್ ತೆರಿಗೆ ಕ್ರೆಡಿಟ್ ಸೌಲಭ್ಯ ಸಿಗುವುದರಿಂದ ಒಟ್ಟಾರೆ ತೆರಿಗೆ ಹೆಚ್ಚುವುದಿಲ್ಲ. ವೆಚ್ಚ ಶೇಕಡ 3ರಷ್ಟು ಕಡಿಮೆಯಾಗುತ್ತದೆ ಎನ್ನುವುದು ಸರ್ಕಾರದ ವಾದ.

ವಿಮಾ ಕಂಪನಿಗಳು ಕೂಡಾ ತೆರಿಗೆ ಹೊರೆಯನ್ನು ಪಾಲಿಸಿದಾರರಿಗೆ ನೇರವಾಗಿ ವರ್ಗಾಯಿಸಲು ಮುಂದಾಗಿವೆ. ಇದರಿಂದ ವಿಮಾಕಂತು ದರ ಹೆಚ್ಚಳವಾಗಲಿದೆ. ಆದರೆ ಕಾಲಾವಧಿ ವಿಮಾ ಯೋಜನೆಗಳ ಮೇಲೆ ಇದರ ಪರಿಣಾಮ ಅತ್ಯಧಿಕವಾಗಿದ್ದು, ಶೇಕಡ 15 ರಷ್ಟು ಇರುವ ತೆರಿಗೆಯನ್ನು ಜಿಎಸ್‌ಟಿ ವ್ಯವಸ್ಥೆಯಲ್ಲಿ ಶೇಕಡ 18ಕ್ಕೆ ಹೆಚ್ಚಿಸಲಾಗಿದೆ.

ವಾರ್ಷಿಕ ಒಂದು ಕೋಟಿ ವಿಮೆಗೆ ಕಂತು ಪಾವತಿಸುತ್ತಿದ್ದರೆ, 25 ಸಾವಿರದಷ್ಟು ಕಂತು ಪಾವತಿಸಬೇಕಾಗುತ್ತದೆ. ಇದರ ಮೇಲೆ ತೆರಿಗೆ ಹೊರೆ 4,500 ರೂ. ಆಗಲಿದ್ದು, ಪ್ರಸ್ತುತ ಇರುವ ದರಕ್ಕಿಂತ 750 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಆದರೆ ಯುಲಿಪ್‌ಗಳಿಗೆ ಈ ಹೊರೆ ಕಡಿಮೆ. ಪ್ರಸ್ತುತ ವಾರ್ಷಿಕ 10 ಸಾವಿರ ರೂ. ವಿಮಾ ಕಂತಿಗೆ 75 ರೂ. ಸೇವಾ ತೆರಿಗೆ ವಿಧಿಸುತ್ತಿದ್ದರೆ, ಇನ್ನು ಮುಂದೆ ಇದು 90 ರೂ. ಆಗಲಿದೆ.
ಪಂಚತಾರಾ ಹೋಟೆಲ್‌ಗಳು ಕೂಡಾ ಈಗಾಗಲೇ ತಮ್ಮ ಗ್ರಾಹಕರಿಗೆ ತೆರಿಗೆ ಹೊರೆ ಹೆಚ್ಚುವ ಬಗ್ಗೆ ಇ-ಮೇಲ್ ಸಂದೇಶ ರವಾನಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News