ವಿದೇಶಗಳಲ್ಲಿ ವ್ಯಾಸಂಗ ನಿಜಕ್ಕೂ ದುಬಾರಿಯೇ.....?

Update: 2017-06-23 09:05 GMT

ವಿದೇಶದಲ್ಲಿ ವ್ಯಾಸಂಗ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುವುದರಿಂದ ಅದು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ಅನ್ವೇಷಿಸುವಂತೆ ಕಾಲೇಜುಗಳೂ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತವೆ. ಹಲವು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಶಿಕ್ಷಣ ತಜ್ಞರು,ಶೈಕ್ಷಣಿಕ ಸಲಹೆಗಾರರನ್ನೂ ಆಹ್ವಾನಿಸುತ್ತವೆ. ಆದರೆ ಮಕ್ಕಳು ವಿದೇಶಗಳಲ್ಲಿ ಓದುವ ಬಯಕೆ ವ್ಯಕ್ತಪಡಿಸಿದರೆ ಪೋಷಕರ ಎದೆಯಲ್ಲಿ ಅವಲಕ್ಕಿ ಕುಟ್ಟತೊಡಗುತ್ತದೆ. ತಮ್ಮ ಆದಾಯದ ಇತಿಮಿತಿಯನ್ನು ಅರಿತಿರುವ ಅವರಿಗೆ ಸಹಜವಾಗಿಯೇ ವಿದೇಶಿ ವ್ಯಾಸಂಗದ ವೆಚ್ಚದ ಬಗ್ಗೆ ಆತಂಕ ಕಾಡುತ್ತದೆ.

ಆದರೆ ವಿದೇಶಿ ವಾಸಂಗ ವೆಚ್ಚದ ಬಗ್ಗೆ ವಿದ್ಯಾರ್ಥಿಗಳಾಗಲೀ ಪೋಷಕರಾಗಲೀ ಕಳವಳ ಪಡಬೇಕಿಲ್ಲ. ವೆಚ್ಚದ ಬಗ್ಗೆ ನೀವು ಕೇಳಿರುವ ಅಥವಾ ನಿರೀಕ್ಷಿಸಿರುವ ಎಲ್ಲವೂ ನಿಜವೇನಲ್ಲ. ವಾಸ್ತವಾಂಶಗಳು ಇಲ್ಲಿವೆ,ಓದಿಕೊಳ್ಳಿ...

ಮಿಥ್ಯೆ 1: ವಿದೇಶಗಳಲ್ಲಿ ವ್ಯಾಸಂಗ ದುಬಾರಿ

ಸತ್ಯ:  ವ್ಯಾಸಂಗ ವೆಚ್ಚ ವಿಶ್ವವಿದ್ಯಾನಿಲಯ, ಸ್ಥಳ, ವ್ಯಾಸಂಗದ ಅವಧಿಯಂತಹ ಹಲವಾರು ಸಂಬಂಧಿತ ಅಂಶಗಳನ್ನು ಆಧರಿಸಿರುತ್ತದೆ. ನಿಮಗೆ ಅನುಕೂಲ ಎನಿಸಿದ್ದನ್ನು ನೀವು ಆಯ್ದಕೊಳ್ಳಬಹುದು.

ಸೇರಬೇಕಾದ ವಿವಿಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಾಗ ಅದು ನಿಮ್ಮ ಬಜೆಟ್‌ಗೆ ಹೊಂದಿಕೊಳ್ಳುತ್ತದೆಯೇ ಎನ್ನುವುದನ್ನು ನೋಡಿಕೊಳ್ಳಿ. ಇಲ್ಲದಿದ್ದರೆ ಇತರ ವಿವಿಗಳ ಕಡೆಗೆ ಕಣ್ಣುಹಾಯಿಸಿ.

ನಿಮ್ಮ ಹಣಕಾಸಿನ ಯೋಜನೆ ಉತ್ತಮವಾಗಿದ್ದರೆ ವಿದೇಶಿ ವ್ಯಾಸಂಗ ಹೊರೆಯಾಗದು. ವ್ಯಾಸಂಗದ ಅವಧಿಯಲ್ಲಿ ಅನಿರೀಕ್ಷಿತ ಒತ್ತಡವೂ ಬೀಳುವುದಿಲ್ಲ. ಮಿತವ್ಯಯದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ವೆಚ್ಚಕ್ಕೆ ಕಡಿವಾಣ ಹಾಕಬಹುದು. ಅಲ್ಲದೆ ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗಗಳಿಗೆ ಅವಕಾಶವಿರುತ್ತದೆ, ಇದು ನಿಮಗೆ ಆದಾಯದ ಜೊತೆಗೆ ಕಾರ್ಯಾನುಭವವನ್ನೂ ನೀಡುತ್ತದೆ.

ಮಿಥ್ಯೆ 2: ವಿದ್ಯಾರ್ಥಿ ವೇತನ ಸಿಗುವುದು ಕಷ್ಟ

ಸತ್ಯ: ಪ್ರತಿಭೆ ಅಥವಾ ಇತರ ಮಾನದಂಡಗಳನ್ನು ಆಧರಿಸಿ ವಿದೇಶಿ ವಿದ್ಯಾರ್ಥಿಗಳಿಗೆ ಹಲವಾರು ವಿದ್ಯಾರ್ಥಿ ವೇತನಗಳು ಲಭ್ಯವಿವೆ. ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಜಪಾನ್‌ನಂತಹ ರಾಷ್ಟ್ರಗಳು ಮತ್ತು ಕೆಲವು ಐರೋಪ್ಯ ದೇಶಗಳು ಅಂತರರಾಷ್ಟ್ರೀಯ ಶಿಕ್ಷಣದ ಬೆಳವಣಿಗೆ ಮತ್ತು ಉತ್ತೇಜನಕ್ಕಾಗಿ ವಿದೇಶಿ ವಿದ್ಯಾರ್ಥಿಗಳ ಸಾಧನೆಯನ್ನು ಪರಿಗಣಿಸಿ ಆರ್ಥಿಕ ನೆರವು, ನಗದು ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಗಳನ್ನು ನೀಡುತ್ತವೆ.

ನೀವು ಯಾವುದೇ ದೇಶದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವ ಜಾಗತಿಕ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಘಟನೆಗಳಿಂದ ಪ್ರವರ್ತಿತ ಕೆಲವು ವಿದ್ಯಾರ್ಥಿ ವೇತನಗಳೂ ಇವೆ. ಹೆಚ್ಚಿನ ವಿವಿಗಳು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕಕ್ಕೆ ಭಾಗಶಃ ಅಥವಾ ಸಂಪೂರ್ಣ ವಿನಾಯಿತಿ ರೂಪದಲ್ಲಿ ವಿದ್ಯಾರ್ಥಿ ವೇತನಗಳನ್ನು ನೀಡುತ್ತವೆ.

ಮಿಥ್ಯೆ 3: ವಿದೇಶಿ ವ್ಯಾಸಂಗಕ್ಕೆ ಉದ್ಯೋಗದಾತರು ಮಹತ್ವ ನೀಡುವುದಿಲ್ಲ

 ಸತ್ಯ: ಶೇ.59ರಷ್ಟು ಉದ್ಯೋಗದಾತರು ವಿದೇಶಿ ವ್ಯಾಸಂಗದ ಅನುಭವವನ್ನು ಅಮೂಲ್ಯವೆಂದು ಪರಿಗಣಿಸುತ್ತಾರೆ. ಅಂತರರಾಷ್ಟ್ರೀಯ ಅನುಭವ, ಹೆಚ್ಚಿನ ಸಾಮಾಜಿಕ ಕೌಶಲ್ಯಗಳು, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಚುರುಕುತನ, ಉತ್ತಮ ಸಂವಹನ ಕಲೆ ಮತ್ತು ಭಾಷಾ ಪ್ರಭುತ್ವ, ಸ್ವಾವಲಂಬನೆ,ಅಪಾಯವನ್ನು ಎದುರಿಸುವ ಎದೆಗಾರಿಕೆ ಇತ್ಯಾದಿಗಳು ವಿದೇಶಿ ವ್ಯಾಸಂಗದಿಂದ ಸಾಧ್ಯ.

ಮಿಥ್ಯೆ 4; ಒಂಟಿಯಾಗಿ ಪ್ರವಾಸವೂ ಇವೇ ಅನುಭವಗಳನ್ನು ನೀಡುತ್ತದೆ.

ಸತ್ಯ: ವಿದೇಶಿ ವ್ಯಾಸಂಗದ ಸುಂದರ ಅಂಶವೆಂದರೆ ಅಲ್ಲಿಯ ಸಂಸ್ಕೃತಿಯೊಂದಿಗೆ ಬೆರೆಯುವ ಅವಕಾಶವನ್ನು ಅದು ಒದಗಿಸುತ್ತದೆ. ಸ್ಥಳೀಯ ಸಮುದಾಯಗಳ ಸಂಪ್ರದಾಯ ಮತ್ತು ಜೀವನಶೈಲಿಗಳ ಆಳವಾದ ನೋಟವನ್ನು ಅದು ಒದಗಿಸುತ್ತದೆ. ಅಲ್ಲದೆ ನಿಮ್ಮ ತರಗತಿಯಲ್ಲಿ ದೇಶವಿದೇಶಗಳ ವಿದ್ಯಾರ್ಥಿಗಳೂ ಇರುವುದರಿಂದ ಅವರೊಂದಿಗಿನ ಸಂವಾದದಿಂದ ನೀವು ಹೆಚ್ಚಿನ ಜ್ಞಾನಕ್ಕೆ ತೆರೆದುಕೊಳ್ಳುತ್ತೀರಿ.

ಮಿಥ್ಯೆ 5: ನನಗೆ ಸ್ನೇಹಿತರಿರುವುದಿಲ್ಲ,ಒಂಟಿಯಾಗುತ್ತೇನೆ

ಸತ್ಯ: ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು,ನಿಮ್ಮ ಸಾಮಾಜಿಕ ಸಂಬಂಧಗಳನ್ನು ವಿಸ್ತಾರಗೊಳಿಸಿಕೊಳ್ಳಲು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ವಿದೇಶಿ ವ್ಯಾಸಂಗವು ನಿಮಗೆ ಸದವಕಾಶವನ್ನು ಒದಗಿಸುತ್ತದೆ. ವಾಸ್ತವದಲ್ಲಿ ಓರಿಯಂಟೇಶನ್ ಕಾರ್ಯಕ್ರಮಗಳು ಮತ್ತು ವಿವಿಧ ತಂಡ ನಿರ್ಮಾಣ ಚಟುವಟಿಕೆಗಳ ಮೂಲಕ ನಿಮ್ಮ ಸಮಾನರ ವಲಯದಲ್ಲಿ ನೀವು ಗುರುತಿಸಿಕೊಳ್ಳುತ್ತೀರಿ.

ಮಿಥ್ಯೆ 6: ಭಾಷೆಯ ಸಮಸ್ಯೆ ಎದುರಾಗುತ್ತದೆ

ಸತ್ಯ: ಹೆಚ್ಚಿನ ವಿದೇಶಿ ವಿವಿಗಳಲ್ಲಿ ಇಂಗ್ಲೀಷ್ ಬೋಧನಾ ಮಾಧ್ಯಮವಾಗಿದೆ. ಆದರೂ ನೀವು ಅರ್ಜಿ ಸಲ್ಲಿಸುವಾಗ ಬೇರೆ ಯಾವುದೇ ಭಾಷೆ ತಿಳಿದಿರಬೇಕಾದ ಪೂರ್ವಾಗತ್ಯ ವಿದೆಯೇ ಎನ್ನುವುದನ್ನು ನೋಡಿಕೊಳ್ಳಿ.

ಶಿಕ್ಷಣ ಕೇಂದ್ರಿತ ಭಾಷಾ ವಿಷಯದ ಜೊತೆಗೆ ವಿದೇಶದಲ್ಲಿ ಹೊಸ ಭಾಷೆ ಅಥವಾ ವಿಭಿನ್ನ ಇಂಗ್ಲೀಷ್‌ಗೆ ತೆರೆದುಕೊಳ್ಳುವುದು ನಿಮ್ಮ ಭಾಷಾ ಪ್ರಭುತ್ವವನ್ನು ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಮಿಥ್ಯೆ 7: ಓದುವುದು ಬಿಟ್ಟು ಬೇರೇನನ್ನೂ ಮಾಡಲಾಗುವುದಿಲ್ಲ

ಸತ್ಯ: ಕ್ಯಾಂಪಸ್ ಚಟುವಟಿಕೆಗಳ ಗೂಡಾಗಿರುತ್ತದೆ. ವಿದೇಶಿ ವಿವಿಗಳಲ್ಲಿ ವ್ಯಾಸಂಗ ಕೇವಲ ಶಿಕ್ಷಣಕ್ಕೆ ಸೀಮಿತವಾಗಿರುವುದಿಲ್ಲ. ಅದು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಲೂ ಅವಕಾಶ ನೀಡುತ್ತದೆ. ನಿಯಮಿತ ತರಗತಿಗಳ ಬಳಿಕ ರಚನಾತ್ಮಕ ಕಲೆ, ಫೋಟೊಗ್ರಫಿ, ಸಂಗೀತ ಇತ್ಯಾದಿ ಕೋರ್ಸ್‌ಗಳಿರುತ್ತವೆ. ರಚನಾತ್ಮಕ ಚಟುವಟಿಕೆಗಳಿಗೆ ಪೂರಕ ಹಲವಾರು ಕ್ಲಬ್‌ಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News