ಪರಮೇಶ್ವರ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ ವಿಶ್ವನಾಥ್

Update: 2017-06-23 12:34 GMT

ಬೆಂಗಳೂರು, ಜೂ.23: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವ ಎಐಸಿಸಿ ಸದಸ್ಯ ಹಾಗೂ ಮಾಜಿ ಸಂಸದ ಎಚ್.ವಿಶ್ವನಾಥ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಬೇಡಿ. ಪಕ್ಷದಲ್ಲೆ ಇರಿ ಎಂದು ಕಾರ್ಯಕರ್ತರು ಇದೇ ಸಂದರ್ಭದಲ್ಲಿ ವಿಶ್ವನಾಥ್‌ಗೆ ಮನವಿ ಮಾಡಿದರು. ಆದರೆ, ಇದಕ್ಕೆ ಯಾವುದೆ ಪ್ರತಿಕ್ರಿಯೆ ನೀಡದ ಅವರು, ಎಲ್ಲರಿಗೂ ಕೈಮುಗಿದು ಮುಗುಳ್ನಗೆ ಬೀರಿ ಅಲ್ಲಿಂದ ತೆರಳಿದರು.

ವಿಶ್ವನಾಥ್ ರಾಜೀನಾಮೆ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಈ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷರಿಗೆ ಕಳುಹಿಸಿಕೊಡಿ ಎಂದು ವಿಶ್ವನಾಥ್ ಹೇಳಿದ್ದಾರೆ. ಹಲವು ಸಂದರ್ಭಗಳಲ್ಲಿ ನಾನು ವಿಶ್ವನಾಥ್ ಮನವೊಲಿಸಲು ಪ್ರಯತ್ನಿಸಿದ್ದೇನೆ. ಆದರೆ, ವಿಶ್ವನಾಥ್ ವಿಚಾರಗಳು ಬೇರೆ ಹಂತದಲ್ಲಿವೆ. ಅವರು ಎಐಸಿಸಿ ಸದಸ್ಯರಾಗಿರುವುದರಿಂದ ರಾಜೀನಾಮೆ ಪತ್ರವನ್ನು ದಿಲ್ಲಿಗೆ ಕಳುಹಿಸಿಕೊಡುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಈವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಜೊತೆ ಚರ್ಚೆ ಮಾಡಿಲ್ಲ. ಸೋಮವಾರ ಸಂಪುಟ ವಿಸ್ತರಣೆಯಾಗಲಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜುಗೆ ಸೇರಿದ್ದ ಎನ್ನಲಾದ ಡೈರಿ ಪ್ರಕರಣದ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿದೆ. ಊಹಾಪೋಹದ ಸುದ್ದಿಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಆದಾಯ ತೆರಿಗೆ ಇಲಾಖೆಯ ಎದುರು ಗೋವಿಂದರಾಜು ಏನು ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತನಿಖೆ ಪ್ರಕ್ರಿಯೆಯೂ ರಹಸ್ಯವಾಗಿರುತ್ತದೆ ಎಂದ ಅವರು, ಗೃಹ ಸಚಿವ ಸ್ಥಾನಕ್ಕೆ ನಾನು ನೀಡಿದ್ದ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News