ನಮ್ಮ ಮೆಟ್ರೋದಲ್ಲಿ ಹಿಂದಿ ನಾಮಫಲಕ ತೆರವುಗೊಳಿಸಲು ಒತ್ತಾಯ

Update: 2017-06-23 12:40 GMT

ಬೆಂಗಳೂರು, ಜೂ.23: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮ ಫಲಕಗಳನ್ನು ಹಾಕಿರುವುದನ್ನು ಈ ಕೂಡಲೇ ತೆಗೆಯಬೇಕು ಎಂದು ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.

ಶುಕ್ರವಾರ ಶಾಂತಿನಗರದ ಬಿಎಂಆರ್‌ಎಲ್ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆಯ ನಾಮ ಫಲಕಗಳನ್ನು ಹಾಕಿರುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚೆನ್ನೈ, ಕೊಚ್ಚಿ ಸೇರಿದಂತೆ ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಮತ್ತು ಆಂಗ್ಲ ಭಾಷೆಗಳಲ್ಲಿ ಮಾತ್ರ ನಾಮಫಲಕಗಳನ್ನು ಹಾಕಲಾಗಿದೆ. ಆದರೆ, ನಮ್ಮ ಮೆಟ್ರೋದಲ್ಲಿ ಮಾತ್ರ ಬಿಎಂಆರ್‌ಸಿಎಲ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಹಿಂದಿಯನ್ನು ಹೇರಿಕೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಕೂಡಲೆ ನಮ್ಮ ಮೆಟ್ರೋದಲ್ಲಿ ಹಾಕಿರುವ ಹಿಂದಿ ನಾಮ ಫಲಕಗಳನ್ನು ತೆರವು ಗೊಳಿಸಬೇಕು. ಇಲ್ಲದಿದ್ದರೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ನಾಮಫಲಕಗಳನ್ನು ತೆರವುಗೊಳಿಸಲಿದ್ದಾರೆ. ಇದಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಅವಕಾಶ ಮಾಡಿಕೊಡಬಾರದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News