ನಾಳೆಯಿಂದ ರಾಜ್ಯಾದ್ಯಂತ ತೊನ್ನು ಜನಜಾಗೃತಿ ಜಾಥ

Update: 2017-06-23 12:55 GMT

ಬೆಂಗಳೂರು, ಜೂ.23: ವಿಶ್ವ ತೊನ್ನು ರೋಗ ದಿನದ ಅಂಗವಾಗಿ ಜೂ.25ರಿಂದ ಜು.20 ರವರೆಗೆ ರಾಜ್ಯಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಚರ್ಮ, ಲೈಂಗಿಕ ಹಾಗೂ ಕುಷ್ಠ ರೋಗಗಳ ತಜ್ಞರ ಸಂಘದಿಂದ ತೊನ್ನು ರೋಗ ಜನ ಜಾಗೃತಿ ಅಭಿಯಾನ ಹಾಗೂ ಜಾಥ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡರಾದ ಡಾ.ಬಿ.ಎಸ್.ಚಂದ್ರಶೇಖರ್, ತೊನ್ನು ರೋಗ ಎಂಬುದು ಮಾನಸಿಕ ಕಾಯಿಲೆಯಾಗಿದ್ದು, ಇದರಿಂದ ದೇಹದ ಯಾವುದೇ ಭಾಗಗಳಿಗೆ ತೊಂದರೆಯಾಗುವುದಿಲ್ಲ. ಆದರೆ, ಸಮಾಜದಲ್ಲಿ ಈ ಕಾಯಿಲೆ ಬಂದವರನ್ನು ಕೀಳಾಗಿ ಕಾಣುವುದು, ನಿರ್ಲಕ್ಷದಿಂದ ನೋಡುವ ಪರಿಸ್ಥಿತಿ ಇರುವುದರಿಂದ ತೊನ್ನಿಗೆ ತುತ್ತಾದವರು ಮಾನಸಿಕವಾಗಿ ಬಳಲುತ್ತಿರುತ್ತಾರೆ ಎಂದರು.

ತೊನ್ನು ಕಾಯಿಲೆ ಎಂಬುದು ಚರ್ಮ ಬಿಳಿಯಾಗುವ ಒಂದು ಸ್ಥಿತಿ. ಅದು ವ್ಯಕ್ತಿಯ ಅಥವಾ ರೋಗಿಯ ರೂಪವನ್ನು ಬದಲಾಯಿಸಿದಾಗ ಮಾನಸಿಕ ಆತಂಕ ಉಂಟಾಗುತ್ತದೆ. ಈ ಕಾಯಿಲೆಯು 18 ರಿಂದ 20 ವರ್ಷದ ವಯಸ್ಸಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಚಿಕಿತ್ಸೆಯ ಮೊದಲ ಆದ್ಯತೆಯ ರೋಗವನ್ನಾಗಿ ಹತೋಟಿಗೆ ತರಬಹುದು. ಇದಕ್ಕಾಗಿ ರೋಗ ಹರಡದಂತೆ ಸ್ಟಿರಾಯಿಡ್, ಟ್ರಾಕ್ರೋಲಿಮಸ್ ಹಾಗೂ ಇನ್ನಿತರೆ ಔಷಧಿಗಳಿಂದ ಶರೀರದ ರೋಗ ನಿರೋಧಕ ಶಕ್ತಿಯನ್ನು ಮಾರ್ಪಡಿಸಬಹುದು. ಅಲ್ಲದೆ, ಶಸ್ತ್ರ ಚಿಕಿತ್ಸೆಯಿಂದ ಕ್ಲಿಷ್ಟಕರವಾದ ಮಚ್ಚೆಗಳನ್ನು ಮತ್ತೆ ಕಪ್ಪಾಗಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಹೀಗಾಗಿ ಸಾರ್ವಜನಿಕರಿಗೆ ತೊನ್ನು ರೋಗಿಗಳ ಬಗ್ಗೆ ಕಾಳಜಿ ಇರಲಿ. ಈ ರೋಗದಿಂದ ಬಳಲುವವರು ಬಹಳಷ್ಟು ಮಾನಸಿಕ ತಳಮಳ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ವ್ಯಕ್ತಿಗಳನ್ನು ಅವರಿಗೆ ಬೇಸರ ಪಡಿಸುವಂತೆ ನೋಡುವುದು, ಮಾತನಾಡುವುದು ಮಾಡಬಾರದು. ಎಲ್ಲದರಲ್ಲೂ ಅವರಿಗೂ ಭಾಗವಹಿಸುವಂತೆ ಪ್ರೇರೇಪಿಸಿ ಎಂದು ಜಾಗೃತಿ ಮೂಡಿಸುವ ಸಲುವಾಗಿ 20 ದಿನಗಳ ಕಾಲ ಈ ಜಾಥ ಸಂಚರಿಸಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News