ಆ.9 ರೊಳಗೆ ಇಂದಿರಾ ಕ್ಯಾಂಟೀನ್ ಸಾರ್ವಜನಿಕ ಸೇವೆಗೆ ಮುಕ್ತ

Update: 2017-06-23 12:57 GMT

ಬೆಂಗಳೂರು, ಜೂ. 23: ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ ಘಟಕಗಳನ್ನು ಆ.9 ರೊಳಗೆ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುತ್ತದೆ ಎಂದು ಮೇಯರ್ ಜಿ.ಪದ್ಮಾವತಿ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್ ಘಟಕಗಳನ್ನು ತಯಾರಿಸುತ್ತಿರುವ ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಕೆಇಎಫ್‌ಇಂಟ್ರ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್, ಭೀಮ್ ಮಾದರಿಯಲ್ಲಿರುವ ಈ ಕ್ಯಾಂಟೀನ್‌ಗಳನ್ನು ಮೂರು ದಿನಗಳಲ್ಲಿ ತಯಾರಿಸಬಹುದು ಎಂದರು.

ಇದೀಗ ತಯಾರಿಸುತ್ತಿರುವ ಪ್ರತಿಯೊಂದು ಕ್ಯಾಂಟೀನ್ ಘಟಕಕ್ಕೆ 28 ಲಕ್ಷ ಖರ್ಚಾಗುತ್ತಿದೆ. ಇವು ಸದೃಢವಾಗಿದ್ದು, ಮಾಮೂಲಿ ಕಟ್ಟಡಗಳ ರೀತಿಯಲ್ಲಿಯೇ ಇರಲಿದ್ದು, ಕನಿಷ್ಠ 100 ವರ್ಷ ಬಾಳಿಕೆ ಬರುತ್ತವೆ. ಈ ಕ್ಯಾಂಟೀನ್‌ನಲ್ಲಿ ಒಟ್ಟಿಗೆ 80 ಜನರು ಕುಳಿತು ಊಟ ಮಾಡಬಹುದಾಗಿದೆ. ಹಿರಿಯ ನಾಗರಿಕರಿಗೆ ವಿಶೇಷವಾಗಿ 8 ಆಸನಗಳನ್ನು ಮೀಸಲಿಡಲಾಗಿದೆ. ಎಂಟು ಪ್ರವೇಶದ್ವಾರಗಳಿದ್ದು, 40X40 ಪ್ರದೇಶದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ ಎಂದು ಹೇಳಿದರು.

ಈಗಾಗಲೇ ಪ್ರಕಾಶನಗರದ ಕೆಲವೊಂದು ಮೆಟ್ರೋ ನಿಲ್ದಾಣದಲ್ಲಿ ಘಟಕಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಸ್ಥಳಕ್ಕೆ ಭೇಟಿ ನೀಡಿದ್ದು, ಈ ಕ್ಯಾಂಟೀನ್‌ಗಳ ಸಾಮರ್ಥ್ಯದ ಬಗ್ಗೆ ಪೂರ್ಣ ನಂಬಿಕೆ ಬಂದಿದೆ. ಹೀಗಾಗಿ ಶೀಘ್ರದಲ್ಲಿಯೇ ಎಲ್ಲ ವಾರ್ಡ್‌ಗಳಲ್ಲಿ ಘಟಕ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡು ಮುಂದಿನ ಆ.9 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಮೇಯರ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News