ಮೋಜಿಗಾಗಿ ವ್ಹೀಲಿಂಗ್: 65ಕ್ಕೂ ಹೆಚ್ಚು ಬೈಕ್ ವಶಕ್ಕೆ,

Update: 2017-06-23 13:01 GMT

ಬೆಂಗಳೂರು, ಜೂ.23: ಮಧ್ಯರಾತ್ರಿ ವೇಳೆಯಲ್ಲಿ ಮೋಜು ಮಸ್ತಿಗಾಗಿ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ 65ಕ್ಕೂ ಹೆಚ್ಚು ಬೈಕ್‌ಗಳನ್ನು ಹಾಗೂ ಕೆಲ ಕಾರು, ಆಟೊರೀಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
 
ಗುರುವಾರ ಮಧ್ಯರಾತ್ರಿ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಯುವಕರನ್ನು ತಡೆದು ನಿಲ್ಲಿಸಿ ರಸ್ತೆ ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ 65 ಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ.

ಕೆಆರ್‌ಪುರ, ದೇವನಹಳ್ಳಿ, ಕೆಂಗೇರಿ, ಹೊಸೂರು ಮುಖ್ಯರಸ್ತೆ ಸೇರಿ ವಿವಿಧಕಡೆ ಕೆಲ ಬೈಕ್ ಸವಾರರು ಹೆದ್ದಾರಿಯಲ್ಲಿ ಕರ್ಕಶ ಶಬ್ದ ಮಾಡಿಕೊಂಡು, ವ್ಹೀಲಿಂಗ್ ಮಾಡುವ ಮೂಲಕ ಆತಂಕ ಸೃಷ್ಟಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಗೊರಗುಂಟೆಪಾಳ್ಯದಿಂದ ಆರಂಭವಾಗುವ ನೆಲಮಂಗಲ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಿ ರಸ್ತೆಯುದ್ದಕ್ಕೂ ಪೊಲೀಸ್ ನಿಂತು ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ಕ್ರಮ ಕೈಗೊಂಡಿದ್ದಾರೆ.

ಅದೇ ರೀತಿ, ತುಮಕೂರು ರಸ್ತೆಯ ಪಾರ್ಲೆ ಫ್ಯಾಕ್ಟರಿ ಬಳಿ ಪೊಲೀಸರು ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅರ್ಧದಷ್ಟು ಬೈಕ್ ಸವಾರರು ಹಿಂದಕ್ಕೆ ಚಲಿಸಿದರೆ, ಇನ್ನೊಂದಿಷ್ಟು ಮಂದಿ ರಸ್ತೆ ಡಿವೈಡರ್ ಮೇಲೆ ಬೈಕ್ ಹತ್ತಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಬೆಂಗಳೂರು ನಗರ ಹಾಗೂ ಗ್ರಾಮಾತಂರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News