ಜೈಲಿನಿಂದ ಬಂದಿದ್ದ ರೌಡಿಯ ಹತ್ಯೆ

Update: 2017-06-23 13:55 GMT

ಬೆಂಗಳೂರು, ಜೂ.23: ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ರೌಡಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ದುರ್ಘಟನೆ ಇಲ್ಲಿನ ಕಾಡುಗೊಂಡನಹಳ್ಳಿ(ಕೆ.ಜಿ)ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಿನಗಳ ಹಿಂದೆ ನಗರದ ಬಾಗಲೂರು ಲೇಔಟ್‌ನ 6ನೆ ಕ್ರಾಸ್‌ನ ಮನೆಗೆ ಹತ್ತಿರದ ಅಂಗಡಿಯಲ್ಲಿ ಟೀ ಕುಡಿಯಲು ನಡೆದುಕೊಂಡು ಹೋಗುತ್ತಿದ್ದ ಪಳನಿ(40)ಯನ್ನು ಸಿನಿಮೀಯ ರೀತಿಯಲ್ಲಿ ಮುಖಗವಸು ಹಾಕಿಕೊಂಡು ಏಕಾಎಕಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ಸುತ್ತುವರೆದಿದ್ದಾರೆ.

ದುಷ್ಕರ್ಮಿಯೊಬ್ಬ ಮಾರಕಾಸ್ತ್ರದಿಂದ ಹೊಡೆದ ತಕ್ಷಣ ತಪ್ಪಿಸಿಕೊಂಡು ರಕ್ಷಣೆಗಾಗಿ ಕೂಗಿಕೊಂಡು ಓಡುತ್ತಿದ್ದ ಪಳನಿಯನ್ನು ಬೆನ್ನಟ್ಟಿದ ಇತರ ದುಷ್ಕರ್ಮಿಗಳು ಮಚ್ಚುಗಳಿಂದ ಹೊಡೆದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಳೆದ್ವೇಷದ ಶಂಕೆ: ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಪಳನಿ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಈತನ ಬಿಡುಗಡೆಗಾಗಿಯೇ ಕಾದಿದ್ದ ರೌಡಿ ಮಹೇಶ್ ಮತ್ತು ಸಹಚರರೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿಂದೆ ಮಹದೇವಪುರದಲ್ಲಿ ರೌಡಿ ಮಹೇಶ ಈಗ ಕೊಲೆಯಾಗಿರುವ ಪಳನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದನು ಎನ್ನಲಾಗಿದೆ.

ಪಳನಿಯನ್ನೆ ಕೊಲೆ ಮಾಡಿದ್ದ: ಕೊಲೆಯಾಗಿರುವ ರೌಡಿ ಪಳನಿ, ಈ ಹಿಂದೆ ಮತ್ತೊಬ್ಬ ರೌಡಿ ಪಳನಿ ಎಂಬಾತನನ್ನು ಕೊಲೆ ಮಾಡಿದ್ದ. ಪಳನಿ ಎಂಬ ಹೆಸರಿನ ರೌಡಿ ತಾನೊಬ್ಬನೆ ಇರಬೇಕು ಎಂಬ ಕಾರಣಕ್ಕೆ ನಗರದ ಹಾಸ್‌ಮ್ಯಾಟ್ ಆಸ್ಪತ್ರೆಗೆ ನುಗ್ಗಿ ಪಳನಿ ಎಂಬ ಮತ್ತೊಬ್ಬ ರೌಡಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ. ಈಗ ಕೊಲೆಯಾಗಿರುವ ಪಳನಿಯ ಮೇಲೆ ಹಲ್ಲೆ, ಕೊಲೆ, ಸುಲಿಗೆ ಬೆದರಿಕೆ ಸೇರಿ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಳನಿ ಮೃತದೇಹವನ್ನು ಬೆಂಗಳೂರಿನ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೊಲೆ ನಡೆದ ಸ್ಥಳಕ್ಕೆ ಕಾಡುಗೊಂಡನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News