ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ: ಗೋವಿಂದರಾಜು

Update: 2017-06-23 14:34 GMT

ಬೆಂಗಳೂರು, ಜೂ.23: ನನ್ನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ನಿಜ. ತನಿಖಾಧಿಕಾರಿಗಳ ಎದುರು ಈಗಾಗಲೆ ಎಲ್ಲ ಆರೋಪಗಳನ್ನು ನಿರಾಕರಿಸಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದೇನೆ ಎಂದು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿವೆ. ಇದನ್ನು ಯಾರು ಮಾಡಿಸುತ್ತಿದ್ದಾರೆಂದು ನನಗೆ ಮಾಹಿತಿಯಿಲ್ಲ ಎಂದರು.

ಇದು ಒಂಥರಾ ಹಳೆಯ ಯಂತ್ರಕ್ಕೆ ಆಯುಧ ಪೂಜೆ ಮಾಡಿದಂತಿದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ತಪ್ಪು ಮಾಹಿತಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೋವಿಂದರಾಜು ತಿಳಿಸಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನನ್ನ ಮನೆಯಲ್ಲಿ ಸಿಕ್ಕಿದೆ ಎನ್ನಲಾಗುತ್ತಿರುವ ಡೈರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅದನ್ನು ಯಾರೋ ನನ್ನ ಮನೆಯಲ್ಲಿ ತಂದಿಟ್ಟಿದ್ದಾರೆ ಎಂದು ನಾನು ಈಗಾಗಲೆ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಡೈರಿ ನನ್ನದಲ್ಲ. ಅದರಲ್ಲಿ ಇದೆ ಎನ್ನಲಾಗುತ್ತಿರುವ ಬರವಣಿಗೆಯೂ ತಮ್ಮದಲ್ಲ ಎಂದು ಈಗಾಗಲೆ ಸ್ಪಷ್ಟಪಡಿಸಿದ್ದೇನೆ. ಬರವಣಿಗೆಯ ಸತ್ಯಾಸತ್ಯತೆ ತಿಳಿಯಬೇಕಾದರೆ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಎಂದು ನಾನೇ ಹೇಳಿದ್ದೇನೆ ಎಂದು ಗೋವಿಂದರಾಜು ತಿಳಿಸಿದರು.

ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ಗೋವಿಂದರಾಜು ತನಿಖಾಧಿಕಾರಿ ಬಳಿ ತಪ್ಪೊಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು. ಈ ಬಗ್ಗೆ ಯಾವುದೇ ದಾಖಲೆಗಳಿದ್ದರೂ ಅದು ನಕಲಿ ಎಂದು ಸ್ವತಃ ಆದಾಯತೆರಿಗೆ ಇಲಾಖೆಯ ಮಹಾನಿರ್ದೇಶಕರೇ ಹೇಳಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರ ಷಡ್ಯಂತ್ರವಿದೆ ಎಂದೆನಿಸುತ್ತದೆ ಎಂದರು.

ರೈತರ ಸಾಲ ಮನ್ನಾದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಹೆಚ್ಚುತ್ತಿರುವ ಜನಪ್ರಿಯತೆಗೆ ಮಸಿ ಬಳಿಯಲು ಈ ಡೈರಿ ವಿಷಯವನ್ನು ಮತ್ತೆ ಪ್ರಸ್ತಾಪ ಮಾಡಲಾಗುತ್ತಿದೆ. ಗೋವಿಂದರಾಜು ಈಗಾಗಲೇ ಹಲವಾರು ಬಾರಿ ಡೈರಿ ತನ್ನದಲ್ಲವೆಂದು ಅಲ್ಲಗೆಳೆದಿದ್ದಾರೆ ಎಂದು ಅವರು ಹೇಳಿದರು.

ಸಹಾರಾ-ಬಿರ್ಲಾ ಡೈರಿ, ಎಲ್.ಕೆ.ಅಡ್ವಾಣಿ ಡೈರಿ, ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿರುವ ವಿಚಾರದ ಕುರಿತು ಅನಂತ್‌ಕುಮಾರ್ ಹಾಗೂ ಯಡಿಯೂರಪ್ಪ ನಡುವೆ ಅವರ ಪಕ್ಷದ ಕಚೇರಿಯಲ್ಲಿ ನಡೆದಿರುವ ಸಂವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಲು ಸಿದ್ಧರಿದ್ದಾರೆಯೇ ಎಂದು ಉಗ್ರಪ್ಪ ಸವಾಲು ಹಾಕಿದರು.

ರಾಜ್ಯದ 160 ತಾಲೂಕು ಬರಪೀಡಿತವಾಗಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರಕಾರ ಸಹಕಾರ ಸಂಘಗಳಲ್ಲಿನ 8165 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಇದರಿಂದ 22.27 ಲಕ್ಷ ರೈತರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿನ ರೈತರ ಮೇಲೆ 52,572 ಕೋಟಿ ರೂ.ಸಾಲವಿದೆ. ಈ ಪೈಕಿ ಸಹಕಾರ ಸಂಘಗಳಲ್ಲಿ 10,736 ಕೋಟಿ ರೂ.ಸಾಲವಿದೆ ಎಂದು ಅವರು ತಿಳಿಸಿದರು.


ಕೇಂದ್ರ ಸರಕಾರ ರೈತ ವಿರೋಧಿ ಮನಸ್ಥಿತಿಯನ್ನು ಹೊಂದಿದೆ. ರೈತರ ಸಾಲ ಮನ್ನಾ ಮಾಡುವುದನ್ನು ಫ್ಯಾಷನ್ ಎಂದಿರುವ ಕೇಂದ್ರ ಸಚಿವ ವೆಂಕಯ್ಯನಾಯ್ಡು ಬೇಷರತ್ ಆಗಿ ದೇಶದ ರೈತರ ಕ್ಷಮೆಯಾಚಿಸಬೇಕು. ಯಡಿಯೂರಪ್ಪ ಸೇರಿದಂತೆ 17 ಮಂದಿ ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ, ಎಸ್.ರವಿ, ಆರ್.ಬಿ.ತಿಮ್ಮಾಪುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News