ಜಂತಕಲ್ ಮೈನಿಂಗ್ ಕಿಕ್‌ಬ್ಯಾಕ್; ಸಾಬೀತಾದರೆ ಸಾರ್ವಜನಿಕವಾಗಿ ನೇಣಿಗೇರಲು ಸಿದ್ಧ: ಎಚ್‌ಡಿಕೆ

Update: 2017-06-23 14:43 GMT

ಬೆಂಗಳೂರು, ಜೂ.23: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ತಾನು ಕಿಕ್ ಬ್ಯಾಕ್ ಪಡೆದಿರುವುದು ಸಿಬಿಐ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ನೇಣಿಗೇರಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಶುಕ್ರವಾರ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಹೆಸರಿಗೆ ಕಪ್ಪುಮಸಿ ಬಳಿಯಲು ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಇದಕ್ಕೆಲ್ಲ ತಾನು ಹೆದರುವುದಿಲ್ಲ ಎಂದರು.
ತಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಾವುದೇ ಅಕ್ರಮದಲ್ಲಿ ಭಾಗಿ ಆಗಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ವಿನಾಕಾರಣ ಸುಳ್ಳು ಆರೋಪ, ಅಪಪ್ರಚಾರವನ್ನು ತಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಪತ್ರಕರ್ತರು ಜೈಲಿಗೆ ಸಲ್ಲ: ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರನ್ನು ಜೈಲಿಗೆ ಕಳುಹಿಸುವ ಸಂಬಂಧ ವಿಧಾನಸಭೆ ನಿರ್ಣಯ ಸರಿಯಲ್ಲ. ಇದು ಅನಾರೋಗ್ಯಕರ. ಇದನ್ನು ತಡೆಗಟ್ಟಲು ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರಿಗೆ ಮನವಿ ಮಾಡುವೆ ಎಂದು ಕುಮಾರಸ್ವಾಮಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳಿಗೆ ನಮ್ಮಂತವರೆ ಸುದ್ದಿ ಕೊಟ್ಟು ಬರೆಸಿರುತ್ತೇವೆ. ಪ್ರಕಟಿಸುವ ವೇಳೆ ಬಲ್ಲ ಮೂಲಗಳಿಂದ ಅಂತ ಹೇಳಿರುತ್ತೇವೆ. ಅದರ ಆಧಾರದ ಮೇಲೆ ಮಾಧ್ಯಮದವರು ಬರೆಯುತ್ತಾರೆ. ಹೀಗೆ ನಾವೇ ಮಾಧ್ಯಮದವರ ಕೈಲಿ ಬರೆಸಿ, ಆನಂತರ ನಾವೇ ಸತ್ಯಹರಿಶ್ಚಂದ್ರರ ತರ ಅವರನ್ನು ಜೈಲಿಗೆ ಕಳಿಸುತ್ತೇವೆ ಎನ್ನುವುದು ಸಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News