ಪತ್ನಿಯ ಕೊಲೆ ಆರೋಪಿ ಖುಲಾಸೆ

Update: 2017-06-23 15:43 GMT

ಮಂಗಳೂರು, ಜೂ. 23: ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ನಿವಾಸಿ ಮೇರಿ ಅವರನ್ನು ಎರಡೂವರೆ ವರ್ಷಗಳ ಹಿಂದೆ ಮಾನಸಿಕ ಕಿರುಕುಳ ಮತ್ತು ದೈಹಿಕ ಹಿಂಸೆ ನೀಡಿ ಕತ್ತಿಯಿಂದ ಕಡಿದು ಮೈಗೆ ಸೀಮೆ ಎಣ್ಣೆ ಸುರಿದು ಕೊಲೆಗೈದ ಪ್ರಕರಣದ ಆರೋಪಿಯೋರ್ವನನ್ನು ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಮೇರಿ ಅವರ ಪತಿ ಆ್ಯಂಟನಿ ಎಂ.ಪಿ. ಯಾನೆ ಟೋಮಿ (44) ಎಂಬಾತ ಖುಲಾಸೆಗೊಂಡಿರುವ ಆರೋಪಿ.
    
1993 ಜೂ. 14 ರಂದು ಮೇರಿ ಮತ್ತು ಆ್ಯಂಟನಿಯವರ ವಿವಾಹ ನಡೆದಿತ್ತು. ಸುಮಾರು 3 ವರ್ಷಗಳ ಹಿಂದೆ ಪತಿ ಆ್ಯಂಟನಿ ಪತ್ನಿ ಮೇರಿ ಜೊತೆ ಆಗಾಗ ಜಗಳಾಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದನು. 2014 ಡಿಸೆಂಬರ್ 29 ರಂದು ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕಾಗಿ ಮೇರಿ ಜೊತೆ ಜಗಳಾಡಿದ ಆ್ಯಂಟನಿ ಆಕೆಯ ಕೈಗೆ ಕತ್ತಿಯಿಂದ ಕಡಿದು ಬಳಿಕ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು ಎಂದು ಆರೋಪಿಸಲಾಗಿತ್ತು. ತೀವ್ರ ಸುಟ್ಟ ಗಾಯಗೊಂಡಿದ್ದ ಮೇರಿ ಅವರು ಚಿಕಿತ್ಸೆ ಲಕಾರಿಯಾಗದೆ 2015 ಜನವರಿ 3 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಈ ಬಗ್ಗೆ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಬಿ. ಅವರು ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಆರೋಪಿಯನ್ನು ಖುಲಾಸೆಗೊಳಿಸಿ ಜೂ. 19 ರಂದು ತೀರ್ಪು ನೀಡಿದರು. ಆರೋಪಿಯ ಪರವಾಗಿ ವಕೀಲ ಭುವನೇಶ್ವರ ಇಡಾಳ ಅವರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News