ಬಿಜೆಪಿ ಮುಖಂಡ ಬಿ.ಎನ್.ನಾಗರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಜೂ.23: ಕಳೆದ ವರ್ಷ ಆನೇಕಲ್ ಪಟ್ಟಣದಲ್ಲಿ ನಡೆದ ಪ್ರಭು ಎಂಬ ಯುವಕನ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಹಾಗೂ ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ ಬಿ.ಎನ್.ನಾಗರಾಜ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನಾಗರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರನ್ನು ಪೊಲೀಸರು ಈಗಾಗಲೇ ಬಂಧಿಸಿರುವುದರಿಂದ ನಿರೀಕ್ಷಣಾ ಜಾಮೀನು ಮಂಜೂರು ಅರ್ಜಿ ಮಾನ್ಯತೆ ಕಳೆದುಕೊಂಡಿದೆ. ಹೀಗಾಗಿ, ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.
ಆನೇಕಲ್ ಪಟ್ಟಣದ ಐಶ್ವರ್ಯ ಬಾರ್ ಮತ್ತು ರೆಸ್ಟೋರೆಂಟ್ ಬಳಿ 2016ರ ಡಿ.29ರಂದು ರಾತ್ರಿ ಸಂಜಯ್, ಥಾಳಿ ಮಂಜ ಹಾಗೂ ಇತರೆ ನಾಲ್ವರ ತಂಡ ಪ್ರಭು ಅವರನ್ನು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿತ್ತು. ಬಿಜೆಪಿ ಮುಖಂಡ ಮತ್ತು ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ ಬಿ.ಎನ್.ನಾಗರಾಜ್ ಪ್ರಭು ಕೊಲೆಯ ಸೂತ್ರಧಾರ ಎಂದು ಆರೋಪಿಸಲಾಗಿದೆ. ಇದರಿಂದ ತಲೆ ಮರೆಸಿಕೊಂಡಿದ್ದ ನಾಗರಾಜ್ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.