ಸರಕಾರಕ್ಕೆ ಆಡಳಿತ ನಡೆಸುವುದಕ್ಕೆ ಬರುವುದಿಲ್ಲ: ಹೈಕೋರ್ಟ್ ಅಸಮಾಧಾನ

Update: 2017-06-23 15:52 GMT

ಬೆಂಗಳೂರು, ಜೂ.23: ರಾಜ್ಯ ಸರಕಾರಕ್ಕೆ ಆಡಳಿತ ನಡೆಸಲು ಬರುವುದಿಲ್ಲ. ಜನರ ಅನುಕೂಲಕ್ಕಾಗಿ ಉತ್ತಮ ನೀತಿ ರೂಪಿಸಿದರೂ, ಅದರ ಅನುಷ್ಠಾನ ವಿಧಾನ ಮಾತ್ರ ಸರಿಯಾಗಿ ನಡೆಸುವುದಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಗೆ ಹೆಚ್ಚಿನ ಮೊತ್ತದ ಬಿಡ್ ಮಾಡಿದ್ದರಿಂದ ಮಂಜೂರು ಮಾಡಿದ್ದ ಪರವಾನಗಿ ರದ್ದುಪಡಿಸಿ, ಮರು ಟೆಂಡರ್‌ಗೆ ಆದೇಶಿಸಿದ್ದ ಸರಕಾರದ ಕ್ರಮ ಪ್ರಶ್ನಿಸಿ ಎಚ್.ಕೆ. ಮಹೇಂದ್ರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ. ರಮೇಶ್ ನೇತೃತ್ವದ ವಿಭಾಗೀಯ ಪೀಠ, ಸರಕಾರ ಕಾರ್ಯವೈಖರಿಗೆ ಹೀಗೆ ಬೇಸರ ವ್ಯಕ್ತಪಡಿಸಿತ್ತು. ಅಲ್ಲದೆ, ಅರ್ಜಿದಾರರಿಗೆ ಮಂಜೂರು ಮಾಡಿದ್ದ ಗುತ್ತಿಗೆ ಪರವಾನಗಿ ರದ್ದಪಡಿಸಿದ್ದ ಹಾಗೂ ಮರು ಟೆಂಡರ್‌ಗೆ ಆದೇಶಿಸಿದ್ದ ಕ್ರಮಕ್ಕೆ ತಡೆಯಾಜ್ಞೆ ನೀಡಿತು.

   
ವಿಚಾರಣೆ ವೇಳೆ ಸರಕಾರದ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೈಕೋರ್ಟ್, ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗಲಿ ಎಂಬ ಸದುದ್ದೇಶದಿಂದ ಸರಕಾರ ನೀತಿ ರೂಪಿಸಿರುವುದು ಉತ್ತಮವಾಗಿದೆ. ಆದರೆ, ನೀತಿಯ ಜಾರಿ ವಿಧಾನ ಸಹ ಸೂಕ್ತವಾಗಿರಬೇಕು. ಪ್ರಕರಣದಲ್ಲಿನ ಕಾರ್ಯನಿಧಾನ ನೋಡುತ್ತಿದ್ದರೆ, ಸರಕಾರಕ್ಕೆ ಆಡಳಿತ ನಡೆಸುವುದಕ್ಕೆ ಬರುವುದಿಲ್ಲ ಎಂದು ನಮಗೆ ತಿಳಿಯುತ್ತದೆ. ಜನರಿಗೆ ಒಳ್ಳೆೆಯದಾಗಬೇಕೆಂಬ ಉದ್ದೇಶವು ನಿಮಗಿದ್ದರೆ, ಮಧ್ಯವರ್ತಿಗಳ ಹಾವಳಿ ತಡೆದು, ಕೇವಲ ಒಂದು ಸಾವಿರ ಮೊತ್ತಕ್ಕೆ ನೇರವಾಗಿ ಜನರಿಗೆ ಮರಳು ಸಿಗುವಂತಹ ವ್ಯವಸ್ಥೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿತು.

ಅಲ್ಲದೆ, ಟೆಂಡರ್ ಪ್ರಕ್ರಿಯೆ ನಡೆಸುವ ಮತ್ತು ಅರ್ಜಿದಾರನ ಟೆಂಡರ್ ಬಿಡ್ ಅನುಮೋದಿಸುವ ಮುನ್ನ ಆತನಿಗೆ ಕೇವಲ 2000 ರೂ.ಒಳಗೆ ಬಿಡ್ ಮಾಡುವಂತೆ ತಿಳಿಸಬೇಕಿತ್ತು. ಆ ಕುರಿತ ಮಾಹಿತಿಯನ್ನು ಅರ್ಜಿ ನಮೂನೆಯಲ್ಲಿ ತಿಳಿಸಬೇಕಿತ್ತು. ಅದನ್ನು ಬಿಟ್ಟು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಮರು ಟೆಂಡರ್‌ಗೆ ಏಕೆ ಆದೇಶಿಸಿದಿರಿ ಎಂದು ಪ್ರಶ್ನಿಸುವ ಮೂಲಕ ಸರಕಾರಿ ಪರ ವಕೀಲರ ವಿರುದ್ಧ ಪೀಠ ಬೇಸರ ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News