ರೈತರ ಕೃಷಿ ಸಾಲ ಮನ್ನಾ: ಅಧಿಕೃತ ಆದೇಶ

Update: 2017-06-24 13:59 GMT

ಬೆಂಗಳೂರು, ಜೂ. 24: ರಾಜ್ಯದಲ್ಲಿನ ಬರ ಸ್ಥಿತಿ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕುಗಳ ಮೂಲಕ ರೈತರು ಪಡೆದಿರುವ 50 ಸಾವಿರ ರೂ. ವರೆಗಿನ ಅಲ್ಪಾವಧಿ ಬೆಳೆ ಸಾಲಮನ್ನಾ ಘೋಷಿಸಿದ ಮೂರು ದಿನಗಳಲ್ಲಿ, ಸಾಲ ಮನ್ನಾ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ.

ರೈತರ ಬೆಳೆ ಸಾಲಮನ್ನಾ ಮಾಡಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಜೂ.21ರಂದು ವಿಧಾನಸಭೆಯಲ್ಲಿ ಘೋಷಿಸಿದ್ದರು. ಜೂ.22ರ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯವನ್ನೂ ಅಂಗೀಕರಿಸಲಾಗಿತ್ತು, ಇದೀಗ ಅಧಿಕೃತ ಸಾಲಮನ್ನಾ ಸಂಬಂಧ ಆದೇಶ ಹೊರಬಿದ್ದಿದೆ.

ರಾಜ್ಯದ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕುಗಳು ಮತ್ತು ಪಿಕಾರ್ಡ್ ಬ್ಯಾಂಕುಗಳ ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ 2017ರ ಜೂ.20ಕ್ಕೆ ಹೊಂದಿರುವ ಹೊರಬಾಕಿ ಮೊತ್ತದಲ್ಲಿ ಗರಿಷ್ಠ 50 ಸಾವಿರ ರೂ. ಸಾಲಮನ್ನಾಕ್ಕೆ ನಿರ್ಧರಿಸಿದ್ದು, ಷರತ್ತಿಗೊಳಪಟ್ಟಿದೆ.

ಷರತ್ತು: ಸಾಲಮನ್ನಾ ಜೂ.20ರ ವರೆಗೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ. ಮಧ್ಯಮಾವಧಿ, ದೀರ್ಘಾವಧಿ ಸಾಲ, ಪಶುಭಾಗ್ಯ ಯೋಜನೆಯಡಿ ನೀಡಿದ ಸಾಲಕ್ಕೆ ಇದು ಅನ್ವಯ ಆಗುವುದಿಲ್ಲ. ಯಾವುದೇ ಸದಸ್ಯರು ಒಂದಕ್ಕಿಂತ ಹೆಚ್ಚು ಸಹಕಾರ ಸಂಘಗಳ ಮೂಲಕ ಸಾಲ ಪಡೆದಿದ್ದರೆ ಒಂದು ಸಂಸ್ಥೆಯಿಂದ ಮಾತ್ರವೇ ಸಾಲಮನ್ನಾ ಸೌಲಭ್ಯ ಪಡೆಯತಕ್ಕದ್ದು.

ಹೊರಬಾಕಿ ಇರುವ ಸಾಲವು ಸುಸ್ತಿಯಾಗಿದ್ದಲ್ಲಿ ಜೂ.20ಕ್ಕೆ ಬಾಕಿ ಇರುವ ಮತ್ತು ಮರು ಪಾವತಿಸುವ ದಿನಾಂಕಕ್ಕೆ ಅನ್ವಯಿಸುವ ಬಡ್ಡಿ ಸೇರಿ 50 ಸಾವಿರ ರೂ.ಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಲ ಪಡೆದ ರೈತರು 2017ರ ಡಿ.31ರೊಳಗಾಗಿ ಮರು ಪಾವತಿ ಮಾಡಿದಲ್ಲಿ, ಅಸಲು ಮತ್ತು ಬಡ್ಡಿ ಸೇರಿ 50 ಸಾವಿರ ರೂ.ಗಳ ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂಬುದು ಸೇರಿದಂತೆ 14 ಷರತ್ತುಗಳನ್ನು ವಿಧಿಸಲಾಗಿದೆ.

ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಸಾಲಮನ್ನಾ ಘೋಷಣೆಯಾಗಿದ್ದರೂ, ಈ ವರೆಗೂ ಆದೇಶ ಹೊರಬಿದ್ದಿಲ್ಲ. ಆದರೆ, ರಾಜ್ಯ ಸರಕಾರ ರೈತರ ಬೆಳೆ ಸಾಲಮನ್ನಾ ನಿಟ್ಟಿನಲ್ಲಿ ಆದೇಶ ಹೊರಡಿಸಿರುವುದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News