1 ಸಾವಿರ ಪೌರ ಕಾರ್ಮಿಕರಿಗೆ‘ವಿದೇಶಿ ಪ್ರವಾಸ ಭಾಗ್ಯ’: ಸಚಿವ ಎಚ್.ಆಂಜನೇಯ
ಬೆಂಗಳೂರು, ಜೂ. 24: ರಾಜ್ಯದಲ್ಲಿನ ಪೌರ ಕಾರ್ಮಿಕರಿಗೆ ‘ವಿದೇಶಿ ಪ್ರವಾಸ ಭಾಗ್ಯ’ ಕಲ್ಪಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಒಂದು ಸಾವಿರ ಮಂದಿ ಪೌರ ಕಾರ್ಮಿಕರನ್ನು ಜುಲೈ ತಿಂಗಳಲ್ಲಿ ಸಿಂಗಾಪುರಕ್ಕೆ ಕಳುಹಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ವೇಳೆ ವಿಷಾನಿಲ ಸೇವಿಸಿ ಪೌರ ಕಾರ್ಮಿಕರ ಸಾವು ಪ್ರಕರಣಗಳು ಹೆಚ್ಚುತ್ತಿವೆ. ಆ ಹಿನ್ನೆಲೆಯಲ್ಲಿ ಅಧ್ಯಯನ ನಿಮಿತ್ತ ಪೌರ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಮ್ಯಾನ್‌ಹೋಲ್ ಸ್ವಚ್ಛತೆಗೆ ಪೌರ ಕಾರ್ಮಿಕರನ್ನು ಇಳಿಸುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ವೈಜ್ಞಾನಿಕ ಕ್ರಮಗಳ ಅಧ್ಯಯನಕ್ಕಾಗಿ ಪೌರ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂದ ಅವರು, ಅಮೆರಿಕಾ, ಚೀನಾ ದೇಶಗಳಲ್ಲಿನ ಅಧ್ಯಯನ ಪ್ರವಾಸಕ್ಕೆ ಪ್ರಯತ್ನಿಸಲಾಯಿತು. ಆದರೆ, ಅಲ್ಲಿನ ಸರಕಾರಗಳು ಇದಕ್ಕೆ ಅವಕಾಶ ನೀಡಿಲ್ಲ ಎಂದರು.
ಇದೀಗ ಅಂತಿಮವಾಗಿ ಪೌರ ಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸಲು ನಿರ್ಧರಿಸಿದ್ದು, ಜುಲೈ ತಿಂಗಳಲ್ಲಿ ತೆರಳಲು ಸೂಚನೆ ನೀಡಿದ್ದು, ಮೊದಲ ಹಂತದಲ್ಲಿ ತಲಾ 10 ಮಂದಿಯ ಏಳು ತಂಡಗಳನ್ನು ವಿದೇಶಿ ಪ್ರವಾಸಕ್ಕೆ ಕಳುಹಿಸಲಾಗುವುದು. 30 ಜಿಲ್ಲೆಗಳಿಂದಲೂ ವಿದೇಶಿ ಪ್ರವಾಸಕ್ಕೆ ಪೌರಕಾರ್ಮಿಕರನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ಗುರುತಿಸಿ ಜಿಲ್ಲೆಗಳಿಂದ 30ರಿಂದ 40 ಮಂದಿ ಪೌರ ಕಾರ್ಮಿಕರನ್ನು ಆಯ್ಕೆ ಮಾಡಿ ವಿದೇಶಿ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದ ಅವರು, ವಿದೇಶಿ ಪ್ರವಾಸದ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದರು.
ಹಸಿವು-ಬಡತನದಿಂದ ಅಪಾಯದ ಮುನ್ಸೂಚನೆ ಇದ್ದರೂ, ಪೌರ ಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿದು ವಿಷಾನಿಲ ಸೇವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದ ಅವರು, ಮ್ಯಾನ್‌ಹೋಲ್ ಸ್ವಚ್ಛತೆಗೆ ತಂತ್ರಜ್ಞಾನಗಳ ಬಗ್ಗೆ ಅಧ್ಯಯನಕ್ಕೆ ವಿದೇಶಿ ಪ್ರವಾಸ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ತಲಾ 1ಲಕ್ಷ ರೂ.ವೆಚ್ಚ: ಪೌರ ಕಾರ್ಮಿಕರ ವಿದೇಶಿ ಪ್ರವಾಸಕ್ಕೆ ತಲಾ 1ಲಕ್ಷ ರೂ. ವೆಚ್ಚವಾಗಲಿದ್ದು, ಒಟ್ಟು 10 ಕೋಟಿ ರೂ.ಗಳ ವರೆಗೂ ವೆಚ್ಚ ಮಾಡಲು ರಾಜ್ಯ ಸರಕಾರ ಸಿದ್ಧವಿದೆ ಎಂದ ಅವರು, ಅಧ್ಯಯನ ದೃಷ್ಟಿಯಿಂದ ಪೌರ ಕಾರ್ಮಿಕರಿಗೆ ವಿದೇಶಿ ಪ್ರವಾಸ ಯೋಜನೆ ರೂಪಿಸಲಾಗಿದೆ ಎಂದರು.
‘ಸಿಎಂ ಸಿದ್ಧರಾಮಯ್ಯ ರಾಮ, ತಾನು ಆಂಜನೇಯ. ಪಕ್ಷ ತ್ಯಜಿಸುವವರು ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಬಡವರು, ಶೋಷಿತರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬರ ಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಸಾಲಮನ್ನಾ ಘೋಷಣೆ ಮಾಡಿದ್ದಾರೆ’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ