×
Ad

ರೈತರ ಆದಾಯ ಐದು ವರ್ಷಗಳಲ್ಲಿ ದ್ವಿಗುಣ: ಪ್ರಕಾಶ್ ಕಮ್ಮರಡಿ

Update: 2017-06-24 19:49 IST

ಬೆಂಗಳೂರು, ಜೂ.24: ಕೇಂದ್ರ ಹಣಕಾಸು ಸಚಿವರು 2016-17ನೆ ಸಾಲಿನ ಬಜೆಟ್‌ನಲ್ಲಿ ರೈತರ ಆದಾಯವನ್ನು ಮುಂದಿನ ಐದು ವರ್ಷಗಳಲ್ಲಿ ದ್ವಿಗುಣಗೊಳಿಸುವ ಪ್ರಸ್ತಾಪವನ್ನು ಮಾಡಿದ್ದಾರೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಬೆಂಗಳೂರು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಅಧ್ಯಯನ ಸಂಸ್ಥೆ ಹಾಗೂ ರಾಜ್ಯ ಕೃಷಿ ಬೆಲೆ ಆಯೋಗದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಕರ್ನಾಟಕದಲ್ಲಿ ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿ’ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಪ್ರಧಾನಮಂತ್ರಿಯೂ ಈ ಪ್ರಸ್ತಾಪವನ್ನು ಹಲವೆಡೆ ಪುನರುಚ್ಚರಿಸಿ ಅನುಮೋದಿಸಿದ್ದಾರೆ. ಕೇಂದ್ರ ಸರಕಾರದ ಕೃಷಿ ರಾಜ್ಯ ಸಚಿವರು ರಾಜ್ಯಸಭೆಯಲ್ಲಿ ಅಧಿಕೃತವಾಗಿ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಅವರು ಹೇಳಿದರು.
ಅದರನ್ವಯ ಕೃಷಿ ಪರಿಕರಗಳನ್ನು ಸಮರ್ಪಕವಾಗಿ ಬಳಸುವುದು, ಉತ್ಪಾದನಾ ಅನಿಶ್ಚಿತತೆಗಳನ್ನು ದೂರಮಾಡಿ ಎಕರೆವಾರು ಉತ್ಪಾದಕತೆಯನ್ನು ಅಧಿಕಗೊಳಿಸುವುದು ಹಾಗೂ ಉತ್ಪಾದನಾ ವೆಚ್ಚವನ್ನು ಇಳಿಸಿ ಲಾಭದಾಯಕ ಬೆಲೆ ಸಿಗುವಂತೆ ಮಾಡುವುದಾಗಿದೆ ಎಂದು ಪ್ರಕಾಶ್ ಕಮ್ಮರಡಿ ತಿಳಿಸಿದರು.

ಸಾವಯವ ಕೃಷಿಯನ್ನು ಪ್ರೋತ್ಸಾಹಿಸಿ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಪ್ರೋತ್ಸಾಹ ಮತ್ತು ನೀರಿನ ಸಮರ್ಥ ಸದ್ಬಳಕೆಗಾಗಿ ಕೃಷಿ ಸಿಂಚಾಯಿ ಯೋಜನೆಯನ್ನು ಕಾರ್ಯಗತಗೊಳಿಸುವುದು ಹಾಗೂ ಪ್ರಧಾನಮಂತ್ರಿ ಫಸಲ್ ಯೋಜನೆಯನ್ನು ಬಲಗೊಳಿಸುವುದಾಗಿದೆ ಎಂದು ಅವರು ಹೇಳಿದರು.

ಕೃಷಿ ಮಾರುಕಟ್ಟೆ ಪದ್ಧತಿಯನ್ನು ಸ್ಪರ್ಧಾತ್ಮಕಗೊಳಿಸಲು ರಾಜ್ಯದಲ್ಲಿ ಯಶಸ್ಸನ್ನು ಕಂಡಿರುವ ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರುಕಟ್ಟೆಗೆ ವಿಶೇಷ ಗಮನಹರಿಸಲಾಗಿದೆ. ಜೊತೆಗೆ ಹಲವಾರು ವರ್ಷಗಳಿಂದ ಜಾರಿಯಲ್ಲಿರುವ ‘ಕನಿಷ್ಠ ಬೆಂಬಲ ಬೆಲೆ’ ಯೋಜನೆಯನ್ನು ದಕ್ಷತೆಯಿಂದ ಅನುಷ್ಠಾನಗೊಳಿಸಿದರೆ ರೈತರ ಸಂಕಷ್ಟದ ಮಾರಾಟವನ್ನು ತಪ್ಪಿಸಬಹುದು ಎಂದು ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಡಾ.ಅಶೋಕ್ ದಳವಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಅಧ್ಯಯನ ಸಂಸ್ಥೆಯ ಪದಾಧಿಕಾರಿಗಳು ಹಾಗೂ ರಾಜ್ಯ ಕೃಷಿ ಬೆಲೆ ಆಯೋಗದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News