ನಾನು ಕಂಡ ಗೌರಮ್ಮ

Update: 2017-06-25 07:28 GMT

ಕನ್ನಡದ ಮೊದಲ ಪೀಳಿಗೆಯ ಕತೆಗಾರ್ತಿ ಕೊಡಗಿನ ಗೌರಮ್ಮನವರ ಬಗ್ಗೆ ಇನ್ನೊಬ್ಬ ಖ್ಯಾತ ಬರಹಗಾರ ದೇ.ಬ. ಕುಲಕರ್ಣಿ ಯವರು ಕಡೆದಿಟ್ಟ ವ್ಯಕ್ತಿಚಿತ್ರ ಇದು.1939ರಲ್ಲಿ ಬರೆಯಲಾದ ಈ ಲೇಖನ ಒಂದು ಚೇತೋಹಾರಿ ಅನುಭವ ಕಥನವೂ ಹೌದು.

ಗೌರಮ್ಮನವರಲ್ಲಿ ಇದ್ದ ಮಾತನ್ನು ಎತ್ತಿ ಹಿಡಿಯುವ ದಿಟ್ಟತನವಿತ್ತು. ಅವರ ದೃಷ್ಟಿಯಲ್ಲಿ ಒಂದು ವಿಮರ್ಶಕ ಶಕ್ತಿಯಿತ್ತು. ಯಾರಿಗೂ ಸೊಪ್ಪು ಹಾಕದೆ ತಮಗೆ ತೋರಿದ ಮಾತುಗಳನ್ನು ಗಂಭೀರವಾಗಿ ಹೇಳುತ್ತಿದ್ದರು. ತಮಗೆ ಸೇರದ ಮಾತನ್ನು ಅಷ್ಟೇ ಸ್ಪಷ್ಟವಾಗಿ ಖಂಡಿಸುತ್ತಿದ್ದರು. ಹೆಣ್ಣು ಮಕ್ಕಳು ಬರೆಯುವ ಸಾಹಿತ್ಯ ಒಳ್ಳೆಯದಾಗಬೇಕು... ಅದೊಂದು ಮಟ್ಟಕ್ಕೆ ಬರಬೇಕು.... ಎಂಬ ಆಸೆ ಬಹಳವಾಗಿತ್ತವರಿಗೆ.

  ದೇ.ಬ. ಕುಲಕರ್ಣಿ

ಜಮಖಂಡಿಯಲ್ಲಿ ಸೇರಿದ ಕ.ಸಾ. ಸಮ್ಮೇಳನದ ಮಂಟಪದಲ್ಲಿ ಗೌರವರ್ಣದ, ಅಷ್ಟು ಎತ್ತರವಲ್ಲದ, ತೆಳ್ಳಗಿದ್ದರೂ ಹಾಗೆ ಕಾಣದ, ಒಬ್ಬ ಮಹಿಳೆ ಕುಳಿತದ್ದನ್ನು ನೋಡಿದೆ. ಉಟ್ಟದ್ದೊಂದು ಖಾದಿಯ ಬಟ್ಟೆ; ತೊಟ್ಟದ್ದೂ ಖಾದಿಯೇ. ಮೂಗಿ ಗೊಂದು ಹರಳಿನ ಮೂಗುಬಟ್ಟು. ಉಳಿದ ಯಾವ ಆಭರಣವೂ ಇಲ್ಲ. ಕಣ್ಣುಗಳಲ್ಲಿ ಅದೊಂದು ಬಗೆಯ ಒಳನೋಟ ಮುಖದಲ್ಲಿ ಅದೇನೋ ಒಂದು ಗಂಭೀರ ಭಾವ. ಆದರೂ ಯಾರಾದರೂ ಮಾತನಾಡಿಸಿ ದರೆ ಮೊದಲು ನಗೆ, ಆ ಮೇಲೆ ಮಾತು. ಒಮ್ಮೆಮ್ಮೆ ನಗು ಅಷ್ಟೇ ನುಸುಳಿ, ಮಾತು ಬಾರದೆ ಉಳಿಯುತ್ತಿತ್ತು. ಒಮ್ಮೆ ನೋಡಿದರೆ ಸಾಕು; ಇವರ ಪರಿಚಯ ವಾಗಬೇಕು ಎನಿಸುವಂತಹ ವ್ಯಕ್ತಿತ್ವ.

ಅವರು ಕೊಡಗಿನವರೆಂದು ತಿಳಿದಾಗ ನನಗೆ ತುಂಬ ಕುತೂಹಲವಾಯಿತು. ಮತ್ತೆ ವಿಚಾರಿಸುವಾಗ ಅವರೇ ಶ್ರೀಮತಿ ಗೌರಮ್ಮ-ಮಿಸೆಸ್ ಬಿ.ಟಿ.ಜಿ. ಕೃಷ್ಣ- ಎಂದು ತಿಳಿದು ಬಹಳ ಸಂತೋಷವಾಯಿತು.

ಅದಕ್ಕೂ ಮೊದಲು ‘‘ರಂಗವಲ್ಲಿ’’ ಕಥಾ ಸಂಗ್ರಹದ ಕಾರ್ಯ ದಲ್ಲಿ, ಪತ್ರವ್ಯವಹಾರದಿಂದ ಅವರ ಪರಿಚಯವಾಗಿತ್ತು. ಹಿಂದೆ ‘ಜಯಕರ್ನಾಟಕ’ದ ಸಣ್ಣ ಕತೆಗಳ ಸ್ಫರ್ಧೆ ಯಲ್ಲಿ ಮೆಚ್ಚುಗೆಯನ್ನು ಪಡೆದ ‘‘ಒಂದು ಪುಟ್ಟ ಚಿತ್ರ’’ ಓದಿದಾಗ, ಅದನ್ನು ಬರೆದ ವರ ಬಗ್ಗೆ ಏನೋ ಒಂದು ಬಗೆಯ ಆದರ ಹುಟ್ಟಿತ್ತು. ಮುಂದೆ ಒಂದೆ ರಡು ಕತೆಗಳು ‘‘ಜ.ಕ.’’ದಲ್ಲಿ ಬಂದವು. ‘‘ಕೆಲವು ನೀಳ್ಗತೆಗಳು’’ ಎಂಬ ಸಂಗ್ರಹದಲ್ಲಿಯ ‘‘ಕೌಸಲ್ಯಾ ನಂದನ’’ ಎಂಬ ಕತೆ ನನಗೆ ಬಹಳ ಮೆಚ್ಚುಗೆಯಾಯಿತು. ಅದರಲ್ಲಿಯ ವಸ್ತು-ವಿವರಣೆ, ಆ ಕಲಾ ಪೂರ್ಣ ಮುಕ್ತಾಯ ನನಗೆ ತುಂಬ ಆನಂದ ಕೊಟ್ಟವು. ‘ಅಂತೂ ಕನ್ನಡ ಮಹಿಳೆಯರೂ ಇಂತಹ ಉತ್ತಮ ಕತೆ ಬರೆಯುತ್ತಾರಲ್ಲ!’ ಎಂದು ಹೆಮ್ಮೆ ತಾಳಿದೆ.ಅಂದು ಪಟ್ಟ ಆ ಆನಂದ, ತಳೆದ ಆ ಹೆಮ್ಮೆ ನನ್ನನ್ನು ಹೆಣ್ಣು ಮಕ್ಕಳದೇ ಆದ ಒಂದು ಕಥಾಸಂಗ್ರಹ ಪ್ರಕಟಿ ಸುವ ಸಾಹಸಕ್ಕಿಳಿಸಿತು. ಆ ಕೆಲಸ ‘‘ರಂಗವಲ್ಲಿ’’ ಎಂಬ ಹೆಸರಿನಿಂದಾಯಿತು. ‘ರಂಗವಲ್ಲಿ’ಯಲ್ಲಿಯ ಗೌರಮ್ಮನವರ ‘ಮನುವಿನ ರಾಣಿ’ ಎಂಬ ಕತೆಯ ಬಗ್ಗೆ ಬಂದ ಕೆಲವು ‘ಪ್ರಶಂಸೆ’ಗಳನ್ನು ಅವರಿಗೆ ತಿಳಿಸಿದಾಗ, ಅವರು ತಮ್ಮ ಆ ಕತೆಯ ವಿಷಯಕ್ಕಿದ್ದ ಅತೃಪ್ತಿಯನ್ನು ತಾವೇ ಸೂಚಿಸಿದರು. ಆಗಲೇ ಅವರು ಹೊಗಳಿಕೆಗೆ ಹಿಗ್ಗುವವರಲ್ಲ-ಎನಿಸಿತು.

ಅದುವರೆಗೆ ಪ್ರಕಟವಾದ ಅವರ ಕತೆಗಳನ್ನೋದಿದ ನನಗೆ ಒಂದೇನೊ ಆಸೆ: ಇವರದೊಂದು ಕಥಾಸಂಗ್ರಹ ಪ್ರಕಟಿಸ ಬೇಕೆಂದು. ಆ ಮೊದಲು ನನಗೆ ಬರೆದ ಒಂದೆರಡು ಕಾಗದಗಳಲ್ಲಿಯೇ ಮೈವೆತ್ತುನಿಂತ ಅವರ ಸುಸಂಸ್ಕೃತತೆ, ಹಿರಿಯಾಸೆ ನನ್ನನ್ನು ಮತ್ತ್ತಷ್ಟು ಆ ಕೆಲಸಕ್ಕೆ ಒತ್ತಾಯ ಪಡಿಸಿದವು.

ಜಮಖಂಡಿಯಲ್ಲಿ ಅವರು ಗೌರಮ್ಮನವರೆಂದು ತಿಳಿದ ಮೇಲೆ ಅವರೊಡನೆ ಮಾತನಾಡಬೇಕೆಂಬ ಆಸೆೆಯಿಂದ ಅವರಿಳಿದ ಸ್ಥಳಕ್ಕೆ ಹೋದೆ. ಅಲ್ಲಿದ್ದ ನನ್ನ ಸ್ನೇಹಿತರೊಬ್ಬರು ಅವರ ಪರಿಚಯ ಮಾಡಿಸಿದರು. ಆಗ ಅವರು ಊಟಕ್ಕೆ ಕುಳಿತವರು ಎದ್ದು ‘ನಮಸ್ಕಾರ ಎಂದರು. ಅಂದಿನ ಆ ಮೊದಲ ಸಲದ ಅವರ ನಿಂತ ನಿಲುವು, ಆ ವಿನಯ, ಆ ಸಹಜವಾದ ನಗೆ ಇನ್ನೂ ನನ್ನ ಕಣ್ಣ ಮುಂದಿವೆ. ಊಟ ವಾದೊಡನೆ ನಾವಿಬ್ಬರೂ ಒಂದೆಡೆ ಕುಳಿತೆವು. ಆಗ ನಮ್ಮ ಮಾತಿಗೆ ‘ರಂಗವಲ್ಲಿ’ಯೊಂದೇ ಆಹಾರ ವಾಗಿತ್ತು. ಭಿನ್ನಾಭಿಪ್ರಾಯಗಳ ವಾಗ್ಯುದ್ಧದಿಂದ ನಮ್ಮ ಪರಿಚಯ ಬೆಳೆಯಹತ್ತಿತ್ತು. ಅವರು ಆಗಾಗ ವಿನಯಪೂರ್ವಕವಾಗಿ ‘ಬೇಸರವಾಯಿತೇ?’ ಎಂದು ಕೇಳುತ್ತ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದರು. ಅವರ ಆ ಸವಿನಯವಾದ ಮಾತುಗಳೇ ಅವರ ಸರಳಜೀವನದ ಕುರುಹು. ಅವರು ಸಭೆಯಲ್ಲಿ ಎಂದೂ ಮಾತಾಡಿದವರಲ್ಲ. ಅಂದು ಕವಿಸಮ್ಮೇಳನದಲ್ಲಿ ‘ಏನಾ ದರೂ ಓದಿ’ ಎಂದು ನಾವು ಕೇಳಿದ್ದಕ್ಕೆ ಅವರು ‘ದಮ್ಮಯ್ಯ ಬೇಡಿ’- ಎಂದು ಕೇಳಿಕೊಂಡ ರು; ಕೊಡಗಿನ ಪರವಾಗಿ ಅಧ್ಯಕ್ಷರ ಆಯ್ಕೆಯನ್ನು ಸಮರ್ಥಿ ಸುವುದಕ್ಕಾಗಿ ಎದ್ದುನಿಂತು ಹೇಳಿದ ಒಂದೇ ಮಾತಿಗೆ ಮೈಯೆಲ್ಲ ಬೆವೆತು ಕಾಲು ನಡುಗಿದವೆಂದು ಹೇಳಿದರು.

‘ನೀವು ಹೊರಡುವಾಗ ನಮಗೇಕೆ ತಿಳಿಸಲಿಲ್ಲ?’ ಎಂದು ಕೇಳಿದ್ದಕ್ಕೆ ‘ಏನೆಂದು ತಿಳಿಸು ವುದು? ಕೊಡಗಿನ ಚಕ್ರವರ್ತಿನಿ-ನಾನು ಬರುತ್ತೇ ನೆಂದೇ? ಅಲ್ಲದೆ ಮೊದಲು ನಿಮ್ಮನ್ನು ನೋಡಿ ನನಗೆ ಗೊತ್ತಿತ್ತೇ?’ ಎಂದು ನಕ್ಕು-ನುಡಿದರು. ಅವರು ಯಾರೊಡನೆಯೂ ದುಡುಕಿ ಪರಿಚಯ ಮಾಡಿಕೊಳ್ಳುತ್ತಿದ್ದಿಲ್ಲ. ‘ನೀವಾರು?-ಎಂದು ಅವರು ಕೇಳಿದರೆ ನಾನೇನೆಂದು ಹೇಳುವುದು?’ ಎನ್ನುತ್ತಿದ್ದರು.

ಜಮಖಂಡಿಯಿಂದ ತಿರುಗಿ ಬರುವಾಗ ಧಾರವಾಡದಲ್ಲಿ ನಮ್ಮಲ್ಲಿ ಒಂದು ದಿನ ಇಳಿಯಬೇಕೆಂದು ಕೇಳಿಕೊಂಡೆ. ಅವರು ಸಂತೋಷದಿಂದ ಒಪ್ಪಿಕೊಂಡರು. ಅಂದು ಧಾರವಾಡದ ನಿಲ್ದಾಣದಲ್ಲಿ ನಾವಿಳಿದಾಗ ‘ಇಂದು ಎಂತಹ ಸಂತೋಷದ ದಿನ’ ಎಂದು ನಾನೆಂದುದಕ್ಕೆ ‘ಹೌದೋ?’ ಎಂದು ಅವರು ನಗುತ್ತ ನುಡಿದರು.

ಗೌರಮ್ಮನವರು ಬಹಳ ವಿನೋದಿಗಳಾಗಿದ್ದರು. ಅವರ ಹೂವಿನಂತಹ ಮಾತುಗಳು ಯಾರ ಮನಸ್ಸನ್ನೂ ನೋಯಿಸದೆ ಅರಳಿಸುತ್ತಿದ್ದವು. ಅವರನ್ನು ಕಳುಹಿಸಲು ಹುಬ್ಬಳ್ಳಿಯವರೆಗೆ ಹೋಗಿದ್ದೆ. ಹುಬ್ಬಳ್ಳಿ ಸ್ಟೇಶನ್‌ನಲ್ಲಿ ‘ನೀವು ಈಗ ನನ್ನ ಅತಿಥಿಗಳು; ಧಾರವಾಡದಿಂದ ಹುಬ್ಬಳ್ಳಿಯ ನಮ್ಮೂರ ಕಡೆಗೆ’ ಎಂದು ಕಾಫಿ ಕೊಡಿಸಿದರು; ಕೂಡಿ ನಗುತ್ತ ಕುಡಿದೆವು. ಗಾಡಿ ಹೊರಡುವ ಸಮಯವಾಗಿತ್ತು. ‘ಅಲ್ಲಿ ನೋಡಿ, ನಿಮ್ಮ ಮಾವ ಬರುತ್ತಿದ್ದಾರೆ’ ಎಂದರವರು. ನಾನು ತಿರುಗಿ ನೋಡಿ, ನನ್ನ ಪರಿಚಿತರಾರನ್ನೂ ಕಾಣದೆ ‘ಯಾರು’? ಎಂದೆ. ‘ನೋಡಿ, ನಿಮ್ಮ ಮಾವ-ಜರತಾರಿ ರುಮಾಲಿನ ಯಜಮಾನ’ ಎಂದರು. *ನನ್ನ ಕತೆಯಲ್ಲಿಯ ಒಂದು ಪಾತ್ರ. ಧಾರವಾಡದಲ್ಲಿ ಆ ಕತೆಯನ್ನು ಓದಿ ತೋರಿಸಿದ್ದೆ. ನಾವೆಲ್ಲ ಗೊಳ್ಳೆಂದು ನಕ್ಕೆವು. ಸಿಳ್ಳು ಹಾಕಿ ಗಾಡಿ ಹೊರಟಿತು. ಕಿಟಕಿಯಲ್ಲಿ ಮುಖ ಹಾಕಿ ಅವರು ನೋಡುತ್ತಿದ್ದರು. ನಾನು ಹಾಗೆಯೇ ಕಲ್ಗೊಂಬೆಯಂತೆ ನಿಂತಿದ್ದೆ. ಗಾಡಿ ಹೊರಟುಹೋಗಿದೆ; ಆದರೆ ಕಿಟಕಿಯಲ್ಲಿ ನಗುತ್ತ ಕುಳಿತ ಗೌರಮ್ಮ ಇನ್ನೂ ಕಾಣುತ್ತಿದ್ದಾರೆ.

ಅವರ ‘ಪತ್ರಕತೆ’ಗಳನ್ನೋದಿ ಸಂತೋಷಪಟ್ಟ ನನಗೆ ಅವರಿಂದ ಬರುತ್ತಿದ್ದ ಕಾಗದಗಳು ಮತ್ತಷ್ಟು ಸಂತೋಷ ಕೊಟ್ಟಿವೆ. ಅವರ ಸುಂದರ ವಾದ-ಹಗುರಾದ ಮಾತುಗಳು, ಮಿತವರಿತ ವಿನೋದ, ಮೋಹಕವಾದ ಶೈಲಿ-ಹೃದಯವನ್ನರಳಿಸುವಂತಹವು. ಅವರೊಡನೆ ಪರಿಚಯವಾ ದಂದಿನಿಂದ-ಕಳೆದ ಒಂದು ವರ್ಷದಲ್ಲಿ-ನನಗೆ ಅವರ ಪತ್ರಲಾಭ ಅನಂತವಾಗಿ ದೊರೆತಿದೆ.

ಒಂದು ಕತೆಯನ್ನು ಅವರ ಅವಲೋಕನೆಗೆಂದು ಕಳುಹಿಸಿದಾಗ ಕೂಡಲೇ ಅವರ ಕಾಗದ ಬಂತು. ಹೀಗೆ ಬರೆದಿದ್ದರು.

‘‘ನಿಮ್ಮ ಕಾಗದ ಬಂದಾಗ ನಾನು ಟೆನಿಸ್ ಆಡುತ್ತಿದ್ದೆ. ಟಪಾಲಿನವನು ಕಾಗದ ಕೊಟ್ಟೊಡನೆಯೆ ನೋಡಿದೆ-ಯಾರದೆಂದು; ನಿಮ್ಮದು! ಇಷ್ಟರವರೆಗೆ ಗೆಲ್ಲುತ್ತ ಬಂದವಳು ನಿಮ್ಮ ಕಾಗದ ಓದುವ ಆತುರತೆಯಲ್ಲಿ ಸೋತೇ ಹೋದೆ. ನನಗೆ ಇದಿರಾಗಿ ಆಡುತ್ತಿದ್ದವರು ನಿಮ್ಮನ್ನು ಬಹಳ ಬಹಳ ಹೊಗಳಿದರು; ನಿಮ್ಮ ಕಾಗದದಿಂದಾಗಿ ಗೆಲುವು ತನಗಾ ಯಿತಲ್ಲಾ-ಎಂದು. ನಾನು ನಿಮ್ಮ ಕಾಗದ ಸ್ವಲ್ಪ ದೂರಿದೆನೆಂದರೆ ನಿಮಗೆ ಕೋಪ ಬರುವುದೇನೋ. ಅಂತೂ ನಾವಿಬ್ಬರೂ ಜೊತೆಯಾಗಿಯೇ ಓದಿದೆವು. ಓದಿ ಸೋತ ಬೇಸರ ಮರೆಯಿತು; ಅಷ್ಟೊಂದು ಚೆನ್ನಾಗಿದೆ ನಿಮ್ಮ ‘ಕುಳಿತ ಕನ್ನೆ’ (ಇದು ನನ್ನದೊಂದು ಕತೆ)

‘ನನಗೆ ಎಲ್ಲ ಕಡೆಯಿಂದಲೂ ಪತ್ರ ಬರುತ್ತಿರಬೇಕು- ಎಂದರೆ ಬಹಳ ಇಷ್ಟ. ಆದರೆ ನಾನು ಸೋಮಾರಿ. ಸಮಯಕ್ಕೆ ಉತ್ತರ ಬರೆಯದೆ ಎಷ್ಟೋ ಜನರನ್ನು ಬೇಸರು ಪಡಿಸಿದ್ದೇನೆ’ ಎಂದು ಹೇಳುತ್ತಿದ್ದರು.

'As you like it

ಗೌರಮ್ಮನವರು ಕತೆ ಬರೆದ ಮೇಲೆ ಅದಕ್ಕೊಂದು ಹೆಸರಿಡುವುದಕ್ಕೆ ತುಂಬ ಪೇಚಾಡುತ್ತಿದ್ದರು; ಎಲ್ಲರನ್ನೂ ಕೇಳುತ್ತಿದ್ದರು. ‘‘ನಾನು ಶೇಕ್ಸ್ ಪಿಯರ್ ಆಗಿದ್ದರೆ ಎಂದು ಬಿಡುತ್ತಿದ್ದೆ’’ ಎನ್ನುತ್ತಿದ್ದರು. ಯಾರಾದರೂ ತಮಗೆ ಒಪ್ಪಿಗೆಯಾಗಬಹುದಾದ ಹೆಸರನ್ನು ಸೂಚಿಸಿದರೆ ಅವರಿಗೆ ಬಹಳ ಆನಂದವಾಗುತ್ತಿತ್ತು. ನಾನೊಮ್ಮೆ ಅವರಿಗೆ ತಡಮಾಡಿ ಬರೆದೆ; ಅವರ ದೊಂದು ಕತೆ ಬಂದಿತ್ತು. ‘‘ಅದಕ್ಕೊಂದು ಚೆಂದವಾದ ಹೆಸರಿಟ್ಟು ನಿಮ್ಮ ನಿಜವಾದ ಅಭಿಪ್ರಾಯ ತಿಳಿಸಿರಿ’’ ಎಂದು ಬರೆದಿದ್ದರು. ಕತೆಗೆ ಹೆಸರಿಡುವ ವಿಚಾರದಲ್ಲಿ ನನಗೆ ಬೇಗನೆ ಬರೆಯುವುದಾಗಲಿಲ್ಲ. ಅವರು ಬೇಸತ್ತು ಬರೆದರು; ‘‘ಏನು, ನೀವೆಲ್ಲಾ ನನ್ನ ಉದಾಸೀನಕ್ಕೆ ಪ್ರತಿ ಉದಾಸೀನ ಮಾಡಿ ಸತ್ಯಾಗ್ರಹ ಮಾಡು ವಂತೆ ತೋರುತ್ತೆ! ನೀವು ರಾಮದುರ್ಗದವರು ತಾನೆ! ಮಾಡಿ ಸತ್ಯಾಗ್ರಹ!’ ಎಂದು.

ಗೌರಮ್ಮನವರಲ್ಲಿ ಇದ್ದ ಮಾತನ್ನು ಎತ್ತಿ ಹಿಡಿಯುವ ದಿಟ್ಟತನವಿತ್ತು. ಅವರ ದೃಷ್ಟಿಯಲ್ಲಿ ಒಂದು ವಿಮರ್ಶಕ ಶಕ್ತಿಯಿತ್ತು. ಯಾರಿಗೂ ಸೊಪ್ಪು ಹಾಕದೆ ತಮಗೆ ತೋರಿದ ಮಾತುಗಳನ್ನು ಗಂಭೀರವಾಗಿ ಹೇಳುತ್ತಿದ್ದರು. ತಮಗೆ ಸೇರದ ಮಾತನ್ನು ಅಷ್ಟೇ ಸ್ಪಷ್ಟವಾಗಿ ಖಂಡಿಸುತ್ತಿದ್ದರು. ಹೆಣ್ಣು ಮಕ್ಕಳು ಬರೆಯುವ ಸಾಹಿತ್ಯ ಒಳ್ಳೆಯದಾಗಬೇಕು......ಅದೊಂದು ಮಟ್ಟಕ್ಕೆ ಬರಬೇಕು....ಎಂಬ ಆಸೆ ಬಹಳವಾಗಿತ್ತವರಿಗೆ. ಇದು ಹೆಣ್ಣುಮಕ್ಕಳ ಕೃತಿ-ಎಂಬ ಪೊಳ್ಳು ಸಹಾನು ಭೂತಿಯ ಹೊರೆಯನ್ನು ನಾವೆಷ್ಟು ದಿನ ಹೊತ್ತಿರಬೇಕು ? ಇದರಿಂದ ಗಂಡಸರುನಮ್ಮ ಸಾಹಿತ್ಯವನ್ನು ತೃಪ್ತಿದಾಯಕವಾಗಿ ಒಪ್ಪಿದಂತಾಯಿತೇ ? ಅವರು ನಮ್ಮ ಸಾಹಿತ್ಯವನ್ನು ಗಂಡಸರು ಬರೆಯುವ ಸಾಹಿತ್ಯವನ್ನು ನೋಡುವ ದೃಷ್ಟಿಯಲ್ಲೊಮ್ಮೆ ನೋಡಲಿ-ಇಲ್ಲ; ನೋಡಲಾರರವರು. ಎಂತಲೇ ನಿರ್ಭಾಗ್ಯ ರಂಗವಲ್ಲಿಯ ಅದೃಷ್ಟಕ್ಕೆ ಒಂದು ಸರಿಯಾದ ವಿಮರ್ಶೆ ಬರೆಯುವ ಪುಣ್ಯಾತ್ನರೂ ಇಲ್ಲ ! ಎನ್ನುತ್ತಿದ್ದರು. (ಮುಂದುವರಿಯುವುದು...)

ರೂಪದರ್ಶಿಗಳು

ಆಯ್ಕೆ:

ಪುಸ್ತಕಮನೆ ಹರಿಹರಪ್ರಿಯ

Writer - ದೇ.ಬ. ಕುಲಕರ್ಣಿ

contributor

Editor - ದೇ.ಬ. ಕುಲಕರ್ಣಿ

contributor

Similar News