ಪವಾಡ ರಹಸ್ಯಗಳ ಬೆನ್ನು ಹತ್ತಿ.. ವೈಜ್ಞಾನಿಕ ಲೋಕದೊಳಗಿನ ಪಯಣ....

Update: 2017-06-25 07:48 GMT

21ನೆ ಶತಮಾನವನ್ನು ಕಂಪ್ಯೂಟರ್ ಯುಗ, ನಾವಿಂದು ವಿಜ್ಞಾನ ಯುಗದಲ್ಲಿದ್ದೇವೆ ಎಂದು ನಾವು ಹೇಳಿಕೊಳ್ಳುತ್ತಿದ್ದರೂ, ವೌಢ್ಯಗಳು ಮಾತ್ರ ನಮ್ಮನ್ನು ಬಿಟ್ಟಿಲ್ಲ. ಈ ವೌಢ್ಯದಿಂದಾಗಿಯೇ ಅದೆಷ್ಟೋ ಪ್ರಾಣಗಳು ಬಲಿಯಾಗುವುದು, ಅದೆಷ್ಟೋ ಮಂದಿ ಸಮಸ್ಯೆಗೆ ಗುರಿಯಾಗುತ್ತಿರುವ ಘಟನೆಗಳು ನಮ್ಮ ಸುತ್ತಮುತ್ತಲಲ್ಲೇ ನಡೆಯುತ್ತಿರುತ್ತವೆ. ಮೂಢನಂಬಿಕೆ, ಅತಿಮಾನುಷ ಶಕ್ತಿ, ನಂಬಿಕೆ ಹೆಸರಿನಲ್ಲಿ ಜನಸಾಮಾನ್ಯರನ್ನು, ಮುಗ್ಧರನ್ನು ಮೋಸಗೊಳಿಸು ವವರ ಜತೆ ಮೋಸಹೋಗುವವರೂ ನಮ್ಮ ನಡುವೆಯೇ ಇರುತ್ತಾರೆ. ಇಂತಹ ವೌಢ್ಯಾಚರಣೆಗೆ ಒಂದು ತಾಜಾ ನಿದರ್ಶನ ಕರ್ನಾಟಕದ ಮಾಗಡಿಯಲ್ಲಿ ಎರಡು ತಿಂಗಳ ಹಿಂದಷ್ಟೇ ವರದಿಯಾದ ಹೃದಯ ವಿದ್ರಾವಕ ಘಟನೆ. ತಮ್ಮ ಸಂಬಂಧಿಯೊಬ್ಬರ ರೋಗ ನಿವಾರಣೆಗಾಗಿ 10 ವರ್ಷದ ಮುಗ್ಧ ಬಾಲಕಿಯನ್ನು ಬಲಿ ಪಡೆಯಲಾಗಿತ್ತು. ಇಂತಹ ಘಟನೆಗಳು ಮೂಢನಂಬಿಕೆಯ ಜೊತೆಯಲ್ಲೇ ಅಮಾನವೀಯ ಕೃತ್ಯ ಎಂದರೂ ತಪ್ಪಾಗಲಾರದು.

ಇಂತಹ ವೌಢ್ಯಗಳ ವಿರುದ್ಧ ಜನಸಾಮಾನ್ಯರನ್ನು ಜಾಗೃತಗೊಳಿ ಸುವ ಕಾರ್ಯವೂ ಇದೇ ಅವಧಿಯಲ್ಲಿ ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಅಂತಹ ನೇರ ನಿಷ್ಠುರ ನುಡಿಯ ವ್ಯಕ್ತಿಗಳಲ್ಲಿ ಗುರುತಿಸಿಕೊಳ್ಳುವವರು ಮಂಗಳೂರಿನ ಪ್ರೊ. ನರೇಂದ್ರ ನಾಯಕ್. ಪ್ರಸ್ತುತ ರಾಷ್ಟ್ರೀಯ ವಿಚಾರವಾದಿ ವೇದಿಕೆಯ ಅಧ್ಯಕ್ಷರೂ ಅಗಿರುವ ಪ್ರೊ. ನರೇಂದ್ರ ನಾಯಕ್, ಕಳೆದ ಸುಮಾರು 40 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಮೂಢನಂಬಿಕೆಗಳ ವಿರುದ್ಧ ಸಮರ ಸಾರುತ್ತಾ, ಪವಾಡ ರಹಸ್ಯ ಬಯಲಿನ ಮೂಲಕ ತಿಳುವಳಿಕೆ ಮೂಡಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ. ತಮ್ಮ 66ನೆ ವಯಸ್ಸಿನಲ್ಲಿಯೂ ಬರುತ್ತಿರುವ ಬೆದರಿಕೆ ಕರೆ, ಕೊಲೆ ಪ್ರಯತ್ನಗಳ ಹೊರತಾಗಿಯೂ ವೌಢ್ಯಗಳ ವಿರುದ್ಧ ತಮ್ಮ ಸಮರವನ್ನು ಮುಂದುವರಿಸಿದ್ದಾರೆ. ಸಮಾನಮನಸ್ಕರ ತಂಡದೊಂದಿಗೆ ಮಂಗಳೂರು ಸೇರಿದಂತೆ, ಕರ್ನಾಟಕ ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಲ್ಲಿ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನಡೆಸಿರುವ ಪ್ರೊ. ನರೇಂದ್ರ ನಾಯಕ್ ತಮ್ಮ ಜೀವನ ವೃತ್ತಾಂತ ದೊಂದಿಗೆ ತಮ್ಮ ಅನುಭವ ಕಥನವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಅವರ ಜೀವನದ ವಿವಿಧ ಮಗ್ಗುಲುಗಳು ಅವರ ಮಾತುಗಳ ಜೊತೆಯಲ್ಲೇ ಅವರ ಪವಾಡ ರಹಸ್ಯ ಬಯಲಿನ ಅನುಭವ ಕಥನಗಳು ಸರಣಿ ರೂಪದಲ್ಲಿ ಪ್ರಕಟಗೊಳ್ಳಲಿವೆ.

ಫೇಲ್ ಮಾಡುವಂತೆ ಬೇಡಿಕೊಂಡರೂ ಪಾಸಾಗಿದ್ದೆ!

ನನ್ನನ್ನು ಸುಮಾರು ನಾಲ್ಕು ವರ್ಷಕ್ಕೇ ಶಾಲೆಗೆ ಸೇರಿಸಲಾಗಿತ್ತು. ಅದು ಕಾನ್ವೆಂಟ್ ಶಾಲೆ. ಅಲ್ಲಿ ದೇವರಿಗೆ ಪ್ರಾರ್ಥನೆಯೊಂದಿಗೆ ಎಲ್ಲವೂ ಆರಂಭವಾಗುತ್ತಿತ್ತು. ಹಾಗಾಗಿ ದೇವರೆಂದರೆ ಅದೇನೋ ಪವರ್‌ಫುಲ್ ಒಂದು ಶಕ್ತಿ ಎಂಬ ಭಾವನೆ ಆ ಪ್ರಾಯದಲ್ಲಿ ನನ್ನನ್ನೂ ಪ್ರಾರ್ಥನೆಗೆ ಪ್ರೇರೇಪಿಸಿತ್ತು. ನಮ್ಮ ಮನೆಯಲ್ಲೂ ಗಡ್ಡಧಾರಿ ವ್ಯಕ್ತಿಯ ಫೋಟೊ ಒಂದಿತ್ತು. ಆ ವ್ಯಕ್ತಿಯೇ ದೇವರಾಗಿರಬೇಕು ಎಂದು ನಾನು ಅಂದುಕೊಂಡಿದ್ದೆ. ಅಮ್ಮನಿಗೂ ದೇವರೆಂದರೆ ಭಕ್ತಿ. ಹಾಗಾಗಿ ಪರೀಕ್ಷೆಯ ಸಂದರ್ಭ ದೇವರಿಗೆ ನಮಸ್ಕಾರ ಮಾಡಿಯೇ ಹೋಗಬೇಕೆಂಬುದು ಆಕೆಯ ಕಟ್ಟಪ್ಪಣೆ. ಹಾಗೆಯೇ ನಾನೂ ಮಾಡುತ್ತಿದ್ದೆ. ಅದಾಗ ಪ್ರಾಯಶಃ ನಾನು ನಾಲ್ಕನೆ ತರಗತಿಯಲ್ಲಿದ್ದಿರಬೇಕು. ಸುಮಾರು 11 ವರ್ಷ. ಪರೀಕ್ಷೆಯ ಸಂದರ್ಭ. ಪ್ರಾರ್ಥಿಸದೆ ಹೋದರೆ ಏನಾಗಬಹುದು ಎಂದು ನಾನು ನನ್ನೊಳಗೆ ಚಿಂತಿಸಿ ನಮಸ್ಕಾರ ಮಾಡದೆ ಪರೀಕ್ಷೆ ಬರೆದೆ. ಆದರೆ ಅಂದಿನ ನನ್ನ ಮನಸ್ಸಿನಲ್ಲಿ ದೇವರ ಬಗೆಗಿನ ತಾಕಲಾಟಕ್ಕೆ ವಿಚಿತ್ರ ಎಂಬಂತೆ ನಾನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೆ. ಇದು ನನ್ನ ಮನಸ್ಸಿನಲ್ಲಿ ಗೊಂದಲಕ್ಕೆ ಕಾರಣವಾಯಿತು. ಮಾತ್ರವಲ್ಲ, ಪ್ರಯೋಗಶೀಲತೆಯನ್ನೂ ನನ್ನಲ್ಲಿ ಬೆಳೆಸಿತು ಎನ್ನಬಹುದು. ನಮಸ್ಕಾರ ಮಾಡದೆಯೂ ಉತ್ತಮ ಅಂಕ ಪಡೆಯಬಹುದಾದರೆ, ಇನ್ನೊಂದು ಪ್ರಯೋಗವನ್ನು ಮಾಡೋಣ ಎಂದು ಆಲೋಚಿಸಿ, ಆ ದಿನ ನಾನು ‘‘ದೇವರೇ ಈ ಬಾರಿ ನನ್ನನ್ನು ಪರೀಕ್ಷೆಯಲ್ಲಿ ಫೇಲ್ ಮಾಡು’ ಎಂದು ಪ್ರಾರ್ಥಿಸಿ ಪರೀಕ್ಷೆ ಬರೆದೆ. ಆದರೆ ಆ ಪರೀಕ್ಷೆಯಲ್ಲೂ ನನಗೆ ಉತ್ತಮ ಅಂಕಗಳೇ ದೊರೆತವು. ಈ ದ್ವಂದ್ವ ನನ್ನ ಮನಸ್ಸಿನಲ್ಲಿ ಹೊಸ ಆಲೋಚನೆಗಳಿಗೆ ನಾಂದಿ ಹಾಡಿತು. ಮನದಲ್ಲಿ ಪ್ರಶ್ನಿಸುವ ಮನೋಭಾವವನ್ನು ಹುಟ್ಟು ಹಾಕಿತ್ತು. ದೇವರು ಮತ್ತು ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ನಾನು ಬರೆಯುವುದರಲ್ಲೇ ನನ್ನ ಫಲಿತಾಂಶವಿದೆ ಎಂಬುದು ಮನದಟ್ಟಾಗಿತ್ತು.

ಅಸ್ಪಶ್ಯತೆ ವಿರುದ್ಧದ ನನ್ನ ಮೊದಲ ಧ್ವನಿಯದು

ನಾನು ಚಿಕ್ಕವನಿದ್ದಾಗಿನ ನೆನಪು. ನಮ್ಮ ಅಪ್ಪ ಅಮ್ಮಂದಿರಿಗೂ ಜಾತಕದ ಮೇಲೆ ತೀರಾ ನಂಬಿಕೆ. ನನಗೆ ಕೆಲ ವರ್ಷ ಕಾಲ ಅಸ್ವಸ್ಥತೆ ಕಾಡಿತ್ತು. ಆಗ ನನ್ನ ಜಾತಕದಲ್ಲೂ ದೋಷವಿದೆ ಎಂಬುದಾಗಿ ನನ್ನ ಜಾತಕ ಮಾಡಿಸಿದವರು ಹೇಳಿದ್ದರು. ಅದಕ್ಕೆ ಪರಿಹಾರವಾಗಿ ಮನೆಗೆ ದಲಿತ ಮಹಿಳೆಯನ್ನು ಕರೆಸಿ ಅವರ ತಲೆಗೆ ಎಣ್ಣೆ ಸುರಿಯುವ ಕ್ರಮ. ನನ್ನಮ್ಮನೂ ಒಂದು ಅಮಾವಾಸ್ಯೆಯ ದಿನ ದಲಿತ ಮಹಿಳೆಯೊಬ್ಬರನ್ನು ಮನೆಗೆ ಕರೆಸಿಕೊಂಡರು. ಆಕೆಯ ಜತೆ ಮೂವರು ಪುಟ್ಟ ಮಕ್ಕಳೂ ಬಂದಿದ್ದರು. ದೊಡ್ಡ ಎಲೆಯಲ್ಲಿ ರಾಶಿ ಅನ್ನ. ಅದರ ಮೇಲೆ ಹುರುಳಿ ಗಸಿ ಹಾಕಿ ಮನೆಯ ಹೊರಗೆ ಕುಳಿತಿದ್ದ ದಲಿತ ಮಹಿಳೆಗೆ ಅದನ್ನು ನೀಡಲಾಯಿತು. ಬಳಿಕ ಆಕೆಯ ತಲೆಯ ಮೇಲೆ ಎಣ್ಣೆ ಸುರಿಯಲಾಯಿತು. ಆಕೆ ತನ್ನ ತಲೆ ಮೇಲಿನ ಎಣ್ಣೆಯನ್ನು ತನ್ನ ಮಕ್ಕಳ ತಲೆಗೂ ಸವರುತ್ತಿದ್ದರು. ಇದನ್ನು ಕಂಡು ನನಗೆ ಅದ್ಯಾಕೋ ಕಸಿವಿಸಿಯಾಯಿತು. ‘ಅಮ್ಮಾ ಇದೆಲ್ಲಾ ಯಾಕೆ?’ ಎಂದು ಪ್ರಶ್ನಿಸಿದೆ. ‘ನಿನ್ನ ಗ್ರಹಚಾರ ಸರಿ ಇಲ್ಲವಂತೆ. ಈ ರೀತಿ ಮಾಡಿದರೆ ನಿನ್ನ ಕೆಟ್ಟ ಗ್ರಹಚಾರ ಆ ದಲಿತ ಮಹಿಳೆಗೆ ಹೋಗುತ್ತೆ. ನಿನ್ನ ಜೀವನ ಉತ್ತಮವಾಗುತ್ತೆ’’ ಎಂಬ ಅಮ್ಮನ ಉತ್ತರ ನನಗೇಕೋ ಹಿಡಿಸಲಿಲ್ಲ. ‘‘ಅಲ್ಲಾ ನಾನಾದರೂ ಸಣ್ಣವ. ಆದರೆ ಅವಳಿಗೆ ಮೂರು ಮಕ್ಕಳು ಬೇರೆ ಇದ್ದಾರೆ. ನನ್ನ ಗ್ರಹಚಾರ ಆಕೆಗೆ ಹೋಗಿ ಆಕೆಗೆ ತೊಂದರೆಯಾದರೆ ಆ ಮಕ್ಕಳ ಗತಿಯೇನು. ಇದೆಲ್ಲ ಸರಿಯಲ್ಲ’’ ಎಂಬುದು ನನ್ನ ಆಕ್ಷೇಪವಾಗಿತ್ತು. ಆದರೆ ಅಮ್ಮ ಮಾತ್ರ, ‘‘ನೀನು ಸುಮ್ಮನಿರು’’ ಎಂದು ನನ್ನ ಬಾಯಿ ಮುಚ್ಚಿಸಿದ್ದಳು ಅಂದು ನನ್ನಮ್ಮ. ಆದರೆ ಆ ಘಟನೆ ಮಾತ್ರ ನನ್ನ ಮನದಲ್ಲಿ ಅಳುಕು ಮೂಡಿಸಿತ್ತು. ಇದಾಗಿ ನಾನು ಎಂಟನೆ ತರಗತಿಯಲ್ಲಿರುವಾಗ ನಾನು ವಿಜ್ಞಾನ ಸಂಘದ ಸದಸ್ಯನಾಗಿದ್ದೆ. ನಮ್ಮ ವಿಜ್ಞಾನ ಮೇಸ್ಟ್ರು ಕೆ. ಪಾಂಡುರಂಗ ಅವರ ಸಂವಹನ ಕಲೆ, ಅವರ ವೈಜ್ಞಾನಿಕ ಅಲೋಚನೆಗಳು ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ವೈಜ್ಞಾನಿಕ, ವೈಚಾರಿಕ ಪುಸ್ತಕಗಳತ್ತ ಮನಸ್ಸು ಸೆಳೆಯಿತು. ಅವರಿಂದಾಗಿ ನನ್ನಲ್ಲಿ ವೈಜ್ಞಾನಿಕ ಮನೋಭಾವ ಆವಾಗಿನಿಂದಲೇ ಮನದಲ್ಲಿ ಮೊಳಕೆಯೊಡೆಯಿತು. ಪ್ರಶ್ನಿಸುವ, ಧ್ವನಿ ಎತ್ತುವ ಮನೋಭಾವ ನನ್ನಲ್ಲಿ ಬೆಳೆಯಿತು.
ಮುಂದುವರಿಯುವುದು....

ನಿರೂಪಣೆ: ಸತ್ಯಾ ಕೆ.

Writer - ನರೇಂದ್ರ ನಾಯಕ್

contributor

Editor - ನರೇಂದ್ರ ನಾಯಕ್

contributor

Similar News