ನಾನು ಓದಿದ ಪುಸ್ತಕ

Update: 2017-06-25 10:40 GMT


ಡಾ.ಅಶೋಕ ಕುಮಾರ್ ರಂಜೇರೆ
ಕನ್ನಡ ವಿಶ್ವವಿದ್ಯಾನಿಲಯ ಹಂಪಿ.

ಕನ್ನಡ ಭಾಷೆಯ ರಚನೆ ಮತ್ತು ಬಳಕೆ ಕುರಿತಂತೆ ಕಳೆದ ಒಂದೆರಡು ದಶಕಗಳಿಂದ ಕನ್ನಡದ ತಿಳಿವಿನ ಮೂಲಕ ನೋಡುವ ಪರಿಪಾಠವನ್ನು ಒಂದು ವಲಯ ಮಾಡುತ್ತಿದೆ. ಕನ್ನಡ ಭಾಷೆಯ ರಚನೆ ಮತ್ತು ಬಳಕೆ ಕುರಿತಂತೆ ಈ ತೆರನಾದ ಆಲೋಚನೆಗಳು, ಅಭಿವ್ಯಕ್ತಿಗಳು ಇತಿಹಾಸದಲ್ಲಿ ಅಲ್ಲಲ್ಲಿ ಕಂಡುಬರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಇಂಥ ಹೊಸ ಬಗೆಯ ಆಲೋಚನಾ ವಿಧಾನ ತುಂಬಾ ದೊಡ್ಡ ಬದಲಾವಣೆಯನ್ನೇನು ತರದೇ ಹೋದರೂ ಒಂದು ಆಲೋಚನಾ ವಲಯವನ್ನು ಹುಟ್ಟುಹಾಕಿದ್ದಂತೂ ಸತ್ಯ. ಡಾ.ಡಿ.ಎನ್.ಶಂಕರಭಟ್, ಕೆ.ವಿ.ಎನ್, ಆರ್ ಚಲಪತಿ, ಮೇಟಿ ಮಲ್ಲಿಕಾರ್ಜುನ್, ಪಿ.ಪಿ.ಗಿರಿಧರ್, ಬಸವರಾಜ ಕೋಡಗುಂಟಿ, ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಭಾಷಾಧ್ಯಯನ ವಿಭಾಗ ಇಂಥ ಹೊಸ ಬಗೆಯ ಆಲೋಚನೆಯ ಮಾದರಿಯನ್ನು ಮುನ್ನೆಲೆಗೆ ತಂದವರಾಗಿದ್ದಾರೆ. ಈ ಕುರಿತಂತೆ ಪ್ರಯೋಗಗಳೂ ನಡೆಯುತ್ತಿವೆ. ಅಂಥ ಪ್ರಯೋಗದ ಮಾದರಿಯ ಬರಹವನ್ನೊಳಗೊಂಡ ಪುಸ್ತಕ ‘‘ಕನ್ನಡದಲ್ಲಿ ಪದ ಮತ್ತು ಕೂಡು ಪದ.’’

ಮೈಸೂರಿನ ಭಾರತಿಯ ಭಾಷಾ ಸಂಸ್ಥಾನ ಕೇಂದ್ರದಲ್ಲಿ ಮೂರ್ನಾಲ್ಕು ದಶಕಗಳ ಕಾಲ ಭಾಷಿಕ ರಚನೆ ಮತ್ತು ಬಳಕೆ ಕುರಿತಂತೆ ಕೆಲಸ ನಿರ್ವಹಿಸಿದ ಪಿ.ಪಿ.ಗಿರಿಧರ್ ಅವರು ಈ ಪುಸ್ತಕ ರಚನೆ ಮಾಡಿದ್ದು ವಿಶೇಷವಾಗಿದೆ. ಲೇಖಕರೇ ಹೇಳುವ ಹಾಗೆ ಎರಡು ಮುಖ್ಯ ಗುರಿಗಳನ್ನು ಇಟ್ಟುಕೊಂಡು ಈ ಹೊತ್ತಿಗೆಯನ್ನು ರಚಿಸಲಾಗಿದೆ. ಒಂದು. ಕನ್ನಡದ ತರ್ಕಬದ್ಧವಾದ ಮಾತುಕತೆಗಳು ಕನ್ನಡದಲ್ಲೇ ಆಗಬೇಕು ಎನ್ನುವುದು. ಎರಡು. ಕನ್ನಡದ ವ್ಯಾಕರಣ ಕನ್ನಡದ್ದೇ ? ಸಂಸ್ಕೃತದ್ದಲ್ಲ ಎನ್ನುವುದನ್ನು ಸಾಧಿಸಿ ತೋರಿಸುವುದು. ಕನ್ನಡ ಸಂಸ್ಕೃತಮಯವಾಗಿದ್ದು, ಕನ್ನಡದ ವ್ಯಾಕರಣದ ಮೇಲೆ ಸಂಸ್ಕೃತದ ಪ್ರಭಾವ ಆಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲದಿದ್ದರೂ, ಸಲ್ಲದ ಈ ಮಾದರಿಯನ್ನು ಕನ್ನಡಿಗರು ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವುದು ಚಕಿತವನ್ನುಂಟುಮಾಡುವ ಮತ್ತು ಮುಜುಗರ ತಂದಿರುವ ಸಂಗತಿಯೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಕಟ್ಟುವಿಕೆ ಡಿ.ಎನ್.ಎಸ್, ಕೆ.ವಿ.ಎನ್ ಮುಂತಾದವರಿಂದ ಇಂಥ ಗುಲಾಮಗಿರಿಯನ್ನು ದಾಟಿ ಮುನ್ನಡೆಯುತ್ತಿರುವುದು ಮುದ ನೀಡುವ ಸಂಗತಿ ಆಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಹೊತ್ತಿಗೆಗಳನ್ನು ತಂದ ಶಂಕರಭಟ್ಟರ ಮಾದರಿಯನ್ನು ಒಪ್ಪಿಕೊಂಡು ಗಿರಿಧರ್ ಅವರು ಈ ಬರಹವನ್ನು ಮಾಡಿದ್ದಾರೆ.

ಡಾ. ಪಿ.ಪಿ ಗಿರಿಧರ್ ಅವರು ತುಂಬಾ ಹಿಂದೆಯೇ ಬರೆದ ‘‘ಕನ್ನಡದಲ್ಲಿ ಕೂಡುಪದ’’ ಎಂಬ ಇಂಗ್ಲಿಷ್ ಬರಹದ ಕನ್ನಡದ ಚಹರೆ ಈ ಪುಸ್ತಕ. ಸಮಾಸಗಳ ಕುರಿತಂತೆ ಈವರೆಗೆ ಆಳವಾಗಿ ವಿವರಿಸಿ ಹೇಳುವ ಬಗೆ ಕನ್ನಡದಲ್ಲಿ ಇಲ್ಲದ ಕಾರಣ ಸಂಸ್ಕೃತದಿಂದ ಎತ್ತಿಕೊಂಡು ಕನ್ನಡದ ಮೇಲೆ ಹೇರಿರುವ ಮಾದರಿಯನ್ನು ಪಕ್ಕಕ್ಕಿರಿಸಿ ವೈಜ್ಞಾನಿಕ ತಳಹದಿಯ ಮೇಲೆ ಕನ್ನಡವನ್ನು ಕನ್ನಡದಂತೆ ನೋಡಲು ಪ್ರಯತ್ನಿಸಿದ ಮಾದರಿ ಇದಾಗಿದೆ. ಇದನ್ನು ಹಿರಿಯರಾದ ಗಿರಿಧರ್ ಅವರೇ ತಮ್ಮ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ.

ಡಿ.ಎನ್.ಶಂಕರಭಟ್ಟರು ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಮತ್ತು ಇತರೆ ಬರಹಗಳು ಬಂದ ಮೇಲೆ ಅದನ್ನು ತಾತ್ವಿಕವಾಗಿ ಒಪ್ಪಿಕೊಂಡು ಅದನ್ನು ಅನುಸರಿಸುತ್ತಿರುವ ವಲಯವೇ ಕನ್ನಡದಲ್ಲಿ ನಿರ್ಮಾಣ ಆಗಿದೆ. ಕೆಲವರು ಈಗಿರುವ ಜನಪ್ರಿಯ ಮಾದರಿಯ ಸಂಸ್ಕೃತ ಮಾದರಿಯನ್ನು ಅನುಸರಿಸುವ ವ್ಯಾಕರಣವನ್ನು ಒಪ್ಪದಿದ್ದರೂ ಹೊಸ ಮಾದರಿಯನ್ನು ಬೆಂಬಲಿಸುತ್ತಿಲ್ಲ. ಶಂಕರಭಟ್ಟರ ಬರವಣಿಗೆ ಕನ್ನಡದ ನುಡಿಯಿಂದಲೇ ರಚನೆಯಾದವುಗಳಾಗಿದ್ದರೂ ಬರವಣಿಗೆಗೆ ಒಗ್ಗದ ನುಡಿಯಾಗಿದೆ ಎಂದು ಹಳೆಯ ಮಾದರಿ ಯನ್ನೇ ಮುಂದುವರಿಸುತ್ತಿರುವ ವರ್ಗವೂ ಇದೆ. ಈ ಎರಡೂ ಮಾದರಿಗಳನ್ನು ಒಗ್ಗೂಡಿಸಿಕೊಂಡು ಕನ್ನಡಕ್ಕೆ ಹತ್ತಿರವಾಗುವ ಮಾದರಿಯೊಂದನ್ನು ರೂಪಿಸಿದರೆ ಒಳಿತು ಎನ್ನುವ ವರ್ಗವೂ ಇದೆ. ಡಾ, ಪಿ,ಪಿ ಗಿರಿಧರ್ ಅವರ ಈ ಬರವಣಿಗೆ ಡಾ.ಡಿ.ಎನ್.ಶಂಕರಭಟ್ಟರ ಬರವಣಿಗೆಯನ್ನು ಒಪ್ಪಿಕೊಂಡು ಅದೇ ಮಾದರಿಯಲ್ಲಿ ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಮುಂದುವರಿಸಿದ್ದಾಗಿದೆ.

ಪದ ಮತ್ತು ಕೂಡುಪದ (ಸಮಾಸ)ಕ್ಕೆ ಸಂಬಂಧಿಸಿದಂತೆ ಅದರ ರಚನೆ ಮತ್ತು ಬಳಕೆ ಕುರಿತಂತೆ 1, ಪದ 2. ಪದ ಇಟ್ಟಳ ಅಥವಾ ಪದ ಕಟ್ಟಡ 3. ಕೂಡುಪದ 4. ಕೂಡುಪದ ಎಂದರೇನು ? 5. ಕೂಡುಪದದ ಒರೆಗಲ್ಲುಗಳು 6. ಚರ್ಚೆ 7. ಕೂಡುಪದದ ಬಗೆಗಳು 8. ಒಡಕೂಡುಪದಗಳು 9. ನೆಮ್ಮಿತ ಕೂಡುಪದಗಳು 10 ಹಿಂತುದಿ ಎನ್ನುವ ಶೀರ್ಷಿಕೆಯಡಿಯಲ್ಲಿ ಪದ ಮತ್ತು ಕೂಡುಪದಗಳನ್ನು ಕುರಿತು ಕೂಲಂಕುಶವಾಗಿ ಚರ್ಚಿಸುವ ಈ ಪುಸ್ತಕ ಉದ್ದೇಶ ಮತ್ತು ಪ್ರಾಯೋಗಿಕ ದೃಷ್ಟಿಯಿಂದ ಓದುಗರಿಗೆ ಕುತೂಹಲ ಮೂಡಿಸಿದರೂ ಸಾಮಾನ್ಯ ಓದುಗರಿಗೆ ದಕ್ಕುವಲ್ಲಿ ಹಿಂದೆ ಬೀಳುತ್ತದೆ.

ಕನ್ನಡದ್ದೇ ತಿಳಿವಿನಲ್ಲಿ ರಚನೆಗೆ ಮುಂದಾಗಿರುವುದನ್ನು ಹೇಳುವ ಈ ಹೊತ್ತಿಗೆ ತಲೆಬರಹದಿಂದ ಕುತೂಹಲ ಹುಟ್ಟಿಸುತ್ತದೆ. ಬರವಣಿಗೆಯಲ್ಲೂ ಆ ಪ್ರಯತ್ನ ಇದೆ. ಆದರೆ ಓದಿಗೆ ಕುಳಿತರೆ ಪಾರಿಭಾಷಿಕಗಳು, ವಾಕ್ಯರಚನೆಯಲ್ಲಿನ ಪದಗಳ ಬಳಕೆ ಓದುಗರಿಗೆ ತಲುಪುವಲ್ಲಿ ಹಿಂದೆ ಸರಿಯುತ್ತದೆ. ಈ ಹೊತ್ತಿಗೆಯ ರಚನೆಯಲ್ಲಿ ಡಾ. ಡಿ.ಎನ್.ಶಂಕರ ಭಟ್ಟರ ತಾತ್ವಿಕತೆಯನ್ನು ಎರಡು ರೀತಿಯಲ್ಲಿ ಮುಂದುವರಿಸಿದಂತೆ ಕಾಣುತ್ತದೆ. ಒಂದು ಕನ್ನಡದ್ದೇ ಆದ ಭಾಷಿಕ ರಚನೆಗಳನ್ನು ಬಳಸುವುದು. ಉದಾಹರಣೆಗೆ : ಆಡುಗ, ಇಟ್ಟಳ, ಉಲಿ, ಎಸಗು, ಎಸಗುಪದ, ಕೇಳ್ವಿ, ನುಡಿತ, ಸೊಲ್ಲು, ಸೊಲ್ಲರಿಮೆ, ನುಡಿಯರಿಮೆ, ಹೆಸರುಪದ, ಕೂಡುಪದ, ಹಿನ್ನೋಟ, ಬಿಡಿಯೊರೆ, ನೆಲದನುಡಿಗ, ನಡುವಣಾಟ, ಬೇರುಪದ, ತಿರುಳು, ಹುರುಳು ಪದಗಳನ್ನು ಬಳಸಿರುವುದು. ಎರಡನೆಯದು ಮಾತಿನಂತೆ ಬರೆಯುವುದು. ಉದಾಹರಣೆಗೆ : ಅತವಾ, ಅರ್ತ, ಆಕ್ರುತಿಮ, ಚಂದಸ್ಸು, ದಾರ್ಮಿಕ, ವರ್ಶ, ಮುಗಿತಾಯ, ವಿಶಯ, ಸಂದರ್ಬ, ಮುಕ್ಯ, ಗಿರಿದರ, ಶಂಕರ ಬಟ್ಟ ಮುಂತಾದವುಗಳು.

ಲೇಖಕರು ಮೊದಲೇ ಹೇಳುವಂತೆ ಈ ಎರಡೂ ವಿಧಾನಗಳನ್ನೂ ಬಳಸಿದ್ದಾರೆ. ಜೊತೆಗೆ ಇಂಗ್ಲಿಷಿನ ರೂಪಗಳನ್ನೂ ಬಳಸಿಕೊಂಡಿದ್ದಾರೆ. ಉದಾಹರಣೆಗೆ : 1. ಕನ್ನಡ ನುಡಿ ಎಗ್ಲುಟಿನೇಟಿವ್ ಆದುದರಿಂದ ಕನ್ನಡದಲ್ಲಿ ಉಲಿಸೇರುವೆ ಆಪರೇಶನ್‌ಗಳು ಇಂಗ್ಲಿಷ್‌ಗಿಂತ ಹೆಚ್ಚು ಇರುವುದರಿಂದ ಮತ್ತು ಜಟಿಲವಾಗಿರುವುದರಿಂದ ಈ ಸನ್ನಿವೇಶ ಎದ್ದಿದೆ. 2. ಇದಕ್ಕೂ ಇಟ್ಟಳದ ಅಥವಾ ಸ್ಟ್ರಕ್ಚರ್‌ನ ಮೊರೆ ಹೋಗಬೇಕು : ಎಂದೂ ಎಂಬುದು ಹೊತ್ತು ಎಸಗುಣಪದ(ಟೈಮ್ ಎಡ್ವರ್ಬಿಯಲ್) ಅತವ ಕೋಟೆಟಿವ್.(ಪುಟ-21) 3. ಇದು ಕೂಡುಪದದ ಇರುವಿಗೆ ಡೈನಮಿಕ್ಸ್ ಗೆ ವಿರುದ್ಧವಾದದ್ದು. ಹಾಗಾಗಿ ಉಂಡೆಲೆ ಉಂಡೆಲೆ ಕೂಡುಪದವಾಗುವುದಿಲ್ಲ. ಉಂಡೆಲೆ ಪದಕೋಶದಲ್ಲಿ ಎಡೆ ಪಡೆಯುವುದಿಲ್ಲ. ಉಂಡೆಲೆ ಹೊಸ ಲೆಕ್ಸೀಮ್ ಅಲ್ಲ. (ಪುಟ -55) ಇಂಥ ಹಲವಾರು ರೂಪಗಳು ಪುಸ್ತಕದುದ್ದಕ್ಕೂ ಕಂಡುಬರುತ್ತವೆ. ಈ ಬಗೆಯ ಮಾತಿನ ರೂಪದ ಬರವಣಿಗೆ ಹೆಚ್ಚು ಕಮ್ಯೂನಿಕೇಟಿವ್ ಆಗಬೇಕಿತ್ತು. ಡಾ.ಡಿ.ಎನ್.ಶಂಕರ ಭಟ್ ಅವರ ನುಡಿಯರಿಮೆಯನ್ನು ಅನುಸರಿಸಲು ಹೋಗಿರುವ ಈ ಪುಸ್ತಕ ಅನೇಕ ಗೊಂದಲಗಳನ್ನು ಸೃಷ್ಟಿಸಿಕೊಂಡು ಓದುಗರಿಗೆ ಸಂವಹನವಾಗದೇ ಕಷ್ಟವೆನಿಸುತ್ತಿದೆ.

ಲೇಖಕರು ಬರಹದ ಆರಂಭದಲ್ಲಿ ಡಾ.ಡಿ.ಎನ್.ಶಂಕರಭಟ್ಟರನ್ನು ಅನುಸರಿಸಿರುವುದಾಗಿ ಒಪ್ಪಿಕೊಂಡರೂ ಮುಖಪುಟದಲ್ಲಿ ತಮ್ಮ ಹೆಸರನ್ನು ಪಿ.ಪಿ.ಗಿರಿಧರ್ ಎನ್ನುವಲ್ಲಿ ಮಹಾಪ್ರಾಣ ಬಳಸುತ್ತಾರೆ. ಆರಂಭದ ಮುಮ್ಮಾತಿನಲ್ಲಿ ಗಿರಿದರ ಎಂದು ಅಲ್ಪಪ್ರಾಣ ಬಳಸುತ್ತಾರೆ. ಹಾಗಾಗಿ ಕನ್ನಡಕ್ಕೆ ಒಗ್ಗುವ ಅಲ್ಪಪ್ರಾಣ ಬಳಸಬೇಕೆ, ಮಹಾಪ್ರಾಣ ಬಳಕೆ ಕೆಲವೆಡೆ ಉಳಿಸಿಕೊಳ್ಳಬೇಕೆ ಎನ್ನುವಲ್ಲಿ ಗೊಂದಲವಿದ್ದಂತೆ ಕಾಣುತ್ತದೆ.

ಪುಸ್ತಕ: ಕನ್ನಡದಲ್ಲಿ ಪದ ಮತ್ತು ಕೂಡುಪದ
ಲೇಖಕರು: ಡಾ. ಪಿ.ಪಿ.ಗಿರಿಧರ, ನಿವೃತ್ತ ಪ್ರಾಧ್ಯಾಪಕರು, ಸಿ.ಐ.ಐ.ಎಲ್. ಮೈಸೂರು
ಪ್ರಕಾಶನ: ಚೇತನ್ ಬುಕ್ ಹೌಸ್ ಮೈಸೂರು -24
ಪ್ರಕಟಣೆ ವರ್ಷ: 2016

Writer - ಡಾ.ಅಶೋಕ ಕುಮಾರ್ ರಂಜೇರೆ

contributor

Editor - ಡಾ.ಅಶೋಕ ಕುಮಾರ್ ರಂಜೇರೆ

contributor

Similar News