ಇಂದಿನ ರಾಜಕಾರಣಿಗಳಿಗೆ ಗೋಪಾಲಗೌಡ ಆದರ್ಶ: ಪ್ರೊ.ಚಂದ್ರಶೇಖರ ಕಂಬಾರ
ಬೆಂಗಳೂರು, ಜೂ. 25: ನಾನು ನೋಡಿದ ಶ್ರೇಷ್ಟ ವ್ಯಕ್ತಿ ಹಾಗೂ ಆದರ್ಶ ರಾಜಕಾರಣಿ ಶಾಂತವೇರಿ ಗೋಪಾಲಗೌಡ ಅವರು. ಗೋಪಾಲಗೌಡರು ಇಂದಿನ ಎಲ್ಲ ರಾಜಕಾರಣಿಗಳಿಗೆ ಮಾದರಿ ಎಂದು ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪ ಸಭಾಂಗಣದಲ್ಲಿ ಕನ್ನಡ ಜನಶಕ್ರಿ ಕೇಂದ್ರದಿಂದ ಏರ್ಪಡಿಸಿದ್ದ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಬರವಣಿಗೆಯಲ್ಲಿ ರಾಜಕೀಯ ಸೃಷ್ಟಿಯಾಗಲು ಗೋಪಾಲಗೌಡರೇ ಪ್ರಮುಖ ಕಾರಣ. ಅವರು ಅರಿವು-ಪ್ರಜ್ಞೆ ಮೂಡಿಸಿದರು ಎಂದು ಸ್ಮರಿಸಿದರು.
ಉತ್ತಮ ವಾಗ್ಮಿಯಾಗಿದ್ದ ಗೋಪಾಲಗೌಡರಿಗೆ ವಿರೋಧಿಗಳೆ ಇರಲಿಲ್ಲ. ಮಾತಿಗೆ ಹರಿತ, ಸಮಯೋಚಿತ ಹಾಸ್ಯ, ವ್ಯಂಗ್ಯ ಈ ಎಲ್ಲದ್ದರಲ್ಲೂ ಬುದ್ಧಿವಂತರಾಗಿದ್ದ ಗೋಪಾಲಗೌಡರು, ಮಾಜಿ ಸಿಎಂ ದೇವರಾಜ ಅರಸು ಅವರ ಮೇಲೆ ಹೆಚ್ಚು ಪ್ರಭಾವ ಬೀರಿದ್ದರು ಎಂದು ಶ್ಲಾಘಿಸಿದರು.
ಗೋಪಾಲಗೌಡರಿಂದ ಪ್ರಭಾವಿತರಾದ ದೇವರಾಜ ಅರಸು ಅವರು 1974 ರಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿ ಮಾಡಿದರು. ಲಕ್ಷಾಂತರ ರೈತರಿಗೆ ಭೂಮಿಯ ಒಡೆತನ ನೀಡಿದ ಕೀರ್ತಿ ಶಾಂತವೇರಿ ಗೋಪಾಲಗೌಡರಿಗೆ ಸಲ್ಲಬೇಕು ಎಂದು ಕಂಬಾರ ನೆನಪು ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಹೊಳೆಹೊಸೂರಿನ ರಾಚಪ್ಪಧೂಳಪ್ಪಹಡಪದ ಅವರಿಗೆ ಶಾಂತವೇರಿ ಗೋಪಾಲ ಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಚಂದ್ರಶೇಖರ ಪಾಟೀಲ್, ಹಿರಿಯ ನ್ಯಾಯವಾದಿ ದಿವಾಕರ್, ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಹಾಜರಿದ್ದರು.