ಮೊಸಳೆ ದಾಳಿಗೆ ಯುವಕನ ಕೈ ಕಟ್ !
ಬೆಂಗಳೂರು, ಜೂ. 25: ಟ್ರಕಿಂಗ್ ತೆರಳಿದ್ದ ಯುವಕ ಕೆರೆಯಲ್ಲಿ ಈಜುವ ವೇಳೆ ಮೊಸಳೆ ದಾಳಿಗೆ ಸಿಕ್ಕಿದ ಪರಿಣಾಮ ಯುವಕನ ಎಡಗೈ ಕಟ್ ಆಗಿರುವ ಘಟನೆ ಇಲ್ಲಿನ ರಾಮನಗರ ಜಿಲ್ಲೆಯ ಕನಕಪುರದ ತಟ್ಟೆಕೆರೆ ಗ್ರಾಮದಲ್ಲಿ ರವಿವಾರ ಸಂಭವಿಸಿದ್ದು, ಯುವ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಬೆಂಗಳೂರಿನ ಇಂದಿರಾನಗರ ನಿವಾಸಿ ಮದೀತ್(27) ಎಂಬ ಯುವಕ ಮೊಸಳೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಗೊತ್ತಾಗಿದೆ.
ಯುವಕ ತನ್ನ ಗೆಳತಿ ಹಾಗೂ ಎರಡು ಶ್ವಾನಗಳೊಂದಿಗೆ ರವಿವಾರದ ರಜೆ ಹಿನ್ನೆಲೆಯಲ್ಲಿ ಟ್ರಕಿಂಗ್ ತೆರಳಿದ್ದ. ಈ ವೇಳೆ ತಟ್ಟೆಕೆರೆ ಗ್ರಾಮದ ಹೊರ ವಲಯದಲ್ಲಿನ ಕೆರೆಯಲ್ಲಿ ಶ್ವಾನಗಳ ಮೈ ತೊಳೆಯಲು ಕೆರೆಗೆ ಇಳಿದಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಕೆರೆಯಲ್ಲಿ ಮೊಸಳೆಗೆ ಹೆಚ್ಚಾಗಿದ್ದು, ಈ ಹಿಂದೆ ಹಲವು ಬಾರಿ ಹಸುಗಳ ಮೇಲೆ ಮೊಸಳೆಗಳು ದಾಳಿ ನಡೆಸಿದ್ದವು. ಹೀಗಾಗಿ ಕೆರೆ ಸಮೀಪ ಮೊಸಳೆಗಳಿವೆ ಎಂದು ಫಲಕವಿದ್ದರೂ, ಇದನ್ನು ಅರಿಯದೆ ಮದೀತ್ ನೀರಿಗೆ ಇಳಿದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.