ಬಿಎಸ್‌ವೈಗೆ ತಾಕತ್ತಿದ್ದರೆ ಪ್ರಧಾನಿ ಮೋದಿಗೆ ಬುದ್ದಿ ಹೇಳಲಿ: ವೀರಪ್ಪ ಮೊಯ್ಲಿ
ಬೆಂಗಳೂರು, ಜೂ. 25: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಅವರಿಗೆ ಬುದ್ಧಿ ಹೇಳಿ ರೈತರ ಸಾಲಮನ್ನಾ ಮಾಡಿಸಲಿ ಎಂದು ಸಂಸದ ಡಾ.ಎಂ. ವೀರಪ್ಪ ಮೊಯ್ಲಿ ಸವಾಲು ಹಾಕಿದ್ದಾರೆ.
ರವಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿದೆ. ಯಡಿಯೂರಪ್ಪನವರಿಗೆ ಸಹಕಾರ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ನಡುವಿನ ವ್ಯತ್ಯಾಸದ ಅರಿವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ರಾಜ್ಯ ಸರಕಾರ ಸಹಕಾರಿ ಬ್ಯಾಂಕುಗಳ ಮೂಲಕ ರೈತರು ಪಡೆದಿರುವ 50ಸಾವಿರ ರೂ.ವರೆಗಿನ ಸಾಲಮನ್ನಾ ಘೋಷಿಸಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಅದು ಕೇಂದ್ರ ಸರಕಾರಕ್ಕೆ ಇದೆ ಎಂಬ ಸಾಮಾನ್ಯ ಜ್ಞಾನವೂ ಬಿಎಸ್‌ವೈಗೆ ಇದ್ದತ್ತಿಲ್ಲ. ಹೀಗಿದ್ದರೂ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆಂದು ಟೀಕಿಸಿದರು.
ರಾಜ್ಯ ಸರಕಾರದ ಮೂಗು ಹಿಡಿದು ಸಾಲಮನ್ನಾ ಮಾಡುವ ಮಾತುಗಳನ್ನು ಆಡುತ್ತಿದ್ದ ಯಡಿಯೂರಪ್ಪನವರಿಗೆ ಈಗ ತಾಕತ್ತಿದ್ದರೆ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೂಲಕ ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಪಡೆದ ಸಾಲಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು.