ಎಡಮಗ್ಗುಲಾಗಿ ನಿದ್ರಿಸುವುದರ ನಾಲ್ಕು ಅತ್ಯುತ್ತಮ ಲಾಭಗಳೇನು ಗೊತ್ತೇ...?

Update: 2017-06-26 10:16 GMT

ಎಡಮಗ್ಗುಲಾಗಿ ನಿದ್ರಿಸುವುದು ಒಳ್ಳೆಯದು ಎಂಬ ಮಾತನ್ನು ನೀವು ಕೇಳಿರಬಹುದು ಮತ್ತು ಅದಕ್ಕೆ ಹೆಚ್ಚಿನ ಗಮನ ನೀಡಿರಲಿಕ್ಕಿಲ್ಲ. ಆದರೆ ಎಡಮಗ್ಗುಲಾಗಿ ನಿದ್ರಿಸುವುದು ನಿಜಕ್ಕೂ ಒಳ್ಳೆಯದು. ಕೆಲವು ಆರೋಗ್ಯ ತಜ್ಞರು ಎಡಮಗ್ಗುಲಾಗಿ ನಿದ್ರಿಸುವುದು ಶರೀರದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಿರುತ್ತಾರೆ. ಕಾರಣಗಳಿಲ್ಲಿವೆ.....

 ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ನಮ್ಮ ಶರೀರದ ಎಡ ಮತ್ತು ಬಲ ಭಾಗಗಳು ವಿಭಿನ್ನವಾಗಿ ವರ್ತಿಸುತ್ತವೆ. ಆಸಕ್ತಿಯ ವಿಷಯವೆಂದರೆ ಉತ್ತಮ ಆರೋಗ್ಯಕ್ಕಾಗಿ ಎಡಮಗ್ಗುಲಾಗಿ ನಿದ್ರಿಸುವುದು ಒಳ್ಳೆಯದು ಎನ್ನುವ ಸಿದ್ಧಾಂತ ಹುಟ್ಟಿಕೊಂಡಿದ್ದೇ ಪ್ರಾಚೀನ ಕಾಲದ ಆಯುರ್ವೇದ ಶಾಸ್ತ್ರದಿಂದ. ಪ್ರತಿದಿನ ನಾವು ನಿದ್ರಿಸುವ ಅವಧಿ ಮತ್ತು ಒಳ್ಳೆಯ ನಿದ್ರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನಮಗೆಲ್ಲರಿಗೂ ಗೊತ್ತು. ಆದರೆ ನಾವು ಯಾವ ಭಂಗಿಯಲ್ಲಿ ನಿದ್ರಿಸುತ್ತೇವೆ ಎನ್ನುವುದೂ ಇಲ್ಲಿ ಮುಖ್ಯವಾಗಿದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜಠರ ಮತ್ತು ಮೇದೋಜ್ಜೀರಕ ಗ್ರಂಥಿ ನಮ್ಮ ಶರೀರದ ಎಡಭಾಗದಲ್ಲಿವೆ. ಹೀಗಾಗಿ ಎಡಮಗ್ಗುಲಾಗಿ ನಿದ್ರಿಸುವುದರಿಂದ ಅವು ಸಹಜ ಭಂಗಿಯಲ್ಲಿರುತ್ತವೆ ಮತ್ತು ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತವೆ. ಗುರುತ್ವಾಕರ್ಷಣೆಯ ಬಲದಿಂದಾಗಿ ನಾವು ಸೇವಿಸಿರುವ ಆಹಾರ ಜಠರದ ಮೂಲಕ ಸುಲಭವಾಗಿ ಸಾಗುತ್ತದೆ ಮತ್ತು ಅಗತ್ಯವಿದ್ದಾಗೆಲ್ಲ ಮೇದೋಜ್ಜೀರಕ ಗ್ರಂಥಿಯು ಕಿಣ್ವಗಳನ್ನು ಬಿಡುಗಡೆಗೊಳಿಸುತ್ತಿರುತ್ತದೆ. ಅಲ್ಲದೆ ಆಹಾರ ತ್ಯಾಜ್ಯದ ನಿರ್ಮೂಲನವೂ ಸುಲಭವಾಗುತ್ತದೆ. ಜೀರ್ಣಗೊಳ್ಳದ ಆಹಾರ ಮತ್ತು ನಂಜಿನ ಅಂಶಗಳು ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಸಾಗುತ್ತವೆ ಮತ್ತು ಬೆಳಿಗ್ಗೆ ಗುದನಾಳದ ಮೂಲಕ ವಿಸರ್ಜನೆಯಾಗುತ್ತವೆ. ಹೀಗಾಗಿ ಮಲಬದ್ಧತೆಯ ಸಮಸ್ಯೆ ಕಾಡುವುದಿಲ್ಲ.

ಹೃದಯದ ಆರೋಗ್ಯ

ಇದು ಸುಲಭವಾಗಿ ಅರ್ಥವಾಗುವಂಥದ್ದು. ಹೃದಯವು ನಮ್ಮ ಶರೀರದಲ್ಲಿ ಎಡಭಾಗದಲ್ಲಿರುತ್ತದೆ. ಹೀಗಾಗಿ ಎಡಮಗ್ಗುಲಾಗಿ ನಿದ್ರಿಸುವುದರಿಂದ ಗುರುತ್ವಾಕರ್ಷಣೆ ಬಲದಿಂದ ಹೃದಯಕ್ಕೆ ರಕ್ತ ಸಂಚಾರ ಸುಲಭವಾಗುತ್ತದೆ. ಇದು ಖಂಡಿತವಾಗಿಯೂ ಹೃದಯದ ಮೇಲಿನ ಕೊಂಚ ಭಾರವನ್ನು ನಿವಾರಿಸುತ್ತದೆ ಮತ್ತು ಶರೀರಕ್ಕೆ ವಿಶ್ರಾಂತಿಯನ್ನು ನೀಡುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು

ವೈದ್ಯರು ಸಾಧ್ಯವಾದಷ್ಟು ಹೆಚ್ಚು ಸಮಯ ಎಡಮಗ್ಗುಲಾಗಿ ನಿದ್ರಿಸುವಂತೆ ಗರ್ಭಿಣಿ ಯರಿಗೆ ಸಲಹೆ ನೀಡುತ್ತಾರೆ. ಅದು ಬೆನ್ನಿನ ಮೇಲಿನ ಒತ್ತಡವನ್ನು ನಿವಾರಿಸುವಲ್ಲಿ ನೆರವಾಗುತ್ತದೆ ಮತ್ತು ಗರ್ಭಕೋಶ ಹಾಗೂ ಭ್ರೂಣಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಗರ್ಭದಲ್ಲಿಯ ಶಿಶು ಆರೋಗ್ಯಪೂರ್ಣವಾಗಿರಲು ಹೊಕ್ಕಳ ಬಳ್ಳಿಗೆ ಪೋಷಕಾಂಷಗಳ ಸುಗಮ ಹರಿವಿಗೂ ನೆರವಾಗುತ್ತದೆ.

ಗೊರಕೆಯನ್ನು ನಿಲ್ಲಿಸುತ್ತದೆ

ನಂಬಿದರೆ ನಂಬಿ...ಬಿಟ್ಟರೆ ಬಿಡಿ. ಪ್ರಯತ್ನಿಸಿ ನೋಡುವಲ್ಲಿ ನಷ್ಟವೇನಿಲ್ಲ. ಎಡಮಗ್ಗು ಲಾಗಿ ನಿದ್ರಿಸುವುದು ನೀವು ಗೊರಕೆ ಹೊಡೆಯುವುದನ್ನು ನಿಲ್ಲಿಸಲು ನಿಜಕ್ಕೂ ನೆರವಾಗ ಬಹುದು. ಏಕೆಂದರೆ ಎಡಮಗ್ಗುಲಾಗಿ ನಿದ್ರಿಸುವುದರಿಂದ ನಾಲಿಗೆ ಮತ್ತು ಗಂಟಲು ತಟಸ್ಥ ಸ್ಥಿತಿಯಲ್ಲಿರುತ್ತವೆ, ತನ್ಮೂಲಕ ಮೂಗಿನ ಮೂಲಕ ಉಸಿರಾಟಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ. ಬೆನ್ನಿನ ಮೇಲೆ ಮಲಗುವುದರಿಂದ ಸ್ನಾಯುಗಳು ಗಂಟಲಿನ ಹಿಂಭಾಗಕ್ಕೆ ತಳ್ಳಲ್ಪಡುತ್ತವೆ ಮತ್ತು ಉಸಿರಾಟಕ್ಕೆ ತೊಂದರೆಯಾಗುತ್ತದೆ ಎನ್ನುವುದು ಗೊತ್ತಿರಲಿ.

ಈ ಮೇಲಿನ ಕಾರಣಗಳು ಎಡಮಗ್ಗುಲಾಗಿ ನಿದ್ರಿಸುವುದು ಒಳ್ಳೆಯದು ಎನ್ನುವುದನ್ನು ಸಮರ್ಥಿಸುತ್ತವೆಯಾದರೂ, ಹಲವರಿಗೆ ತಾವು ರೂಢಿಸಿಕೊಂಡಿರುವ ನಿದ್ರೆಯ ಭಂಗಿ ಯನ್ನು ಏಕಾಏಕಿ ಬದಲಿಸುವುದು ಹಿತಾನುಭವ ನೀಡದಿರಬಹುದು, ಆದರೆ ಕೆಲವು ದಿನಗಳ ನಂತರ ಅದೇ ಅಭ್ಯಾಸವಾಗಿಬಿಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News