ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ; ಮೋದಿಯ ಹಾದಿ ಹಿಡಿದ ರಾಜ್ಯ ಸರಕಾರ!

Update: 2017-06-27 18:03 GMT

ಇತ್ತೀಚೆಗೆ ಎನ್‌ಡಿಟಿವಿಯ ವಿರುದ್ಧ ಮೋದಿ ಸರಕಾರ ದಬ್ಬಾಳಿಕೆ ನಡೆಸಲು ಮುಂದಾದಾಗ ಪತ್ರಿಕಾಧರ್ಮದ ಪರವಾಗಿ ನಿಂತು ಮೋದಿಗೆ ಅಭಿವ್ಯಕ್ತಿ ಸ್ವಾತಂತ್ರವನ್ನು ಬೋಧಿಸಿದ ಸಿದ್ದರಾಮಯ್ಯ ನೇತೃತ್ವದ ಸರಕಾರ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ವಿರುದ್ಧ ಮೋದಿಗಿಂತ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಬಹುಶಃ ರಾಜ್ಯದ ಇತಿಹಾಸದಲ್ಲೇ ದೂರುದಾರರೇ ಸದನದಲ್ಲಿ ಕುಳಿತು ಆರೋಪಿಯ ವಿರುದ್ಧ ತೀರ್ಪು ವಿಧಿಸಿದ್ದು ಇದೇ ಮೊದಲು.

ಇನ್ನು ಮುಂದೆ ಶಾಸಕರು ಯಾವುದೇ ಹಗರಣಗಳನ್ನು ಮಾಡಿದರೆ ಅದನ್ನು ಪತ್ರಕರ್ತರು ಪ್ರಶ್ನಿಸುವಂತಿಲ್ಲ ಎನ್ನುವ ಸಂದೇಶವನ್ನು ಸರಕಾರ ಈ ಮೂಲಕ ನೀಡಿದೆ. ಪ್ರೆಸ್‌ಕೌನ್ಸಿಲ್, ನ್ಯಾಯಾಲಯ, ಸುಪ್ರೀಂಕೋರ್ಟ್ ಎಲ್ಲವೂ ನಾನೇ ಆಗಿದ್ದೇನೆ ಎಂಬ ಘೋಷಣೆಯನ್ನು ಹಕ್ಕು ಬಾಧ್ಯತಾ ಸಮಿತಿ ಘೋಷಿಸಿದೆ. ತಾನು ನಡೆಸಿರುವ ಯಾವುದೇ ಹಗರಣಗಳನ್ನು ಪತ್ರಿಕೆಗಳು ಬರೆದರೆ ಹಕ್ಕು ಚ್ಯುತಿಯ ಮೂಲಕ ಪತ್ರಕರ್ತನನ್ನು ಜೈಲಿಗೆ ತಳ್ಳಬಲ್ಲೆ ಎನ್ನುವ ರಾಜಕಾರಣಿಗಳ ನಿರ್ಧಾರ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆದಿರುವ ಬರ್ಬರ ದಾಳಿಯಾಗಿದೆ. ಈಗಾಗಲೇ ಹಾಯ್‌ಬೆಂಗಳೂರು ಪತ್ರಿಕೆಯ ಸಂಪಾದಕ ರವಿಬೆಳಗೆರೆಯನ್ನು ಬಂಧಿಸಲು ಆದೇಶ ಹೊರಡಿಸಲಾಗಿದೆ. ಇಬ್ಬರು ಪತ್ರಕರ್ತರನ್ನು ಹೀಗೆ ದೂರುದಾರರೇ ವಿಚಾರಣೆ ನಡೆಸಿ, ಜೈಲಿಗೆ ತಳ್ಳುತ್ತಾರೆ ಎಂದರೆ, ಎಲ್ಲ ಪತ್ರಕರ್ತರು ತಮ್ಮ ತಮ್ಮ ಲೇಖನಿಯನ್ನು ಮುರಿದು ಸನ್ಯಾಸತ್ವ ಸ್ವೀಕರಿಸುವುದೇ ಒಳ್ಳೆಯದು. ಯಾಕೆಂದರೆ, ಪತ್ರಿಕೋದ್ಯಮವನ್ನು ಸರಕಾರ ತನ್ನ ಮೂಗಿನ ನೇರಕ್ಕೆ ಎಳೆದುತರಲು ಹೊರಟಿದೆ. ಸರಕಾರಕ್ಕೆ ‘ಬಕೆಟ್’ ಹಿಡಿಯುವುದೇ ಪತ್ರಿಕೋದ್ಯಮ, ಇದಕ್ಕೆ ಹೊರತಾಗಿ ಬೇರೆ ದಾರಿ ಹಿಡಿದರೆ ಜೈಲಿಗೆ ಹೋಗಲು ತಯಾರಿರಿ ಎಂಬ ಸರ್ವಾಧಿಕಾರಿ ಆದೇಶವೊಂದು ಈ ತೀರ್ಪಿನಲ್ಲಿದೆ. ಆದುದರಿಂದ ಈ ತೀರ್ಪು ಬರೇ ಇಬ್ಬರು ಪತ್ರಕರ್ತರಿಗಷ್ಟೇ ಸೀಮಿತವಾಗಿಲ್ಲ. ಈ ನಾಡಿನ ಸರ್ವ ಪತ್ರಕರ್ತರಿಗೂ ಸರಕಾರ ನೀಡಿದ ಬಂಧನಾದೇಶ ಇದಾಗಿದೆ.
 
ಹಕ್ಕುಚ್ಯುತಿ ಮಂಡನೆಯ ಉದ್ದೇಶವನ್ನೇ ತಿರುಚಿ ಪತ್ರಕರ್ತರನ್ನು ನಿಯಂತ್ರಿಸಲು ಹೊರಟಿರುವುದು ಇಲ್ಲಿ ಸ್ಪಷ್ಟವಾಗಿದೆ. ಯಾವುದೇ ವ್ಯಕ್ತಿಯ ವಿರುದ್ಧ ಹಕ್ಕು ಚ್ಯುತಿಯನ್ನು ಮಂಡಿಸಬೇಕಾದರೆ ಆತ ಶಾಸಕರ ಕರ್ತವ್ಯ ನಿರ್ವಹಣೆಯ ಮೇಲೆ ಹಸ್ತಕ್ಷೇಪ ನಡೆಸಿರಬೇಕು. ಶಾಸಕಾಂಗದ ಸದನಗಳ ಸದಸ್ಯರಿಗೆ ಸದನದ ಸದಸ್ಯರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿ ಪಡಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವೌಖಿಕ, ಲಿಖಿತ ಅಥವಾ ಟೆಲಿವಿಷನ್ ಪ್ರಸಾರಿತ ಹೇಳಿಕೆಗಳನ್ನು ಹಕ್ಕುಚ್ಯುತಿಯ ವ್ಯಾಪ್ತಿಗೆ ತರಬಹುದು. ಒಬ್ಬ ರಾಜಕಾರಣಿಯ ಹಗರಣವನ್ನು ಬಯಲಿಗೆಳೆದರೆ ಅಥವಾ ಆತನ ಭ್ರಷ್ಟಾಚಾರವನ್ನು ಹೊರಗೆಡಹಿದರೆ ಅದರಿಂದ ಶಾಸಕಾಂಗಕ್ಕೆ ಒಳಿತಾಗುತ್ತದೆಯೇ ಹೊರತು, ಅದು ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದಂತಾಗುವುದಿಲ್ಲ. ಇಂದು ರಾಜಕಾರಣಿಗಳ ಹತ್ತು ಹಲವು ಭಾರೀ ಹಗರಣಗಳು ಬೆಳಕಿಗೆ ಬಂದಿರುವುದು ಪತ್ರಿಕೆಗಳ ಮೂಲಕವೇ ಆಗಿದೆ. ಹಲವು ರಾಜಕಾರಣಿಗಳು ಪತ್ರಿಕಾ ವರದಿಯ ಕಾರಣದಿಂದಲೇ ರಾಜೀನಾಮೆ ನೀಡಿರುವಂತಹ ಪ್ರಸಂಗಗಳು ಈ ಹಿಂದೆ ನಡೆದಿವೆ.

ಜನಪ್ರತಿನಿಧಿಗಳ ಅವ್ಯವಹಾರಗಳನ್ನು ಬರೆದಾಕ್ಷಣ ಅದು ಅವರ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ ಎನ್ನುವ ರಾಜಕಾರಣಿಗಳು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಕ್ಕುಚ್ಯುತಿಯನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಇಬ್ಬರು ಪತ್ರಕರ್ತರು ನಿರಪರಾಧಿಗಳು ಎಂದು ಇದರ ಅರ್ಥವಲ್ಲ. ಅವರು ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನೇ ಮಾಡಿರಬಹುದು. ಪತ್ರಕರ್ತರು ದುರುದ್ದೇಶದಿಂದಲೇ ಶಾಸಕರ ವಿರುದ್ಧ ವರದಿ ಮಾಡಿದ್ದಾರೆ ಎನ್ನೋಣ. ಆಗಲೂ ಅದು ಕರ್ತವ್ಯ ನಿರ್ವಹಣೆಗೆ ಯಾವ ರೀತಿಯಲ್ಲಿ ಅಡ್ಡಿಯನ್ನು ಉಂಟು ಮಾಡಿದೆ ಎನ್ನುವ ವಿವರಗಳು ದೊರಕುವುದಿಲ್ಲ. ಒಂದು ವೇಳೆ ಪತ್ರಕರ್ತರು ಸುಳ್ಳು ಆರೋಪಗಳನ್ನು ಮಾಡಿ, ಅವರ ವರ್ಚಸ್ಸಿಗೆ ಧಕ್ಕೆ ತಂದಿದ್ದರೆ ನ್ಯಾಯಾಲಯದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಧಾರಾಳ ಅವಕಾಶಗಳಿವೆ. ಈಗಾಗಲೇ ಹಲವರು ಇಂತಹ ಮಾನನಷ್ಟ ಮೊಕದ್ದಮೆಗಳನ್ನು ಹಾಕಿ ನ್ಯಾಯವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಹಲವು ವರದಿಗಳಿಗೆ ಸಂಬಂಧಿಸಿದಂತೆ ಪತ್ರಕರ್ತರು ಕ್ಷಮಾಯಾಚನೆ, ವಿಷಾದ ಸೂಚಿಸಿದ್ದಿವೆ. ಹಾಗೆಯೇ ಪ್ರೆಸ್‌ಕೌನ್ಸಿಲ್‌ನಲ್ಲೂ ಪತ್ರಕರ್ತರ ವಿರುದ್ಧ ದೂರು ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ. ಇವೆರಡನ್ನೂ ಮಾಡದೇ, ನೇರವಾಗಿ ತಾವೇ ಸದನದಲ್ಲಿ ದೂರು ಮಂಡಿಸಿ, ತಾವೇ ತಮ್ಮನ್ನು ಸಾಚಾ ಎಂದು ಘೋಷಿಸಿ, ಪತ್ರಕರ್ತರನ್ನು ಅಪರಾಧಿಗಳೆಂದು ನೇಣಿಗೆ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಇದು ಮುಂದಿನ ದಿನಗಳಲ್ಲಿ ಯಾವ ಮಟ್ಟವನ್ನು ತಲುಪಬಹುದು ಎನ್ನುವುದು ಊಹಿಸಲು ಕಷ್ಟವಿಲ್ಲ. ಮುಂದೆ ಯಾವುದೇ ರಾಜಕಾರಣಿಯ ವಿರುದ್ಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ನ್ಯಾಯಾಲಯದ ಮೆಟ್ಟಿಲೇರದೆ, ಹಕ್ಕುಚ್ಯುತಿಯನ್ನು ಬಳಸಿಕೊಂಡು ಪತ್ರಕರ್ತನ ಬಾಯಿ ಮುಚ್ಚಿಸಬಹುದಾಗಿದೆ.
 ವಿಪರ್ಯಾಸವೆಂದರೆ, ಇಂತಹದೊಂದು ಜನವಿರೋಧಿ ನಿಲುವನ್ನು ಸದನ ತಾಳಿದಾಗ ಅದರ ವಿರುದ್ಧ ಒಬ್ಬನೇ ಒಬ್ಬ ವಿರೋಧ ಪಕ್ಷದ ನಾಯಕ ಧ್ವನಿಯೆತ್ತದೇ ಇರುವುದು. ಈ ಹಿಂದೆ 80ರ ದಶಕದಲ್ಲಿ ರಾಜಕಾರಣಿಗಳೆಲ್ಲ ಒಂದಾಗಿ ಪಿ. ಲಂಕೇಶ್ ಅವರನ್ನು ಹಕ್ಕುಚ್ಯುತಿಯ ಮೂಲಕ ದಂಡನೆಗೈಯಲು ಹೊರಟಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಆಗ ಶಾಸಕರಾಗಿದ್ದ ‘ವಾಟಾಳ್ ನಾಗರಾಜ್’ ಒಬ್ಬಂಟಿಯಾಗಿ ನಿಂತು, ಹಕ್ಕುಚ್ಯುತಿಯ ವಿರುದ್ಧ ಮಾತನಾಡಿದರು. ಯಾವಕಾರಣಕ್ಕೂ ಲಂಕೇಶ್ ವಿರುದ್ಧ ಹಕ್ಕುಚ್ಯುತಿಯನ್ನು ಮಂಡಿಸಬಾರದು ಎಂದು ಆಗ್ರಹಿಸಿದರು. ಅವರ ಆಗ್ರಹದ ಫಲವಾಗಿಯೇ, ಸದನ ಅದರಿಂದ ಹಿಂದೆ ಸರಿಯಿತು. ಲಂಕೇಶ್ ಪತ್ರಿಕೆ ಹಲವು ಬಾರಿ ವಾಟಾಳ್ ನಾಗರಾಜ್‌ರನ್ನು ಟೀಕಿಸಿ ವರದಿ ಮಾಡಿತ್ತು. ಆದರೆ ಅವೆಲ್ಲವನ್ನೂ ಮನಸಲ್ಲಿ ಇಟ್ಟುಕೊಳ್ಳದೇ ಸದನದಲ್ಲಿ ಲಂಕೇಶರ ಪರವಾಗಿ ಮಾತನಾಡಿದ ವಾಟಾಳ್ ನಾಗರಾಜ್ ಇಂದಿನ ವಿರೋಧಪಕ್ಷಕ್ಕೆ ಮಾದರಿಯಾಗಬೇಕಾಗಿದೆ.

ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಆಡಳಿತ ಪಕ್ಷದೊಂದಿಗೆ ಕೈಜೋಡಿಸಲು ಸಿದ್ಧವಿರದ ವಿರೋಧ ಪಕ್ಷಗಳು ಪತ್ರಕರ್ತರನ್ನು ಜೈಲಿಗೆ ಹಾಕುವಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶಿಸಿರುವುದು ನಮ್ಮ ರಾಜಕೀಯ ನಾಯಕರು ಅದೆಷ್ಟು ಕುಲಗೆಟ್ಟು ಹೋಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪತ್ರಿಕೆಗಳಿಗೆ ಕಡಿವಾಣ ಹಾಕುವುದು ವಿರೋಧ ಪಕ್ಷಗಳಿಗೂ ಬೇಕಾಗಿದೆ. ಒಂದಲ್ಲ ಒಂದು ದಿನ ಯಾವುದೇ ಪತ್ರಕರ್ತ ತಮ್ಮ ಭ್ರಷ್ಟಾಚಾರ ಹೊರಗೆಡಹುವ ಸಂದರ್ಭ ಬಂದಾಗ ಇದನ್ನು ಬಳಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲೇ, ವಿರೋಧಪಕ್ಷಗಳು ವೌನವಾಗಿ ಸಮಿತಿಯ ಆದೇಶಕ್ಕೆ ಬೆಂಬಲ ನೀಡುತ್ತಿವೆ.


 ಸಮಿತಿಯ ತೀರ್ಪಿಗೆ ಬಲಿಯಾಗಿರುವ ಇಬ್ಬರು ಪತ್ರಕರ್ತರು ತಪ್ಪು ಮಾಡಿರಬಹುದು. ಅವರ ವರದಿಯಲ್ಲಿ ಹುರುಳಿಲ್ಲದೇ ಇರಬಹುದು. ಹಾಗೆಂದು ದೂರುದಾರರೇ ಆರೋಪಿಯ ವಿಚಾರಣೆ ನಡೆಸಿ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ. ಆರೋಪಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಆ ಮೂಲಕ ಶಿಕ್ಷೆ ವಿಧಿಸುವುದೇ ಸರಿಯಾದ ಕ್ರಮ. ಬೇಕಾದಲ್ಲಿ ವಾಗ್ದಂಡನೆ ವಿಧಿಸುವಂತಹ ಅವಕಾಶ ಸಮಿತಿಗಿತ್ತು. ಸದನದಲ್ಲಿ ಹಲವು ಮುತ್ಸದ್ದಿ ರಾಜಕಾರಣಿಗಳಿದ್ದಾರೆ. ಹಕ್ಕುಚ್ಯುತಿ ಮಂಡನೆ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಈ ಮುತ್ಸದ್ದಿಗಳ ಹೊಣೆಗಾರಿಕೆಯಾಗಿದೆ. ಇವರು ವೌನ ಮುರಿಯಬೇಕು.

ಈ ಮೂಲಕ ಪತ್ರಿಕಾಸ್ವಾತಂತ್ರದ ಘನತೆಯನ್ನು ಎತ್ತಿ ಹಿಡಿಯಬೇಕು. ಇದೇ ಸಂದರ್ಭದಲ್ಲಿ ಪತ್ರಕರ್ತರೂ ತಮಗೆ ತಾವೇ ಲಕ್ಷ್ಮಣ ರೇಖೆಗಳನ್ನು ವಿಧಿಸಿಕೊಳ್ಳುವ ಅಗತ್ಯವನ್ನು ಈ ಪ್ರಕರಣ ಎತ್ತಿ ಹಿಡಿದಿದೆ. ಪತ್ರಿಕಾಸ್ವಾತಂತ್ರ ದುರುಪಯೋಗವಾದಾಕ್ಷಣ ಅದರ ಲಾಭವನ್ನು ತನ್ನದಾಗಿಸಲು ಭ್ರಷ್ಟ ರಾಜಕಾರಣಿಗಳು ಹೊಂಚು ಹಾಕಿ ಕೂತಿರುತ್ತಾರೆ. ಅವರ ಕುಣಿಕೆಗೆ ಪತ್ರಿಕಾ ಧರ್ಮದ ಘನತೆಯನ್ನು ಒಪ್ಪಿಸುವ ಕೆಲಸವನ್ನು ಯಾವ ಪತ್ರಕರ್ತನೂ ಮಾಡಬಾರದು. ಆದುದರಿಂದ ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News