ಈದ್ ಶುಭಾಶಯದಿಂದ ಒಂದೇ ದಿನದಲ್ಲಿ ಸೆಲೆಬ್ರಿಟಿಯಾದ ವಿಶೇಷ ಸಾಮರ್ಥ್ಯದ ಯುವಕ!

Update: 2017-06-27 07:29 GMT

ಜಿದ್ದಾ, ಜೂ. 27: ತನಗೆ ‘ಹ್ಯಾಪಿ ಈದ್’ ಶುಭಾಶಯ ಹೇಳಿ ಎಂದು ವಿಶೇಷ ಸಾಮರ್ಥ್ಯದ ಯುವಕನೊಬ್ಬ ಮಾಡಿದ ಏಕೈಕ ಟ್ವೀಟ್ ಆತನಿಗೆ ಪ್ರತಿಕ್ರಿಯೆಗಳ ಮಹಾಪೂರವನ್ನೇ ಹರಿಸಿದ್ದು ಒಂದೇ ದಿನದಲ್ಲಿ ಆತ ಸೆಲೆಬ್ರಿಟಿ ಆಗಿ ಬಿಟ್ಟಿದ್ದಾನೆ.

ಟ್ವಿಟ್ಟರಿಗ ಫಾರೆಸ್ ಅಲ್-ಶಮ್ಮರಿ ಮಾಡಿದ ಟ್ವೀಟ್ ಸೌದಿ ಅರೇಬಿಯಾದ ಗಡಿ ದಾಟಿ ಅರಬ್ ಲೋಕದ ಸಾವಿರಾರು ಮಂದಿ ಆತನಿಗೆ ಮನಃಪೂರ್ವಕ ಶುಭಾಶಯ ಸಲ್ಲಿಸಿದ್ದಾರೆ.

‘‘ಈದ್ ಮುಬಾರಕ್. ನಾನು ಫಾರೆಸ್ ಅಲ್-ಶಮ್ಮಾರಿ ಎಂಬ ವಿಶೇಷ ಸಾಮರ್ಥ್ಯದ ವ್ಯಕ್ತಿ. ನೀವೆಲ್ಲರೂ ನನಗೆ ಈದ್ ಶುಭಾಶಯ ಕೋರಿ ನಿಮ್ಮ ಸಂತಸವನ್ನು ನನ್ನೊಂದಿಗೆ ಹಂಚುವಿರಾ ? ಎಲ್ಲರಿಗೂ ಧನ್ಯವಾದಗಳು,’’ ಎಂದು ಜೂನ್ 25ರಂದು ಆತ ಟ್ವೀಟ್ ಮಾಡಿದ್ದ.

ಆತನ ಟ್ವೀಟಿಗೆ ಸ್ಪಂದಿಸಿ ಆತನಿಗೆ ಈದ್ ಶುಭಾಶಯಗಳನ್ನು ಸಲ್ಲಿಸಿದವರಲ್ಲಿ ಹಲವು ಗಣ್ಯ ವ್ಯಕ್ತಿಗಳೂ ಇದ್ದರು. ಹಲವು ವಾಣಿಜ್ಯ ಕಂಪೆನಿಗಳೂ ಆತನಿಗೆ ಶುಭಾಶಯ ಸಲ್ಲಿಸಿ, ವಿಶೇಷ ಆಫರ್ ಹಾಗೂ ಉಡುಗೊರೆಗಳನ್ನೂ ಆತನಿಗೆ ನೀಡಿದವು. ಆತನಿಗೆ ದೊರೆತ ಉಡುಗೊರೆಗಳಲ್ಲಿ ಉಚಿತ ವಿಮಾನ ಟಿಕೆಟ್ ಗಳು, ಶಾಪಿಂಗ್ ವೋಚರ್ ಗಳು ಹಾಗೂ ಆಧುನಿಕ ಐ ಫೋನ್ 7 ಕೂಡ ಸೇರಿದ್ದು ವಿಶೇಷವಾಗಿತ್ತು.

ಆತ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಆತನಿಗೆ 51,000 ಕ್ಕೂ ಅಧಿಕ ಉತ್ತರ, 54,000 ರಿಟ್ವೀಟ್ ಹಾಗೂ 25,000 ಲೈಕ್ ದೊರೆತಿದ್ದವು. ನಂತರ ಆ ಯುವಕ ತನ್ನ ಬಗೆಗಿನ ಒಂಬತ್ತು ಸೆಕೆಂಡು ಅವಧಿಯ ವೀಡಿಯೋವೊಂದನ್ನೂ ಪೋಸ್ಟ್ ಮಾಡಿದ್ದಾನೆ.

ಖ್ಯಾತ ಸೌದಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಫಯೆರ್ ಅಲ್-ಮಲ್ಕಿ ಅವರು ಫಾರೆಸ್ ಗೆ ತನ್ನೊಂದಿಗೆ ಡಿನ್ನರ್ ಪಾರ್ಟಿಗೂ ಆಹ್ವಾನವಿತ್ತರಲ್ಲದೆ ತಮ್ಮ 5.51 ಮಿಲಿಯನ್ ಫಾಲೋವರ್ಸ್‌ಗೆ ಸಂದೇಶ ನೀಡಿ ಫಾರೆಸ್ ಗೆ ಈದ್ ಶುಭಾಶಯ ಸಲ್ಲಿಸುವಂತೆ ಕೊರಿದ್ದಾರೆ.

ಸೌದಿ ಜನರಲ್ ಎಂಟರ್‌ಟೈನ್ಮೆಂಟ್ ಅಥಾರಿಟಿ ಕೂಡ ಅತನನ್ನು ತನ್ನ ಮನರಂಜನಾ ಕಾರ್ಯಕ್ರಮದ ಭಾಗವಾಗಿಸುವ ಇಚ್ಛೆ ವ್ಯಕ್ತ ಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News