ನಿಮ್ಮ ಆನ್‌ಲೈನ್ ಶಾಪಿಂಗ್ ಮೇಲೆ ಜಿಎಸ್‌ಟಿ ಪರಿಣಾಮವೇನು?

Update: 2017-06-27 08:57 GMT

ಜಿಎಸ್‌ಟಿ ಜಾರಿಗೊಳ್ಳಲು ಇನ್ನು ನಾಲ್ಕೇ ದಿನಗಳು ಬಾಕಿಯಿದ್ದು, ತಮ್ಮ ಬಳಿ ಉಳಿದಿರುವ ದಾಸ್ತಾನನ್ನು ಖಾಲಿ ಮಾಡಲು ಆನ್‌ಲೈನ್ ಶಾಪಿಂಗ್ ತಾಣಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿವೆ. ಅವು ಗ್ರಾಹಕರಿಗೆ ಶೇ.25ರಿಂದ ಶೇ.90ರವರೆಗೂ ರಿಯಾಯಿತಿಗಳನ್ನು ಘೋಷಿಸಿವೆ.

ಆದರೆ ಜುಲೈ 1ರಂದು ಜಿಎಸ್‌ಟಿ ಜಾರಿಗೆ ಬಂದ ನಂತರ ಇವೆಲ್ಲವೂ ಬದಲಾಗಲಿದೆ. ನಿಮ್ಮ ಹೆಚ್ಚಿನ ಆನ್‌ಲೈನ್ ಖರೀದಿಗಳು ದುಬಾರಿಯಾಗಲಿವೆ. ಅದು ಹೇಗೆ ಎನ್ನುವುದನ್ನು ಓದಿ.........

ಮೂಲದಲ್ಲಿ ತೆರಿಗೆ ಸಂಗ್ರಹ

ಹಾಲಿ ಇ-ಕಾಮರ್ಸ್ ಜಾಲತಾಣಗಳು ಗ್ರಾಹಕರಿಂದ ಯಾವುದೇ ರೂಪದಲ್ಲಿ ತೆರಿಗೆಯನ್ನು ಸಂಗ್ರಹಿಸುವುದಿಲ್ಲ. ಆದರೆ ಜಿಎಸ್‌ಟಿಯಡಿ ಈ ಜಾಲತಾಣಗಳು ತಮ್ಮಲ್ಲಿ ನೋಂದಾಯಿಸಿಕೊಂಡಿರುವ ಚಿಲ್ಲರೆ ಮಾರಾಟಗಾರರಿಗೆ ಹಣ ಪಾವತಿಸುವಾಗ ಶೇ.1ರಷ್ಟು ನಿಗದಿತ ದರದಲ್ಲಿ ತೆರಿಗೆಯನ್ನು ಸಂಗ್ರಹಿಸಬೇಕಿದೆ. ಇದು ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಅಂತಿಮವಾಗಿ ಆನ್‌ಲೈನ್ ಖರೀದಿ ದುಬಾರಿ ಯಾಗಲಿದೆ. ಸದ್ಯಕ್ಕೆ ಈ ಶೇ.1 ತೆರಿಗೆ ಪ್ರಸ್ತಾವವನ್ನು ಮುಂದೂಡಲಾಗಿದೆಯಾದರೂ ನಂತರದ ದಿನಗಳಲ್ಲಿ ಅನ್ವಯಗೊಳ್ಳುವ ಸಾಧ್ಯತೆಯಿದೆ.

ತ್ವರಿತ ಪೂರೈಕೆ

ಜಿಎಸ್‌ಟಿಯಡಿ ಚಿಲ್ಲರೆ ಮಾರಾಟಗಾರರು ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ತೆರಿಗೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಹೀಗಾಗಿ ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತು ಹೆಚ್ಚು ತ್ವರಿತವಾಗಿ ಅವರಿಗೆ ತಲುಪಲಿದೆ. ಉಚಿತ ಕೊಡುಗೆ,ರಿಯಾಯತಿಗಳು ಅಂತ್ಯ?

ಆನ್‌ಲೈನ್ ಶಾಪಿಂಗ್‌ನಲ್ಲಿ ಭಾರೀ ರಿಯಾಯಿತಿ ಮತ್ತು ಉಚಿತ ಕೊಡುಗೆಗಳನ್ನು ಪಡೆದು ಅಭ್ಯಾಸವಾಗಿದೆಯೇ? ಭವಿಷ್ಯದಲ್ಲಿ ಇಂತಹ ಸೌಲಭ್ಯಗಳು ಕಡಿಮೆಯಾಗ ಬಹುದು, ಏಕೆಂದರೆ ಜಿಎಸ್‌ಟಿಯಡಿ ಈ ಉಚಿತ ಕೊಡುಗೆಗಳು ಮತ್ತು ರಿಯಾಯಿತಿಗಳು ಹೆಚ್ಚುವರಿ ತೆರಿಗೆಯನ್ನು ಆಕರ್ಷಿಸುತ್ತವೆ. ಅಲ್ಲದೆ ಇ-ಕಾಮರ್ಸ್ ಕಂಪನಿಯು ತಾನು ಪೂರೈಕೆದಾರನಿಂದ ಖರೀದಿಸಿದ ವಸ್ತುಗಳ ಬೆಲೆಗಳ ಮೇಲೆ ತೆರಿಗೆಯನ್ನು ಪಾವತಿಸಬೇಕಾಗಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ರಿಯಾಯಿತಿ ನೀಡಲು ಸಾಧ್ಯವಾಗುವುದಿಲ್ಲ.

ಜಾಗತಿಕ ಮಾರಾಟಗಾರರಿಂದ ಖರೀದಿ

ನೀವು ಅಮೆಝಾನ್ ಡಾಟ್ ಕಾಮ್ ಮತ್ತು ಇಬೇ ಡಾಟ್ ಕಾಮ್‌ನಂತಹ ಶಾಪಿಂಗ್ ತಾಣಗಳಿಂದ ವಸ್ತುಗಳನ್ನು ಖರೀದಿಸಿದರೆ ಅವು ವಿದೇಶಿ ಕರೆನ್ಸಿಗಳಲ್ಲಿ ವಹಿವಾಟು ನಡೆಸುತ್ತವೆ. ಇಂತಹ ಶಾಪಿಂಗ್ ತಾಣಗಳಿಗಾಗಿ ನಿಯಮಗಳನ್ನು ಸರಕಾರವು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.

ವಾಪಸಾತಿ ಮತ್ತು ರದ್ದತಿ ಕಠಿಣವಾಗಲಿದೆ

ಜಿಎಸ್‌ಟಿ ಜಾರಿಗೊಂಡ ಬಳಿಕ ನೀವು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳ ವಾಪಸಾತಿ ಮತ್ತು ಆರ್ಡರ್‌ಗಳ ರದ್ದತಿ ಸುಲಭವಾಗಿರುವುದಿಲ್ಲ. ಸದ್ಯ ಇ-ಕಾಮರ್ಸ್ ಕಂಪನಿಗಳಲ್ಲಿ ವಾಪಸಾತಿ ಮತ್ತು ರದ್ದತಿ ಪ್ರಮಾಣ ಸುಮಾರು ಶೇ.18ರಷ್ಟಿದೆ. ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸುವಾಗ ವಾಪಸಾತಿ ಮತ್ತು ರದ್ದತಿ ಪ್ರಕರಣಗಳಲ್ಲಿ ಇ-ಕಾಮರ್ಸ್ ಕಂಪನಿಗಳು ತೆರಿಗೆ ಮೊತ್ತವನ್ನು ಸ್ವತಃ ಭರಿಸಬೇಕಾಗುತ್ತದೆ ಮತ್ತು ನಂತರ ಸರಕಾರದಿಂದ ಅದರ ಮರುಪಾವತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ವಾಪಸಾತಿ ಮತ್ತು ರದ್ದತಿಗಳಿಂದಾಗಿ ಈ ಕಂಪನಿಗಳು ನಗದು ಹರಿವಿನ ಮೇಲೆ ಗಣನೀಯವಾಗಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News