ನಗರದಲ್ಲಿ ಹೆಚ್ಚುತ್ತಿರುವ ಜ್ವರಬಾಧಿತ ರೋಗಿಗಳ ಸಂಖ್ಯೆ

Update: 2017-06-27 12:58 GMT

ಬೆಂಗಳೂರು, ಜೂ. 27: ನಗರದಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಜ್ವರದಿಂದಾಗಿ ಆಸ್ಪತ್ರೆಗಳಲ್ಲಿ ಸೇರುವ ರೋಗಿಗಳ ಸಂಖ್ಯೆಯ ಪ್ರಮಾಣದಲ್ಲಿ ಶೇ.30ರಿಂದ 40ರಷ್ಟು ಏರಿಕೆಯಾಗಿದ್ದು, ಅದರಲ್ಲಿಯೂ ಡೆಂಗ್, ಚಿಕುನ್‌ಗುನ್ಯಾ ಹಾಗೂ ಮಲೇರಿಯಾ ಪ್ರಕರಣಗಳೇ ಅಧಿಕವಾಗಿವೆ.

ನಗರದ ಕೆ.ಸಿ.ಜನರಲ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಪ್ರಮುಖ ಸರಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದಿಂದ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದಿನೇ ದಿನೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಕಳೆದ ತಿಂಗಳಿಗೆ ಹೋಲಿಸಿದರೆ ಶೇ.40ರಷ್ಟು ಪ್ರಮಾಣದಲ್ಲಿ ಜ್ವರ ಬಾಧಿತ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ಯಲ್ಲೂ ಇದೇ ಪ್ರಮಾಣದಲ್ಲಿ ಜ್ವರ ಬಾಧಿತ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಡೆಂಗ್ ಲಕ್ಷಣ: ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಎರಡರಿಂದ ಐದು ದಿನದೊಳಗೆ ಜ್ವರ ತೀವ್ರವಾಗುತ್ತದೆ. ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಬಾಯಿ ಮತ್ತು ಮೂಗಿನಲ್ಲಿ ಸಣ್ಣ ಪ್ರಮಾಣದ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ನೋವು, ವಾಂತಿ, ಹದಯ, ಶ್ವಾಸಕೋಶ ಮತ್ತು ಯಕೃತ್ತಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಚಿಕುನ್‌ಗುನ್ಯಾ ಲಕ್ಷಣ: ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಎರಡರಿಂದ ಐದು ದಿನದೊಳಗೆ ಜ್ವರ ತೀವ್ರವಾಗುತ್ತದೆ. ತರುವಾಯ ಕೈಕಾಲುಗಳ ಕೀಲುಗಳನ್ನು ಬಾಧಿಸುವ ವಿಸ್ತೃತ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಮುಂಗಾರು ಆರಂಭವಾದರೂ ನಿರಂತರವಾಗಿ ಮಳೆ ಬರದ ಕಾರಣ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ, ಸೊಳ್ಳೆ ಕಡಿತದಿಂದ ಬರುವ ರೋಗಳು ಹೆಚ್ಚುತ್ತಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಲಾರ್ವಾ ಉತ್ಪತ್ತಿಯಾಗುವುದನ್ನು ತಡೆಯಲು ಫಾಗಿಂಗ್ ಸೇರಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಮನೆಗಳಲ್ಲಿ ಉತ್ಪತ್ತಿಯಾಗುವ ಲಾರ್ವಾಗಳನ್ನು ಪತ್ತೆ ಮಾಡಿ ನಾಶ ಮಾಡುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎಂ.ಎನ್. ಲೋಕೇಶ್ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಅಗತ್ಯ: ಸಣ್ಣ ಜ್ವರ ಕಾಣಿಸಿಕೊಂಡರೂ ವೈದ್ಯರಲ್ಲಿ ರಕ್ತ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ತುಂಬು ತೋಳಿನ ಶರ್ಟ್ ಧರಿಸುವುದು, ಮನೆಯಲ್ಲಿ ನೀರು ಶೇಖರಣೆಯಾಗಿ ಲಾರ್ವಾ ಉತ್ಪತ್ತಿಯಾಗುವುದನ್ನು ತಡೆಯುವುದು, ಹಗಲು ವೇಳೆ ಮನೆಯೊಳಗೆ ಸೊಳ್ಳೆಗಳು ಬರದಂತೆ ಜಾಗೃತಿ ವಹಿಸುವುದು ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News