ಜಿಎಸ್‌ಟಿಯಿಂದ ಚಿತ್ರೋದ್ಯಮಕ್ಕೆ ಒಳಿತು-ಕೆಡಕು ಎರಡೂ ಇದೆ: ಕೆ.ರಾಮನ್
ಬೆಂಗಳೂರು, ಜೂ.27: ಕೇಂದ್ರ ಸರಕಾರ ಜು.1ರಿಂದ ಜಾರಿ ಮಾಡಲು ಉದ್ದೇಶಿಸಿರುವ ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ)ಯಿಂದ ಕನ್ನಡ ಸಂಸ್ಕೃತಿ ಉಳಿವಿಗೂ ಇಲ್ಲವೇ ಅವಸಾನಕ್ಕೂ ಕಾರಣವಾಗಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ರಾಮನ್ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಜಿಎಸ್‌ಟಿ ಮತ್ತು ಚಲನಚಿತ್ರೋದ್ಯಮ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಬಹುತೇಕ ಸಿನೆಮಾ ಮಂದಿರಗಳಿಗೆ ಜಿಎಸ್‌ಟಿ ನೋಂದಣಿಯಾಗಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಸರಕಾರ ಜಿಎಸ್‌ಟಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ದೇಶಿಸಿದ್ದು, ಜಿಎಸ್‌ಟಿಗೆ ನೋಂದಣಿಯಾಗದ ಸಿನೆಮಾ ಮಂದಿರಗಳಿಗೆ ಹೆಚ್ಚಿನ ದಂಡ ಹಾಗೂ ರದ್ದು ಮಾಡುವಂತಹ ಸಂಭವವಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಸಿನೆಮಾ ಕ್ಷೇತ್ರದಲ್ಲಿ ನಿರ್ಮಾಪಕನಿಂದ ಹಿಡಿದು ನಟ, ಪೋಷಕ ನಟ, ತಂತ್ರಜ್ಞ ವಾರ್ಷಿಕವಾಗಿ 20ಲಕ್ಷ ರೂ.ಆದಾಯ ಗಳಿಸುವ ಪ್ರತಿಯೊಬ್ಬರು ಜಿಎಸ್‌ಟಿಗೆ ನೋಂದಣಿಯಾಗಬೇಕು. ಆದರೆ, ಇಲ್ಲಿಯವರೆಗೂ ಶೇ.90ರಷ್ಟು ಮಂದಿ ಜಿಎಸ್‌ಟಿಗೆ ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ನಿರ್ಮಾಪಕ, ಕಲಾವಿದರ ಸಂಘಗಳು ಜಿಎಸ್‌ಟಿ ಕುರಿತು ತಮ್ಮ ಸದಸ್ಯರಿಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಅವರು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಬಿ.ವಿ.ಮುರಳಿಕೃಷ್ಣ ಮಾತನಾಡಿ, ಕರ್ನಾಟಕ ರಾಜ್ಯ ಜಿಎಸ್‌ಟಿಯನ್ನು ಅನುಷ್ಠಾನಗೊಳಿಸಲು ಸಂಪೂರ್ಣ ಸಿದ್ಧವಾಗಿದೆ. ಈಗಾಗಲೆ ಶೇ.93ರಷ್ಟು ವ್ಯವಹಾರ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಆದರೆ, ಕನ್ನಡ ಸಿನಿಮಾ ಕ್ಷೇತ್ರ ಮಾತ್ರ ಆನ್‌ಲೈನ್‌ನಿಂದ ದೂರ ಉಳಿದಿದೆ. ಹೀಗಾಗಿ ಸಿನೆಮಾ ಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಜಿಎಸ್‌ಟಿ ನೋಂದಣಿ ಅಗತ್ಯವಿದೆ ಎಂದು ತಿಳಿಸಿದರು.
ಸಿನೆಮಾ ಮಂದಿರಗಳಲ್ಲಿ ಟಿಕೆಟ್ ದರ ಹಾಗೂ ಪ್ರತಿದಿನ ಎಷ್ಟು ಆದಾಯಗಳಿಸಿದೆ ಎಂಬುದರ ಕುರಿತು ನಿರ್ದಿಷ್ಟವಾದ ದಾಖಲೆಗಳನ್ನು ಇಟ್ಟುಕೊಳ್ಳುತ್ತಿಲ್ಲ. ಆದರೆ, ಜಿಎಸ್‌ಟಿ ಜಾರಿಯಾದ ಬಳಿಕ ಪ್ರತಿ ಟಿಕೆಟ್‌ಗೂ ತನ್ನದೇ ಆದ ವೌಲ್ಯವಿದೆ. 100ರೂ. ವೌಲ್ಯ ಹೊಂದಿರುವ ಸಿನಿಮಾ ಟಿಕೆಟ್‌ಗೆ ಶೇ.18.ತೆರಿಗೆ 100ಕ್ಕಿಂತ ಹೆಚ್ಚಿರುವ ಟಿಕೆಟ್‌ಗೆ ಶೇ.28ರಷ್ಟು ತೆರಿಗೆ ಕಟ್ಟುವುದು ಕಡ್ಡಾಯವಾಗಲಿದೆ ಎಂದು ಅವರು ವಿವರಿಸಿದರು.
ವಿಧಾನಪರಿಷತ್ ಸದಸ್ಯೆ ಜಯಮಾಲಾ ಮಾತನಾಡಿ, ಕನ್ನಡ ಸಿನಿಮಾ ಕ್ಷೇತ್ರದ ಮಾರುಕಟ್ಟೆ ಇತರೆ ಸಿನಿಮಾ ಕ್ಷೇತ್ರಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದುಳಿದಿದೆ. ಪ್ರತಿವರ್ಷ ಶೇ.80ರಷ್ಟು ಸಿನಿಮಾಗಳು ನಷ್ಟವೇ ಅನುಭವಿಸುತ್ತಿವೆ. ಹೀಗಾಗಿ ಕನ್ನಡ ಸಿನಿಮಾಗಳ ಬೆಳವಣಿಗೆಗೆ ಅಗತ್ಯವಾದ ಸಲಹೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ನೀಡಿದರೆ, ಮುಕ್ತವಾಗಿ ಸ್ವಾಗಿಸುತ್ತೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ರಾಜ್ಯ ತೆರಿಗೆ ಸಮಿತಿ ಹಾಗೂ ಟೀಮ್ ಅಧ್ಯಕ್ಷ ಬಿ.ಟಿ.ಮನೋಹರ್, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಎಸ್.ಬಸವರಾಜ್, ಚಾರ್ಟ್‌ರ್ಡ್ ಅಕೌಂಟೆಂಟ್ ವಿವೇಕ್ ಮಲ್ಯ ಮತ್ತಿತರಿದ್ದರು.