ವೆಬ್‌ಸೈಟ್ ಮೂಲಕ ಮಹಿಳೆಯರಿಗೆ ವಂಚನೆ: ಯುವಕನ ಬಂಧನ
ಬೆಂಗಳೂರು, ಜೂ.27: ವೆಬ್ಸೈಟ್ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರಿಂದ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಇಲ್ಲಿನ ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಹಾಸನದ ಸಾದತ್‌ಖಾನ್ ಯಾನೆ ಪ್ರೀತಮ್ಕುಮಾರ್(28) ಬಂಧಿತ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹೆಬ್ಬಾಳದಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಟೆಲಿಕಾಲರ್ ಕೆಲಸದಲ್ಲಿದ್ದ ಆರೋಪಿ, ಫೇಸ್‌ಬುಕ್, ಮ್ಯಾಟ್ರಿಮೋನಿಯಲ್ ವೆಬ್ಸೈಟ್‌ಗಳಲ್ಲಿ ರಾಹುಲ್, ಕಾರ್ತಿಕ್, ಮುಹಮ್ಮದ್‌ಖಾನ್, ಪ್ರೀತಮ್ಕುಮಾರ್, ಸಾದತ್‌ಖಾನ್ ಸೇರಿ ಇನ್ನಿತರೆ ಹೆಸರುಗಳಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ನಾನು ಸಾಫ್ಟ್ೃವೇರ್ ಎಂಜಿನಿಯರ್, ಸರಕಾರಿ ನೌಕರ, ಖಾಸಗಿ ಕಂಪೆನಿಗಳ ಮಾಲಕ ಎಂದು ನಂಬಿಸುತ್ತಿದ್ದನು ಎಂದು ತಿಳಿದುಬಂದಿದೆ.
ಜೂ.21ರಂದು ಮಹಿಳೆಯೊಬ್ಬರು ಬಾಗಲೂರು ಪೊಲೀಸ್ ಠಾಣೆಗೆ ಬಂದು ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯವಾಗಿರುವ ಪ್ರೀತಮ್ಕುಮಾರ್ ಎಂಬಾತ ತನ್ನನ್ನು ನಂಬಿಸಿ ಮದುವೆಯಾಗುತ್ತೇನೆಂದು ಹೇಳಿ ಹಣ ಪಡೆದುಕೊಂಡು ವಂಚಿಸಿದ್ದಾನೆಂದು ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹಾಸನದಲ್ಲಿ ಆರೋಪಿ ಬಾಡಿಗೆ ಮನೆಯಲ್ಲಿ ವಾಸವಿರುವುದನ್ನು ತಿಳಿದು, ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಯಲಹಂಕ, ವಿದ್ಯಾರಣ್ಯಪುರ, ಕೆಆರ್ ಪುರ, ಜಯನಗರ, ಹೆಬ್ಬಗೋಡಿ, ದೊಡ್ಡಬಳ್ಳಾಪುರ, ಮೈಸೂರು ನಗರದ ಕೆಆರ್ ಪುರ, ಧಾರವಾಡದ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಸಾದತ್‌ಖಾನ್ ಮೈಸೂರಿನ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಕಳೆದ ತಿಂಗಳಷ್ಟೆ ಬಿಡುಗಡೆಯಾಗಿ ಬಂದು ಬಾಗಲೂರು ಪೊಲೀಸ್ ಠಾಣೆ ಸರಹದ್ದಿನಲ್ಲಿ ವಾಸವಾಗಿದ್ದ ಮಹಿಳೆಗೆ ವಂಚಿಸಿರುವುದು ತನಿಖೆಯಿಂದ ತಿಳಿದುಬಂದಿದೆ.