ನಮ್ಮ ಮೆಟ್ರೋ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-06-27 14:15 GMT

ಬೆಂಗಳೂರು, ಜೂ. 27: ಕೆಂಪೇಗೌಡ ಬಸ್ ನಿಲ್ದಾಣದ ಬಳಿಯ ನಮ್ಮ ಮೆಟ್ರೋ ನಿಲ್ದಾಣ, ವಿಭಜಿತ ಬೆಂಗಳೂರು ವಿಶ್ವವಿದ್ಯಾನಿಲಯವೊಂದಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಕೆಂಪೇಗೌಡರ ಬೃಹತ್ ಪುತ್ಥಳಿ ಪ್ರತಿಷ್ಠಾಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಾಮಾನ್ಯ ಜನರ ಪ್ರೀತಿ-ವಿಶ್ವಾಸ ಗಳಿಸಿದವರು ಮಾತ್ರ ನಾಡಪ್ರಭು ಆಗಲು ಸಾಧ್ಯ. ಅಂತಹ ಆಡಳಿತವನ್ನೇ ಕೆಂಪೇಗೌಡರು ನೀಡಿದ್ದರು. ಅವರ ಆಶಯದಂತೆ ರಾಜ್ಯ ಸರಕಾರ ಜನಪರ ಮತ್ತು ಪಾರದರ್ಶಕ ಆಡಳಿತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಔದ್ಯಮಿಕ ಕ್ಷೇತ್ರದಲ್ಲಿ ಬೆಂಗಳೂರು ನಗರ ವಿಶ್ವದಲ್ಲೇ ಪ್ರಖ್ಯಾತಗೊಳ್ಳಲು ಇಲ್ಲಿನ ಹವಾಮಾನ ಕಾರಣ. ಜಗತ್ತಿನ ಯಾವುದೇ ಭಾಗದಲ್ಲೂ ಇಂತಹ ಹವಾಗುಣವಿಲ್ಲ. ಇದನ್ನು ಅರಿತು ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ್ದರು. ಇದೀಗ ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರ ಎಂದು ಹೆಮ್ಮೆಗೆ ಬೆಂಗಳೂರು ಪಾತ್ರವಾಗಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ಕನಸು ಮೀರಿ ಬೆಳೆದಿದೆ: ನಾಡಪ್ರಭು ಕೆಂಪೇಗೌಡರ ಕನಸನ್ನು ಮೀರಿ ಬೆಂಗಳೂರು ನಗರ ಬೆಳೆದಿದ್ದು, ಅವರು ನಿರ್ಮಿಸಿದ ಗಡಿ ಗೋಪುರಗಳನ್ನು ದಾಟಿ 800 ಚ.ಕಿ.ಮೀ ವ್ಯಾಪ್ತಿಗೂ ವಿಸ್ತಾರವಾಗಿದೆ. ಕೆಂಪೇಗೌಡರ ಬೆಂಗಳೂರು ನಗರಕ್ಕೆ ಮತ್ತಷ್ಟು ಮೆರುಗು ನೀಡಲು ಶ್ರಮಿಸಲಾಗುವುದು ಎಂದು ಅಭಯ ನೀಡಿದರು.

ಜಯಂತಿ ಆಚರಣೆ: ಪ್ರತಿ ವರ್ಷವೂ ಜೂ.27ರಂದು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುವುದು ಎಂದ ಅವರು, ಮುಂಬರುವ ದಿನಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆ ನಿರಂತರವಾಗಿ ನಡೆಯಲಿದೆ ಎಂದರು.ವಿಧಾನಸೌಧ ನಿರ್ಮಾಣವಾದಾಗಲೇ ಕೆಂಪೇಗೌಡ ಜಯಂತಿ ಆಚರಣೇ ಆಗಬೇಕಿತ್ತು. ವಿಳಂಬವಾದರೂ ಇದೀಗ ಆಗಿದೆ ಎಂದ ಅವರು, ವಿಶ್ವ ವಿಖ್ಯಾತ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದ ಕೆಂಪೇಗೌಡರು ಯಾವುದೇ ಜಾತಿ-ಧರ್ಮಕ್ಕೆ ಸೇರದೆ ಜಾತ್ಯತೀತ ಆಡಳಿತ ನಡೆಸಿದ್ದರು ಎಂದು ಸ್ಮರಿಸಿದರು.

ಯಾರೂ ಹೊಣೆಯಲ್ಲ: ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ಬಹುದಿನಗಳ ಬೇಡಿಕೆಯಾಗಿದ್ದ ಕೆಂಪೇಗೌಡರ ಜಯಂತಿ ಆಚರಣೆಗೆ ದಿಟ್ಟ ತೀರ್ಮಾನ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಕೆಂಪೇಗೌಡ ಕಟ್ಟಿಸಿದ ಕೆರೆ-ಕಟ್ಟೆಗಳು ಈಗ ಕಣ್ಮರೆಯಾಗಿವೆ. ಇದಕ್ಕೆ ಯಾರೊಬ್ಬರೂ ಹೊಣೆಗಾರರಲ್ಲ. ಜನಸಂಖ್ಯೆ ಹೆಚ್ಚಳದಿಂದ ನಗರದ ಕೆರೆಗಳ ಮಾಯವಾಗಿವೆ. ಬೆಂಗಳೂರು ನಗರಕ್ಕಿದ್ದ ಉದ್ಯಾನನಗರಿ ಹಣೆಪಟ್ಟಿಯೂ ಮರೆಯಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದರು.


ಸರಕಾರಿ ರಜೆ ಬೇಡ: ಕೆಂಪೇಗೌಡರ ಜಯಂತಿಗೆ ಸರಕಾರಿ ರಜೆ ಅಗತ್ಯವಿಲ್ಲ. ಆದರೆ, ಕೆಂಪೇಗೌಡರ ಕನಸಿನಂತೆ ಕೆರೆ, ಪರಿಸರ ಅಭಿವೃದ್ಧಿಗೆ ಶ್ರಮಿಸೋಣ ಎಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಹೊಸದಿಲ್ಲಿ ಇತಿಹಾಸವಿಲ್ಲ. ಆದರೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರು ಇತಿಹಾಸದಲ್ಲಿ ದಾಖಲಾಗಿದೆ ಎಂದು ಬಣ್ಣಿಸಿದರು.

ಸಹಮತದ ಆಡಳಿತ: ರಾಜಕೀಯ ಪಕ್ಷಗಳು ಬಹುಮತ ಗಳಿಸಲು ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಜನರ ಪ್ರೀತಿ-ವಿಶ್ವಾಸ ಗಳಿಸಿದ್ದ ‘ಸಹಮತ’ದ ಆಡಳಿತವಾಗಿತ್ತು ಎಂದು ಕೇಂದ್ರ ಸಚಿವ ಸದಾನಂದಗೌಡ ಶ್ಲಾಘಿಸಿದರು.
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ 50ಕೋಟಿ ರೂ.ಅನುದಾನ ನೀಡಲಾಗುವುದು. ಅಲ್ಲದೆ, ಪಾಲಿಕೆ ಆವರಣದಲ್ಲಿ ಕೆಂಪೇಗೌಡ ಅವರ ಧರ್ಮಪತ್ನಿ ಲಕ್ಷ್ಮಿದೇವಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ಪ್ರಕಟಿಸಿದರು.

ಸಮಾರಂಭದಲ್ಲಿ ಆದಿಚುಂಚಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ, ಸ್ಫಟಿಕಪುರ ಮಠದ ನಂಜಾವಧೂತ ಸ್ವಾಮಿ, ವಿಶ್ವ ಒಕ್ಕಲಿಗ ಮಠದ ಕುಮಾರ ಚಂದ್ರಶೇಖರ ನಾಥ ಸ್ವಾಮಿ, ಸಚಿವರಾದ ಉಮಾಶ್ರೀ, ರೋಷನ್‌ಬೇಗ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಜಯಚಂದ್ರ, ಕೃಷ್ಣಭೈರೇಗೌಡ, ಡಾ.ಮಹದೇವಪ್ಪ, ಎಂ.ಆರ್. ಸೀತಾರಾಂ, ಎಂ. ಕೃಷ್ಣಪ್ಪ, ಶಿವಶಂಕರ ರೆಡ್ಡಿ, ಮರಿತಿಬ್ಬೇಗೌಡ, ಕೆ.ಗೋವಿಂದರಾಜು, ಕೆ.ಎಚ್.ಮುನಿಯಪ್ಪ, ಪುಟ್ಟರಾಜು, ಮುದ್ದಹನುಮೇಗೌಡ, ಡಿ.ಕೆ.ಸುರೇಶ್, ರಾಜೀವ್‌ಗೌಡ, ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News