ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಜಾರಿಗೆ ಆಂದೋಲನ: ಅಖಿಲಾ
ಬೆಂಗಳೂರು, ಜೂ.27: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕ-2017ರ ಜಾರಿ ಮಾಡುವ ನಿಟ್ಟಿನಲ್ಲಿ ಜನಾಂದೋಲನ ರೂಪಿಸಲಾಗುವುದು ಎಂದು ಕರ್ನಾಟಕ ಜನಾರೋಗ್ಯ ಚಳವಳಿಯ ಮುಖ್ಯಸ್ಥೆ ಅಖಿಲಾ ತಿಳಿಸಿದ್ದಾರೆ.
ಮಂಗಳವಾರ ಕರ್ನಾಟಕ ಜನಾರೋಗ್ಯ ಚಳವಳಿ ನಗರದ ವೆಂಕಟಪ್ಪ ಗ್ಯಾಲರಿಯಲ್ಲಿ ಆಯೋಜಿಸಿದ್ದ ‘ಭಾರತದ ಖಾಸಗಿ ಆರೋಗ್ಯ ವಲಯದಲ್ಲಿ ನಿಯಂತ್ರಣದ ಮತ್ತು ನಾಗರಿಕರಿಗೆ ನ್ಯಾಯದ ಚೌಕಟ್ಟಿನ ಶೂನ್ಯತೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕ-2017ರಲ್ಲಿ ಹಲವಾರು ಜನಪರವಾದ ಅಂಶಗಳನ್ನೊಳಗೊಂಡಿದೆ. ಹೀಗಾಗಿ ಬಡ ರೋಗಿಗಳು ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆಗೆ ಸಿಗುವ ನಿಟ್ಟಿನಲ್ಲಿ ವಿಧೇಯಕ ಜಾರಿಯಾಗುವ ತುರ್ತು ಅಗತ್ಯವಿದೆ ಎಂದು ಅವರು ಹೇಳಿದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳು ಪೈಪೋಟಿಗೆ ಬಿದ್ದಂತೆ ರೋಗಿಗಳಿಂದ ಹಣವನ್ನು ಸುಲಿಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಸೇರಿದಂತೆ ಯಾವುದೇ ಚಿಕಿತ್ಸೆಗಾಗಲಿ ದರವನ್ನು ನಿಗದಿಪಡಿಸದೆ ತಮಗೆ ಇಚ್ಛೆಗೆ ಅನುಸಾರವಾಗಿ ಹಣವನ್ನು ದೋಚುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2017 ಜಾರಿಯಾಗಲೇಬೇಕಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ವಿಧೇಯಕ ಜಾರಿ ಸುಲಭವಲ್ಲ: ರಾಜ್ಯ ಸರಕಾರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ-2017ನ್ನು ಪರಾಮರ್ಶೆಗೆ ಜಂಟಿ ಸದನ ಸಮಿತಿಗೆ ಒಪ್ಪಿಸಿದೆ. ಸಮಿತಿಯಲ್ಲಿರುವ ಕೆಲವು ಜನಪ್ರತಿನಿಧಿಗಳು ಕಾರ್ಪೊರೇಟ್ ಆಸ್ಪತ್ರೆಗಳ ಮಾಲಕರು, ಹತ್ತಿರುವ ಸಂಬಂಧಿಕರು ಆಗಿದ್ದಾರೆ. ಹೀಗಾಗಿ ವಿಧೇಯಕ ಜಾರಿಗೆ ಜನಾಂದೋಲನದ ಮೂಲಕ ಸರಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ-2017 ಜಾರಿಯಾದರೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ಏಕಪ್ರಕಾರವಾದ ಶುಲ್ಕ ನಿಗದಿ ಪಡಿಸಲಾಗುತ್ತದೆ. ಇದರಿಂದ ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳಿಗೆ ಸಮಸ್ಯೆಗಳಾಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ಸತ್ಯವಾದುದ್ದಲ್ಲ. ಆಯಾ ಆಸ್ಪತ್ರೆಗಳ ಗುಣಮಟ್ಟ, ಸೇವಾ ಸೌಲಭ್ಯವನ್ನು ನೋಡಿಕೊಂಡು ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಯಾವ ಆಸ್ಪತ್ರೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದರು.
ಸಾಮಾಜಿಕ ಕಾರ್ಯಕರ್ತರಾಗಿರುವ ಸಂಶೋಧಕ ಪ್ರೇಮ್‌ದಾಸ್ ಮಾತನಾಡಿ, ದೇಶದಲ್ಲಿ ಖಾಸಗಿ ಕ್ಷೇತ್ರದಲ್ಲಿ ಮಿತಿಮೀರಿ ಬೆಳೆಯುತ್ತಿದೆ. ಇದರಿಂದ ಜನತೆಯ ಮೂಲಭೂತ ಹಕ್ಕು ನಶಿಸುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರವು ಸೇರಿದಂತೆ ಪ್ರತಿಯೊಂದು ಖಾಸಗಿ ಕ್ಷೇತ್ರವನ್ನು ಸಂವಿಧಾನದ ಚೌಕಟ್ಟಿಗೆ ತರಬೇಕಾಗಿದೆ. ಇದರ ಮೊದಲ ಮೆಟ್ಟಿಲಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಜಾರಿಯಾಗಬೇಕಾಗಿದೆ ಎಂದು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜನಾರೋಗ್ಯ ಚಳವಳಿಯ ವಿನಯ್, ಸಾಮಾಜಿಕ ಕಾರ್ಯಕರ್ತ ಶ್ರೀಪಾದ್ ಭಟ್, ಕರ್ನಾಟಕ ಜನಶಕ್ತಿಯ ವಾಸು, ಲಂಚ ಮುಕ್ತ ಕರ್ನಾಟಕದ ಮುಖಂಡ ರವಿಕೃಷ್ಣರೆಡ್ಡಿ, ಮಾನವ ಹಕ್ಕು ಹೋರಾಟಗಾರ ನಗರಗೆರೆ ರಮೇಶ್ ಮತ್ತಿತರರಿದ್ದರು.