ಪ್ರಸ್ತುತ ಸಾಲಿನ ಶುಲ್ಕ ಪಡೆದು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳಲು ಹೈಕೋರ್ಟ್ ಆದೇಶ

Update: 2017-06-27 16:08 GMT

ಬೆಂಗಳೂರು, ಜೂ.27: ಕಳೆದ ಶೈಕ್ಷಣಿಕ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಶುಲ್ಕ ಪಡೆಯದೆ, ಪ್ರಸ್ತುತ ಸಾಲಿನ ತ್ರೈಮಾಸಿಕ ಅವಧಿಯ ಶುಲ್ಕ ಪಡೆದು 68 ವಿದ್ಯಾರ್ಥಿಗಳನ್ನು ಆಯಾ ತರಗತಿಗಳಿಗೆ ದಾಖಲಿಸಿಕೊಳ್ಳುವಂತೆ ಸುಂಕದಕಟ್ಟೆಯ ವಿದ್ಯಾನಿಕೇತನ ಹೈಸ್ಕೂಲ್‌ಗೆ ಏಕಸದಸ್ಯ ಪೀಠ ಮಾಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ಮಂಗಳವಾರ ತಡೆಯಾಜ್ಞೆ ನೀಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿದ್ಯಾನಿಕೇತನ ಹೈಸ್ಕೂಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.

ಅಲ್ಲದೆ, ಪ್ರತಿವಾದಿಗಳಾದ 68 ವಿದ್ಯಾರ್ಥಿಗಳು, ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ರಾಜಾಜಿನಗರದ 2ನೇ ಹಂತದ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ.
  
ವಿದ್ಯಾನಿಕೇತನ ಹೈಸ್ಕೂಲ್ ಹೆಚ್ಚಿನ ಶುಲ್ಕ ನಿಗದಿಪಡಿಸಿದೆ. ಶುಲ್ಕ ಪಾವತಿಸಲು ನಿರಾಕರಿಸಿದ ಕಾರಣಕ್ಕೆ ತಮಗೆ ಪ್ರವೇಶವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಗಗನ್ ಗೌಡ ಮತ್ತು ದರ್ಶನ್ ಗೌಡ ಸೇರಿದಂತೆ 68 ವಿದ್ಯಾರ್ಥಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಸಂಬಂಧ ಇದೇ ಜೂನ್ 8ರಂದು ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಕಳೆದ ವರ್ಷ ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿರುವ ಶುಲ್ಕವನ್ನು ಪಡೆಯದೆ, ಪ್ರಸ್ತುತ ಸಾಲಿನ ತ್ರೈಮಾಸಿಕ ಅವಧಿಗೆ ಮಾತ್ರ ಶುಲ್ಕ ಪಡೆದು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬೇಕು. ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವು ಅಂತಿಮವಾಗಿ ನಿಗದಿಪಡಿಸಿದ ಶುಲ್ಕದ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಶಾಲೆ ಪಡೆದುಕೊಳ್ಳಬೇಕು ಎಂದು ನಿರ್ದೇಶಿಸಿತ್ತು.


ಈ ಆದೇಶ ಪ್ರಶ್ನಿಸಿ ಶಾಲೆಯು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿದ್ಯಾರ್ಥಿಗಳು ಕಳೆದ ವರ್ಷದ ಶುಲ್ಕವನ್ನೇ ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ ಮತ್ತೆ ತ್ರೈಮಾಸಿಕ ಅವಧಿಗೆ ಮಾತ್ರ ಶುಲ್ಕ ಪಡೆದರೆ ಶಾಲೆಯ ಮೇಲೆ ಸುಮಾರು 25 ಲಕ್ಷ ರೂ.ವರೆಗೆ ಆರ್ಥಿಕ ಹೊರೆ ಬೀಳಲಿದೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ನೀಡಲಾಗದು. ಮೇಲಾಗಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಅಧಿಕಾರಿ ನಮ್ಮ ಶಾಲೆಯ ಶುಲ್ಕ ನಿಗದಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಏಕಸದಸ್ಯ ಪೀಠ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಶಾಲೆ ಅರ್ಜಿಯಲ್ಲಿ ಕೋರಿತ್ತು. ಈ ಮನವಿಯನ್ನು ವಿಭಾಗೀಯ ಪೀಠ ಪುರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News