ಕಾರ್ಪೊರೇಟ್ ಕೈಯಲ್ಲಿ ಕೇಂದ್ರ ಸರಕಾರ: ಎಚ್.ಡಿ.ದೇವೇಗೌಡ

Update: 2017-06-27 16:32 GMT

ಬೆಂಗಳೂರು, ಜೂ.27: ಕೇಂದ್ರ ಸರಕಾರವು ಕಾರ್ಪೊರೇಟ್ ವಲಯದ ಕೈಯಲ್ಲಿದ್ದು, ತುರ್ತು ಪರಿಸ್ಥಿತಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಇಂದಿಲ್ಲಿ ಹೇಳಿದ್ದಾರೆ.

ಮಂಗಳವಾರ ನಗರದ ಗಾಂಧಿಭವನದಲ್ಲಿ ಲೋಕನಾಯಕ ಜೆಪಿ ವಿಚಾರ ವೇದಿಕೆ, ಯುನೈಟೆಡ್ ಲಾಯರ್ಸ್‌ ಫೋರಂ ಹಾಗೂ ಲಾರೆನ್ಸ್ ಫೆರ್ನಾಂಡೀಸ್ ವೇದಿಕೆ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ವಿರೋಧಿ ದಿನ, 'ಭಾರತದ ಪ್ರಜಾಪ್ರಭುತ್ವ, ಅಂದು-ಇಂದು' ಕುರಿತ ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರಕಾರ ಕಾರ್ಪೊರೇಟ್ ವಲಯದ ಕೈಯಲ್ಲಿದ್ದು, ತುರ್ತು ಪರಿಸ್ಥಿತಿ ಬರುವ ಸಾಧ್ಯತೆ ಇಲ್ಲ. ಅಲ್ಲದೆ, ನಾವು ಎಂದಿಗೂ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲಿಲ್ಲ. ಎಷ್ಟೇ ಭ್ರಷ್ಟ ವ್ಯಕ್ತಿ ರಾಜಕಾರಣಕ್ಕೆ ಬಂದರೂ ಹಿಂದೆ ಸರಿಯದೆ, ಉತ್ತಮ ರೀತಿಯಲ್ಲಿ ಜನ ಸೇವೆ ಮಾಡಲು ಪ್ರಯತ್ನಿಸುತ್ತೇವೆ. ಅಲ್ಲದೆ, ಇದುವರೆಗೆ ಯಾವುದೇ ಒಂದು ನಿರ್ದಿಷ್ಟ ಸೈದ್ಧಾಂತಿಕ ನಿಲುವನ್ನು ಹೊಂದಲಿಲ್ಲ ಎಂದು ದೇವೇಗೌಡ ನುಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಏಕಾಏಕಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಅಲ್ಲದೆ, ಪೊಲೀಸ್ ಶಕ್ತಿಯ ಮೂಲಕ ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇದರಿಂದ ರಾಷ್ಟ್ರೀಯ ಪಕ್ಷಗಳು ಪಕ್ಷ ಸಂಘಟನೆಗಾಗಿ ಹಾಗೂ ಶಕ್ತಿ ಬಲಪಡಿಸಲು ಅನೈತಿಕ ರಾಜಕರಣ ಮಾಡಲು ಹಿಂದೇಟು ಹಾಕುವುದಿಲ್ಲ ಎಂದು ತಿಳಿಯಲಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕರ್ನಾಟಕ ತಬ್ಬಲಿ ರಾಜ್ಯ: ಒಕ್ಕೂಟ ವ್ಯವಸ್ಥೆಯಲ್ಲಿ ಕಾವೇರಿ ಮತ್ತು ಮಹಾದಾಯಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ದೊರೆತಿಲ್ಲ. ಕರ್ನಾಟಕವೂ ಇದೀಗ ತಬ್ಬಲಿ ರಾಜ್ಯವಾಗಿದೆ. ರೈಲ್ವೇ, ನೀರಾವರಿ ಯೋಜನೆ ಸೇರಿ ಇನ್ನಿತರೆ ವಿಷಯಗಳಲ್ಲೂ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್(ಚಂಪಾ) ಮಾತನಾಡಿ, ಲಿಂಗಾಯುತರು ದಲಿತರ ಮನೆಗೆ ಹೋಗಿ ಬಾಹ್ಮಣರ ಊಟ ತಿನ್ನುತ್ತಾರೆ. ಅಂದಿನ ತುರ್ತು ಪರಿಸ್ಥಿತಿ ಹಾಗೂ ಇಂದಿನ ಪರಿಸ್ಥಿತಿಯನ್ನು ಒಂದು ನೆಲೆಯಲ್ಲಿ ಮಾತ್ರ ಹೋಲಿಕೆ ಮಾಡುತ್ತೇವೆ. ಅಂದು ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆದರೆ ಇಂದು ಘೋಷಿಸಿಲ್ಲ ಎಂಬುದು ಮಾತ್ರ ವ್ಯತ್ಯಾಸ ಎಂದು ಹೇಳಿದರು.

ಸರಕಾರದಲ್ಲಿ ಧರ್ಮ ಅಥವಾ ಅದರ ಮೌಲ್ಯಗಳನ್ನು ಸ್ಥಾಪನೆ ಮಾಡಿ ಅಧಿಕಾರ ಚಲಾವಣೆ ಮಾಡುವುದು ಉತ್ತಮ ಆಡಳಿತವಲ್ಲ. ಏಕತೆ ದೇಶದ ತತ್ವವಾಗಿದ್ದು, ಬಸವಣ್ಣನ ತತ್ವಗಳನ್ನು ಅನುಸರಿಸಿಕೊಂಡು ಹೋಗುವ ನಮ್ಮ ನಡುವೆ ಜಾತಿಗಳನ್ನು ತಂದು, ವೈಮನಸ್ಯ ಮೂಡುವಂತೆ ಮಾಡುವುದು ಸರಿಯಲ್ಲ. ಸರ್ವಾಧಿಕಾರ ಹಾಗೂ ತುರ್ತು ಪರಿಸ್ಥಿತಿಗೆ ಎಡೆಮಾಡಿಕೊಟ್ಟರೆ ಹಿರಿಯರು ಮಾಡಿದ ಶ್ರಮ ವ್ಯರ್ಥವಾಗುತ್ತದೆ ಎಂದು ವಿವರಿಸಿದರು.

ಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದವರೂ ಸಹ ಸರ್ವಾಧಿಕಾರಿ ದಾರಿ ಹಿಡಿಯುತ್ತಿರುವುದನ್ನು ಖಂಡಿಸಬೇಕು. ತುರ್ತು ಪರಿಸ್ಥಿತಿ ಬರೆ ಇತಿಹಾಸವಲ್ಲ, ಬದಲಾಗಿ ಇಂದಿಗೂ ನಮ್ಮನ್ನು ಕಾಡುತ್ತಿರುವ ಭೂತ. ಇಂದು ಆಹಾರದ ಮೇಲೂ ಕೆಲ ಸಂಘಟನೆಗಳು ದಬ್ಬಾಳಿಕೆ ನಡೆಸುತ್ತಿದ್ದು, ಕೆಲ ಪ್ರದೇಶಗಳ ಆಹಾರ ಪದ್ದತಿಯನ್ನು ನಿಷೇಧಿಸಬೇಕು ಎಂದು ಒತ್ತಡ ಹೇರುತ್ತಿರುವುದು ಸರಿಯಲ್ಲ. ಬೀಫ್ ಸೇವಿಸುವುದರ ವಿರುದ್ಧ ಪ್ರಮೋದ್ ಮುತಾಲಿಕ್‌ನಂತಹ ಮೂಲಭೂತವಾದಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ. ಇಂತಹ ವಿಚಾರಗಳ ಬಗ್ಗೆ ಜನ ಹೋರಾಟ ಮಾಡಬೇಕಾಗಿದೆ ಎಂದು ಚಂಪಾ ನುಡಿದರು.

ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ.ನಾಡಗೌಡ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಆರ್.ದಯಾನಂದ್, ಎ.ಪಿ.ರಂಗನಾಥ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News